ಕೊಪ್ಪಳ| ರೈತ ಸಂಪರ್ಕ ಕೇಂದ್ರದಲ್ಲಿ ಧೂಳು ತಿನ್ನುತ್ತಿರುವ ಕೃಷಿ ಪರಿಕರಗಳು: ಅರ್ಹ ಫಲಾನುಭವಿಗಳಿಗೆ ತಲುಪಿಸುವಂತೆ ಆಗ್ರಹ
Update: 2026-05-19 18:25 IST
ಕನಕಗಿರಿ: ಪಟ್ಟಣದ ಚಿದನಂದ ಅವುದೂತರ ಮಠದಲ್ಲಿರುವ ರೈತ ಸಂಪರ್ಕ ಕೇಂದ್ರ ಕಚೇರಿಯಲ್ಲಿ ರೈತರಿಗೆ ವಿತರಿಸಬೇಕಾದ ಕೃಷಿ ಪರಿಕರಗಳು, ಹನಿ ನೀರಾವರಿ ಪೈಪ್‌ಗಳು, ಟಾರ್ಪಾಲ್‌ಗಳು ಹಾಗೂ ಸಾವಿರಾರು ಬಾಕ್ಸ್‌ಗಳು ಬಳಕೆಯಾಗದೆ ಧೂಳು ಹಿಡಿದಿದೆ. ಆದರೆ ರೈತರಿಗೆ ಸೌಲಭ್ಯ ನೀಡಲಾಗಿಲ್ಲ ಎಂದು ಆರೋಪ ಕೇಳಿ ಬಂದಿದೆ.
ಗೋಡೆ ಮೇಲೆ ತೋಟಗಾರಿಕೆ ಇಲಾಖೆಯ ಸಹಾಯಧನದ ವಿವರ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಫಲಕಗಳು ನೇತಾಡುತ್ತಿದ್ದರೂ, ನೆಲದ ಮೇಲೆ ಹಸಿರು ಪೈಪ್‌ಗಳು, ಕಪ್ಪು ಟಾರ್ಪಾಲ್ ಕಂತೆಗಳು ಬಳಕೆಯಾಗದೆ ಬಿದ್ದಿರುವುದು ಕಂಡುಬಂದಿದೆ. ರೈತರಿಗೆ ಸಕಾಲಕ್ಕೆ ಸೌಲಭ್ಯ ಸಿಗದೆ ಗೋದಾಮಿನಲ್ಲೇ ಕೊಳೆಯುತ್ತಿವೆ ಎಂದು ರೈತ ಪಂಪಾಣ್ಣ ನಾಯಕ ದೂರಿದ್ದಾರೆ.
ಮುಂಗಾರು ಆರಂಭವಾಗಿದ್ದು, ಈಗಲೇ ಈ ಪರಿಕರಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ವಿತರಣೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.