Koppal | ಅಕ್ರಮ ಮರಳುಗಾರಿಕೆ ತಡೆಗಟ್ಟದಿದ್ದರೆ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆ: ದಲಿತ ಸಂಘರ್ಷ ಸಮಿತಿ ಎಚ್ಚರಿಕೆ
ಕೊಪ್ಪಳ: ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ಅನಧಿಕೃತ ಮರಳು ದಾಸ್ತಾನು ಹಾಗೂ ಮಾರಾಟದ ದಂಧೆಯನ್ನು ತಕ್ಷಣವೇ ತಡೆಗಟ್ಟಬೇಕು. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಮಾರ್ಗ) ಎಚ್ಚರಿಕೆ ನೀಡಿದೆ.
ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ಎಂ. ನಾರಾಯಣ, ಕೊಪ್ಪಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಕೆಳಗಿನಮನಿ, ಜಿಲ್ಲಾ ಕಾರ್ಯದರ್ಶಿ ಮುತ್ತಪ್ಪ ಎಂ.ಎಚ್. ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ವಿವಿಧ ಭಾಗಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಾನೂನುಬಾಹಿರ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ನದಿ ಪಾತ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತ ಮರಳು ದಾಸ್ತಾನು ಮತ್ತು ಮಾರಾಟ ಕೇಂದ್ರಗಳು ತಲೆ ಎತ್ತಿವೆ. ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಈ ದಂಧೆ ನಡೆಯುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳು ಪರಿಣಾಮಕಾರಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಘಟನೆ ಮನವಿಯಲ್ಲಿ ಆರೋಪಿಸಿದೆ.
ಅಕ್ರಮ ಮರಳುಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ರಾಜಧನ ನಷ್ಟವಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಲೂಟಿಯ ಜೊತೆಗೆ ಪರಿಸರದ ಸಮತೋಲನವೂ ಹದಗೆಡುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುವ ಆತಂಕ ಎದುರಾಗಿದೆ. ಅಲ್ಲದೆ, ಭಾರಿ ವಾಹನಗಳ ಅನಧಿಕೃತ ಸಂಚಾರದಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಗೂ ಅಪಾಯ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಜಿಲ್ಲೆಯಲ್ಲಿರುವ ಎಲ್ಲ ಅನಧಿಕೃತ ಮರಳು ಸಂಗ್ರಹ ಮತ್ತು ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಬೇಕು. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿರುವ ಪ್ರಭಾವಿ ವ್ಯಕ್ತಿಗಳು ಹಾಗೂ ಅವರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸುವವರ ವಿರುದ್ಧವೂ ನಿಷ್ಪಕ್ಷಪಾತವಾಗಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ, ಪರಿಸರ ಸಂರಕ್ಷಣೆ ಹಾಗೂ ಸರ್ಕಾರದ ರಾಜಧನದ ರಕ್ಷಣೆ ದೃಷ್ಟಿಯಿಂದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು. ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಮಾರ್ಗ) ವತಿಯಿಂದ ಜಿಲ್ಲಾದ್ಯಂತ ತೀವ್ರ ಹೋರಾಟ ರೂಪಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ.