×
Ad

Koppala | NEET re-exam: ಪರೀಕ್ಷೆ ಆರಂಭಕ್ಕೆ 5 ನಿಮಿಷವಿರುವಾಗ ಆಗಮಿಸಿದ ವಿದ್ಯಾರ್ಥಿನಿಗೆ ಅವಕಾಶ ನಿರಾಕರಣೆ

Update: 2026-06-21 15:53 IST

ಕೊಪ್ಪಳ: ವಾಹನ ಕೈಕೊಟ್ಟ ಕಾರಣ ನೀಟ್ ಮರು ಪರೀಕ್ಷೆ ಶುರುವಾಗಲು ಐದು ನಿಮಿಷವಿದ್ದ ವೇಳೆ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿನಿಯೊಬ್ಬಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದ ಘಟನೆ ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಜೂ.21ರಂದು ನಡೆದಿದೆ.

ಬೀಬಿ ಫಾತಿಮಾ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿನಿ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು 1:30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕಿತ್ತು. 2 ಗಂಟೆಗೆ ಪರೀಕ್ಷೆ ಆರಂಭ. ವಿದ್ಯಾರ್ಥಿನಿ ಬೀಬಿ ಫಾತಿಮಾ ಗಂಗಾವತಿ ನಗರದ ನಿವಾಸಿಯಾಗಿದ್ದು, ಅಲ್ಲಿಂದ ಕೊಪ್ಪಳದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ಹೊರಟಿದ್ದರು. ಆದರೆ ದಾರಿಮಧ್ಯೆ ಅವರು ಸಂಚರಿಸುತ್ತಿದ್ದ ವಾಹನ ಕೆಟ್ಟು ನಿಂತಿದ್ದರಿಂದ ಪರೀಕ್ಷಾ ಕೇಂದ್ರಕ್ಕೆ ತಲುಪಿದಾಗ ಸಮಯ 1:55 ಆಗಿತ್ತು.

ಈ ವೇಳೆ ಬೀಬಿ ಫಾತಿಮಾರನ್ನು ಪರೀಕ್ಷಾ ಕೇಂದ್ರದ ಗೇಟ್ ನಲ್ಲಿದ್ದ ಪೊಲೀಸರು ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ. ಆದರೆ ನಿಗದಿತ ಅವಧಿಗಿಂತ ತಡವಾಗಿದ್ದರಿಂದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಬೀಬಿ ಫಾತಿಮಾರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ ವಾಪಸ್ ಕಳುಹಿಸಿದ್ದಾರೆ.

"ಪರೀಕ್ಷೆಯ ಪ್ರಶ್ನೆಪತ್ರಿಕೆ 2:15ಕ್ಕೆ ನೀಡುತ್ತಾರೆ. ನಾನು 1:55ಕ್ಕೆ ಗೇಟ್ ಬಳಿ ಇದ್ದೆ. ನನಗೆ ಅವಕಾಶ ನೀಡಿ" ಎಂದು ವಿದ್ಯಾರ್ಥಿನಿ ಪರಿಪರಿಯಾಗಿ ಬೇಡಿಕೊಂಡರೂ ಅಲ್ಲಿನ ಸಿಬ್ಬಂದಿ ಅವಕಾಶ ನೀಡಿಲ್ಲ ಎಂದು ಪೋಷಕರು ದೂರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News