ಕುಕನೂರು: ಬಸವಣ್ಣನವರು 12ನೇ ಶತಮಾನದಲ್ಲಿಯೇ ಜಗತ್ತಿಗೆ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಮಹಾನ್ ಮಾನವತಾವಾದಿ. ಅವರ ವ್ಯಕ್ತಿತ್ವ ಹಾಗೂ ತತ್ವಾದರ್ಶಗಳಿಗೆ ಅಪಮಾನವಾಗುವ ಯಾವುದೇ ವಿಚಾರಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಮಹಾದೇವ ಸ್ವಾಮೀಜಿ ಹೇಳಿದರು.

ಲೇಖಕ ರವಿ ಹಂಜ್ ಅವರ ‘ಬಸವ ಮಂಟಪ’ ಕೃತಿಗೆ ಸಂಬಂಧಿಸಿದಂತೆ ಉಂಟಾಗಿರುವ ವಿವಾದದ ಕುರಿತು ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಸವಣ್ಣನವರ ವ್ಯಕ್ತಿತ್ವ, ತತ್ವಾದರ್ಶ ಹಾಗೂ ವಚನ ಸಾಹಿತ್ಯದ ಘನತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಸಂಶೋಧನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ಮಹಾನ್ ವ್ಯಕ್ತಿಗಳ ಘನತೆ, ಗೌರವ ಹಾಗೂ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಬಸವಣ್ಣನವರ ಜೀವನ, ವ್ಯಕ್ತಿತ್ವ ಮತ್ತು ಶರಣ ಪರಂಪರೆಯ ಕುರಿತು ಬರೆಯುವಾಗ ಲೇಖಕರು ಜವಾಬ್ದಾರಿ ಹಾಗೂ ಸಂಯಮದಿಂದ ನಡೆದುಕೊಳ್ಳಬೇಕು. ವಚನ ಸಾಹಿತ್ಯ, ಐತಿಹಾಸಿಕ ದಾಖಲೆಗಳು ಮತ್ತು ಸಂಶೋಧನಾ ಆಧಾರಗಳಿಗೆ ಮಹತ್ವ ನೀಡಬೇಕು ಎಂದು ಹೇಳಿದ್ದಾರೆ.

ಜಾತಿ, ಮತ, ವರ್ಗಗಳ ಭೇದವನ್ನು ಮೀರಿ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರು ಅನುಭವ ಮಂಟಪದ ಮೂಲಕ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಿದ್ದರು. ‘ಕಾಯಕವೇ ಕೈಲಾಸ’, ‘ದಾಸೋಹವೇ ಧರ್ಮ’ ಎಂಬ ಉದಾತ್ತ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದ್ದರು. ಇಂತಹ ಮಹಾನ್ ಶರಣರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ವಿಚಾರಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ವಿವಾದದ ಕುರಿತು ಸರ್ಕಾರ ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ಸೂಕ್ತ ಪರಿಶೀಲನೆ ನಡೆಸಿ ನ್ಯಾಯಯುತ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಯಾವುದೇ ವ್ಯಕ್ತಿಯ ವಿರುದ್ಧ ವೈಯಕ್ತಿಕ ದ್ವೇಷ, ಬೆದರಿಕೆ ಅಥವಾ ಹಿಂಸಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಬಾರದು. ಭಿನ್ನಾಭಿಪ್ರಾಯಗಳಿಗೆ ವಿಚಾರ, ದಾಖಲೆ ಮತ್ತು ಸಂವಾದದ ಮೂಲಕ ಉತ್ತರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಬಸವಣ್ಣನವರ ವಿಚಾರಧಾರೆ ವಿಶ್ವಮಾನವ ಸಂದೇಶವಾಗಿದ್ದು, ವಚನ ಸಾಹಿತ್ಯದ ಮೌಲ್ಯ ಹಾಗೂ ಶರಣ ಸಂಸ್ಕೃತಿಯ ಘನತೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮಹಾದೇವ ಸ್ವಾಮೀಜಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮುಹಮ್ಮದ್ ಅಖೀಲ್ ಉಡೇವು/ವಾರ್ತಾಭಾರತಿ

ಕೊಪ್ಪಳ ಜಿಲ್ಲಾ ವರದಿಗಾರರು

ಎಂ.ಡಿ.ಅಖೀಲ್ ಉಡೇವು ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೋದ್ಯಮದಲ್ಲಿ ಆಸಕ್ತಿ ಹೊಂದಿರುವ ಇವರು, ಪತ್ರಿಕೆಗಳ ಪುಟವಿನ್ಯಾಸ ಹಾಗೂ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡು ಅನುಭವಗಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೊಪ್ಪಳ ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಐತಿಹಾಸಿಕ ಸ್ಮಾರಕಗಳು ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ವಿಷಯಗಳ ವರದಿಗಾರಿಕೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ