ಕುಕನೂರು: ಡಿಜೆ ಕಾರ್ಯಕ್ರಮ ವೀಕ್ಷಿಸಲು ತೆರಳಿದ್ದ ಬೆದವಟ್ಟಿ ಗ್ರಾಮದ ಯುವಕ ಎರಡು ದಿನಗಳ ಬಳಿಕ ಹೊಲದ ಬಾವಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತರನ್ನು ಬೆದವಟ್ಟಿ ಗ್ರಾಮದ ಪ್ರಸಾದ್ (24) ಎಂದು ಗುರುತಿಸಲಾಗಿದೆ.

ಸೆ.30ರ ರಾತ್ರಿ ಕುಕನೂರಿನಲ್ಲಿ ನಡೆದ ಡಿಜೆ ಕಾರ್ಯಕ್ರಮಕ್ಕೆ ಪ್ರಸಾದ್ ತೆರಳಿದ್ದರು ಎನ್ನಲಾಗಿದೆ. ಕಾರ್ಯಕ್ರಮದ ಬಳಿಕ ಅವರು ಮನೆಗೆ ಮರಳಿರಲಿಲ್ಲ. ಅ. 2ರಂದು ಬೆಳಿಗ್ಗೆ ತಿಪ್ಪರಸನಾಳ–ಅರಿಕೇರಿ ರಸ್ತೆ ಮಧ್ಯದಲ್ಲಿರುವ ಈಶಪ್ಪ ಕಲಬುರಗಿ ಅವರ ಹೊಲದ ಬಾವಿಯ ಮೋಟರ್ ಚಾಲು ಮಾಡಲು ತೆರಳಿದ್ದಾಗ ಬಾವಿಯಲ್ಲಿ ಮೃತದೇಹ ಕಂಡುಬಂದಿದೆ.

ಮಾಹಿತಿ ತಿಳಿದು ಪೊಲೀಸರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರ ನೇತೃತ್ವದಲ್ಲಿ ಗ್ರಾಮಸ್ಥರು ಹಗ್ಗದ ಸಹಾಯದಿಂದ ಮೃತದೇಹವನ್ನು ಬಾವಿಯಿಂದ ಹೊರತೆಗೆದು, ಕುಕನೂರು ಸಮುದಾಯ ಆರೋಗ್ಯ ಕೇಂದ್ರದ ಶವಪರೀಕ್ಷಾ ಕೊಠಡಿಗೆ ಕಳುಹಿಸಿದ್ದಾರೆ.

ಪ್ರಸಾದ್ ಕಳೆದ ಒಂದು ವರ್ಷದಿಂದ ಶಿರೂರು ರಸ್ತೆಯಲ್ಲಿರುವ ಮಲ್ಲಿಕಾರ್ಜುನ ಹುಲ್ಲೂರು ಅವರ ಡಾಬಾದಲ್ಲಿ ಕೆಲಸ ಮಾಡುತ್ತಿದ್ದರು. ನಿಂಗಪ್ಪ ಅವರ ನಾಲ್ವರು ಮಕ್ಕಳ ಪೈಕಿ ಪ್ರಸಾದ್ ಹಿರಿಯ ಮಗನಾಗಿದ್ದರು ಎನ್ನಲಾಗಿದೆ.

ಯುವಕ ಬಾವಿಗೆ ಬಿದ್ದಿರುವುದು ಹೇಗೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಡಿಜೆ ಕಾರ್ಯಕ್ರಮಕ್ಕೆ ತೆರಳಿದ ಬಳಿಕ ನಡೆದ ಬೆಳವಣಿಗೆಗಳ ಬಗ್ಗೆಯೂ ನಿಖರ ಮಾಹಿತಿ ಲಭ್ಯವಾಗಬೇಕಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳದಲ್ಲಿ ಪಂಚನಾಮೆ ನಡೆಸಲಿದ್ದಾರೆ. ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪೊಲೀಸ್ ತನಿಖೆಯಿಂದ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor