Kanakagiri | ಕಾಂಗ್ರೆಸ್ ಸರ್ಕಾರದಲ್ಲಿ ಅಕ್ರಮ ದಂಧೆ ಮಿತಿಮೀರಿದೆ : ಕನಕಪ್ಪ ಚಲುವಾದಿ ಆರೋಪ
ಕನಕಗಿರಿ: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ, ಇಸ್ಪೀಟ್ ಹಾಗೂ ಮಟ್ಕಾ ದಂಧೆಗಳು ಮಿತಿ ಮೀರಿದ್ದು, ಇದರಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಚುಳುವಾದಿ ಆರೋಪಿಸಿದರು.
ಪಟ್ಟಣದ ನವಲಿ ರಸ್ತೆಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬಸ್ ನಿಲ್ದಾಣ ಇದ್ದರೂ ಸಮರ್ಪಕ ಬಸ್ ಸೌಲಭ್ಯ ಇಲ್ಲದ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅಪಾಯಕಾರಿಯಾಗಿ ಬಸ್‌ನಲ್ಲಿ ನೇತಾಡಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ತೀವ್ರವಾಗಿದ್ದು, ರೋಗಿಗಳು ಚಿಕಿತ್ಸೆಗಾಗಿ ಗಂಗಾವತಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಬಡವರು ಬಸ್ ಹಾಗೂ ಖಾಸಗಿ ಆಂಬುಲೆನ್ಸ್‌ಗೆ ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ವೆಂಕಟಪತಿ ಬಾವಿ ಅಭಿವೃದ್ಧಿಗೆ ಕೆಕೆಆರ್‌ಡಿಬಿ ಅನುದಾನದಡಿ ಮಂಜೂರಾದ 100 ಕೋಟಿ ರೂಪಾಯಿ ದುರುಪಯೋಗವಾಗಿದೆ ಎಂದು ಗಂಭೀರ ಆರೋಪ ಮಾಡಿದ ಅವರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ಗಳ ಅಭಿವೃದ್ಧಿಗೆ ಸಮರ್ಪಕ ಅನುದಾನವಿಲ್ಲ. ಕಾಂಗ್ರೆಸ್ ಕಚೇರಿ ಮುಂಭಾಗದ ರಸ್ತೆಯನ್ನೇ ಅಭಿವೃದ್ಧಿಪಡಿಸಿಲ್ಲ. ಕನಕಾಚಲಪತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಶೌಚಾಲಯ ವ್ಯವಸ್ಥೆಯೂ ಇಲ್ಲ ಎಂದು ಟೀಕಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮಂಡಲ ಉಪಾಧ್ಯಕ್ಷ ನಿಂಗಪ್ಪ ನಾಯಕ ಹಾಗೂ ಪ್ರಧಾನ ಕಾರ್ಯದರ್ಶಿ ಗ್ಯಾನಪ್ಪ ಖ್ಯಾಡೇದ, ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕಾರ್ಯಕರ್ತರ ಬಗ್ಗೆ ಮಾತನಾಡುವ ನೈತಿಕತೆ ಹೊಂದಿಲ್ಲ. ಬಿಜೆಪಿ ಪಕ್ಷದಿಂದಲೇ ರಾಜಕೀಯವಾಗಿ ಬೆಳೆದಿರುವುದನ್ನು ಅವರು ಮರೆಯಬಾರದು ಎಂದು ವಾಗ್ದಾಳಿ ನಡೆಸಿದರು.
ಅಲ್ಲದೆ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಲಿಯಲಿ ಎಂದು ಸವಾಲು ಹಾಕಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಾಗೇಶ ಹಿರೇಮಠ, ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಹುಲಿಗೇಮ್ಮ ನಾಯಕ, ಮಂಡಲ ಉಪಾಧ್ಯಕ್ಷರಾದ ರಂಗಪ್ಪ ಕೊರಟಗಿ, ಬಸವನಗೌಡ, ಪ.ಪಂ. ಸದಸ್ಯ ಸುರೇಶ ಗುಗ್ಗಳಶೆಟ್ಟಿ, ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡದ, ತಾಲ್ಲೂಕು ಮಹಾಶಕ್ತಿ ಕೇಂದ್ರ ಅಧ್ಯಕ್ಷ ಶಿವಕುಮಾರ ಕೋರಿ, ಪ್ರಮುಖರಾದ ನಿಂಗಪ್ಪ, ಬೀಮನಗೌಡ, ಕರಿಬಸಪ್ಪ, ರಾಚಪ್ಪ ಬ್ಯಾಳಿ, ಯುವ ಮುಂದಾಳು ವಿನಾಯಕ ಚಿತ್ತರಕಿ ಸೇರಿದಂತೆ ಇತರರು ಇದ್ದರು.