ಡಿಕೆಶಿ ಮುಂದೆ ಸಿಎಂ ಆಗಲಿ ಎಂಬುದು ನನ್ನ ಆಸೆ : ಸಚಿವ ಝಮೀರ್ ಅಹ್ಮದ್
"ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ"
ಕೊಪ್ಪಳ : ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಡಿ.ಕೆ.ಶಿವಕುಮಾರ್ ಕಾರಣ. ಮುಂದೆ ಅವರು ಕೂಡ ಸಿಎಂ ಆಗಲಿ ಎಂಬುದು ನನ್ನ ಆಸೆ ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಅವರು ಹೇಳಿದರು.
ರವಿವಾರದಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರ ಮನೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನವಂಬರ್‌ನಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ. ಇದು ಬಿಜೆಪಿಯವರ ಕಲ್ಪನೆ ಮಾತ್ರ. ಅಂತಹದ್ದು ಏನು ಇಲ್ಲ ಎಂದು ಹೇಳಿದರು.
ಮುಖ್ಯಮಂತ್ರಿಯವರ ಖುರ್ಚಿ ಖಾಲಿ ಇಲ್ಲ, ಕೆಪಿಸಿಸಿ ಅಧ್ಷಕ್ಷರ ಹುದ್ದೆಯೂ ಖಾಲಿ ಇಲ್ಲ, ಮುಂದಿನ 2028 ರವರೆಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಹೇಳಿದರು.
ಸತೀಶ್ ಜಾರಿಕಿಹೊಳಿ ಅವರು ದೆಹಲಿಗೆ ಹೋಗಿರುವುದು ನನಗೆ ಗೊತ್ತಿಲ್ಲ, ಮುಂದಿನ ಚುನಾವಣೆಯೂ ಸಿದ್ದರಾಮಯ್ಯ ನೇತೃತ್ವದಲ್ಲಿ ಹೋಗುತ್ತೇವೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಹೈಕಮಾಂಡ್ ನಿರ್ಧಾರ ಅಂತಿಮ ಎಂದರು.
ತಾವು ಡಿಸಿಎಂ ಆಗುತ್ತಿರಾ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಯಾವುದೇ ಸ್ಥಾನ ಬೇಡ ನಿವು ಪಕ್ಷದ ಕೆಲಸ ಮಾಡಿ ಎಂದರೆ ಅದನ್ನು ಕೂಡ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಆದಿಲ್ ಪಟೇಲ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.