Yelburga | ಜಮೀನಿನಲ್ಲಿ ಬೆಳೆದಿದ್ದ 4 ಕ್ವಿಂಟಾಲ್ ಮೆಕ್ಕೆಜೋಳದ ತೆನೆ ಕಳವು
ಯಲಬುರ್ಗಾ: ತಾಲೂಕಿನ ಬೇವೂರು ಸೀಮಾ ವ್ಯಾಪ್ತಿಯ ಮ್ಯಾದನೇರಿ ಮಾರ್ಗದ ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ಬೆಳೆದಿದ್ದ ಸುಮಾರು 3ರಿಂದ 4 ಕ್ವಿಂಟಾಲ್ ಮೆಕ್ಕೆಜೋಳದ ತೆನೆಗಳನ್ನು ಕಳ್ಳರು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸರ್ವೇ ನಂಬರ್ 201ರಲ್ಲಿ ಹನಮಪ್ಪ ಹಿರೇಮನಿ ಅವರಿಗೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಈ ಕಳ್ಳತನ ನಡೆದಿದೆ. ಸುಮಾರು 12ರಿಂದ 15 ಸಾವಿರ ರೂ. ಮೌಲ್ಯದ ಮೆಕ್ಕೆಜೋಳದ ತೆನೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಅಂದಾಜಿಸಲಾಗಿದೆ.
ಘಟನೆ ನಡೆದು ಐದಾರು ದಿನಗಳಾಗಿದ್ದು, ಭಾನುವಾರ ಜಮೀನಿನ ಮಾಲೀಕರು ಕೂಲಿ ಕಾರ್ಮಿಕರನ್ನು ಕರೆದುಕೊಂಡು ತೆನೆ ಮುರಿಯಲು ಹೋದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಮಾಹಿತಿ ತಿಳಿದ ಬೇವೂರು ಪೊಲೀಸ್ ಠಾಣೆಯ ಎಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಷ್ಟಪಟ್ಟು ಬೆಳೆದ ಬೆಳೆಯನ್ನೇ ಕಳ್ಳರು ಕದ್ದೊಯ್ದಿರುವುದರಿಂದ ರೈತ ಹನಮಪ್ಪ ಹಿರೇಮನಿ ಅವರಿಗೆ ನಷ್ಟ ಉಂಟಾಗಿದೆ. ಜಮೀನುಗಳಲ್ಲಿ ಬೆಳೆ ಕಳ್ಳತನ ತಡೆಯಲು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.