Koppal | 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ(AI)
ಗಂಗಾವತಿ: ತಾಲೂಕಿನ ಬಾಪಿರೆಡ್ಡಿ ಕ್ಯಾಂಪ್ ಸಮೀಪದ ಗ್ರಾಮವೊಂದರಲ್ಲಿ ಎಂಟು ವರ್ಷದ ಬಾಲಕಿ ಮೇಲೆ 60 ವರ್ಷದ ವ್ಯಕ್ತಿಯೊಬ್ಬರು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಘಟನೆ ಶನಿವಾರ ಸಂಜೆ ನಡೆದಿದ್ದು, ಬಳಿಕ ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಎನ್ನಲಾಗಿದೆ. ಘಟನೆ ಗ್ರಾಮದಲ್ಲಿ ತಿಳಿಯುತ್ತಿದ್ದಂತೆ ಆರೋಪಿ ಎಂದು ಗುರುತಿಸಲಾಗಿರುವ ರಾಮಾಂಜನೇಯ ಸುಬ್ಬಾರಾವ್ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ರವಿವಾರ ನೂರಾರು ಗ್ರಾಮಸ್ಥರು ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿದ್ದರು. ಆರಂಭದಲ್ಲಿ ಬಾಲಕಿಯ ಪೋಷಕರು ದೂರು ನೀಡಲು ಹಿಂದೇಟು ಹಾಕಿದ್ದರೆನ್ನಲಾಗಿದ್ದು, ಬಳಿಕ ಸಾರ್ವಜನಿಕರ ಮನವೊಲಿಕೆಯ ನಂತರ ಬಾಲಕಿಯ ತಾಯಿ ಸೋಮವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ..