×
Ad

ನೀರು, ರೈತರ ವಿಚಾರದಲ್ಲಿ ರಾಜಕೀಯ‌ ಮಾಡಬಾರದು : ಸಚಿವ ಶಿವರಾಜ್ ತಂಗಡಗಿ

Update: 2025-11-17 18:07 IST

ಗಂಗಾವತಿ/ಕೊಪ್ಪಳ: ನ.17: ನೀರು ಮತ್ತು ರೈತರ ವಿಚಾರದಲ್ಲಿ ಯಾರು ಕೂಡ ರಾಜಕೀಯ ಮಾಡಬಾರದು, ವಾಸ್ತವ ಸ್ಥಿತಿ ತಿಳಿದು ಮಾತನಾಡಲಿ. ಅನಗತ್ಯ ರಾಜಕೀಯ ಮಾಡುತ್ತಿರುವ ಬಿಜೆಪಿಗರಿಗೆ ಮಾನ, ಮಾರ್ಯದೆ ಇಲ್ಲ‌ ಎಂದು ಜಿಲ್ಲಾ ಉಸ್ತುವಾರಿ ಸಚಿವ‌ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದ್ದಾರೆ.

ಗಂಗಾವತಿಯಲ್ಲಿ ಸೋಮವಾರ ಮಾತನಾಡಿದ ಅವರು, ನಾವೇನು ರೈತರ ವಿರೋಧಿಗಳಾ? ಯಾರೇ ಆದರೂ ರೈತರ ಬಗ್ಗೆ ಕಾಳಜಿ ಮಾಡುತ್ತಾರೆ. ಇಂದು ನಾವು ತುಂಗಭದ್ರಾ ಅಣೆಕಟ್ಟೆಯ ಗೇಟ್ ಬದಲಾವಣೆ ಮಾಡಿದರೆ, ಮುಂದೆ ಇನ್ನು ರೈತರು ನೂರು ಬೆಳೆ ಬೆಳೆಯಬಹುದು.‌ ಸುಮಾರು ನೂರು ವರ್ಷಗಳ ಕಾಲ ಅಣೆಕಟ್ಟೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದರು.

ನಾವು ತಪ್ಪು ಮಾಡಿದರೆ ಆ ಬಗ್ಗೆ ಟೀಕೆ ಮಾಡಲಿ. ವಾಸ್ತವ ಸತ್ಯ ತಿಳಿದು ಮಾತನಾಡಲಿ. ಅಣೆಕಟ್ಟೆ ಕೇಂದ್ರ ಸರ್ಕಾರದ ಅಡಿಯಲ್ಲಿ ಬರಲಿದೆ.‌ ಕೇಂದ್ರ ಸರ್ಕಾರ ಡ್ಯಾಂನಲ್ಲಿ‌ 80 ಟಿಎಂಸಿಗಿಂತ ಹೆಚ್ಚು ನೀರು ಸಂಗ್ರಹ ಮಾಡಬಾರದು ಎಂದು ಸಲಹೆ ನೀಡಿತ್ತು. ಹೆಚ್ಚು ನೀರು ಸಂಗ್ರಹ ಮಾಡಿದರೆ ಸಮಸ್ಯೆ ಆಗಲಿದೆ ಎಂದು ಹೇಳಿತ್ತು. ಅಣೆಕಟ್ಟಿನ ರಕ್ಷಣೆ ದೃಷ್ಟಿಯಿಂದ ಗೇಟ್ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಉಪಮುಖ್ಯಮಂತ್ರಿಗಳಾದ ಜಲಸಂಪನ್ಮೂಲ‌ ಸಚಿವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ನಾಲ್ಕು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆದಾಗ ಎಲ್ಲರೂ ಒಪ್ಪಿದ್ದಾರೆ‌. ಖುದ್ದು ಬಿಜೆಪಿ‌ ಶಾಸಕ ಜನಾರ್ದನ್ ರೆಡ್ಡಿ ಅವರೇ ಈ‌ ಕಾರ್ಯ ಕೈಗೊಂಡಿರುವ ಸರ್ಕಾರದ ಕ್ರಮಕ್ಕೆ ಅಭಿನಂದನೆ ಸಲ್ಲಿಸಿದ್ದರು. ಹೀಗಿದ್ದು, ನಿಮ್ಮ ಪಕ್ಷದ ಮುಖಂಡರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವರು ವೇದಿಯಲ್ಲಿದ್ದ ಜನಾರ್ದನ್ ರೆಡ್ಡಿ ಅವರಿಗೆ ಸೂಕ್ಷ್ಮವಾಗಿ ಹೇಳಿದರು.

ದುಷ್ಟ ಶಕ್ತಿಗಳ ಕೈವಾಡ :

ಒಂದು‌ ಬೆಳೆ ಬೆಳೆಯಲು ಸುಮಾರು 55ರಿಂದ 60 ಟಿಎಂಸಿ‌ ನೀರು‌ಬೇಕಾಗುತ್ತದೆ. ದುಷ್ಟ ಶಕ್ತಿಗಳು‌ ಇದರ ಹಿಂದೆ ಕೆಲಸ ಮಾಡುತ್ತವೆ. ಅದಕ್ಕೆ ಜನ ತಕ್ಕ ಉತ್ತರ ಕೊಡಬೇಕು. ಅಧಿಕಾರ ಮತ್ತು ಅಂತಸ್ತು ಎಂದಿಗೂ ಶಾಶ್ವತವಲ್ಲ. ನಾವು ಮಾಡಿದ ಕೆಲಸಗಳು ಶಾಶ್ವತ ಎಂದು ತಿಳಿಸಿದರು.

ಯಾವುದೇ ಟೀಕೆ-ಟಿಪ್ಪಣಿಗಳನ್ನು ಮಾಡಿದರೂ ಅಂತಿಮವಾಗಿ ಎಲ್ಲರು ಚಿಂತನೆ ಮಾಡುವುದು ಜನರ ಅಭಿವೃದ್ಧಿ ಬಗ್ಗೆ ಮಾತ್ರ. ಕೆಲ ಮಂದಿ‌ ಜನರ ಮನಸ್ಸು ಕೆಡಿಸುವ ಕೆಲಸ ಮಾಡುತ್ತಾರೆ. ಅದಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂದರು.

ಎರಡನೇ ಬೆಳೆಗೆ ನೀರು ಕೊಡದಿದ್ದರೆ, ಶ್ರೀರಾಮುಲು ಅವರು ಡ್ಯಾಂಗೆ ಜಿಗಿಯುತ್ತೇನೆ ಎಂದು ಹೇಳಿದ್ದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ದಯವಿಟ್ಟು ಆತ ನನ್ನ ಹಿರಿಯ ಸಹೋದರ ಇದ್ದಂತೆ. ಡ್ಯಾಂಗೆ ಜಿಗಿಯುವುದು ಬೇಡ. ವಾಸ್ತವ ಸ್ಥಿತಿ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.

ಮಾಜಿ ಶಾಸಕ ಬಸವರಾಜ್ ದಡೇಸಗೂರ್ ಅವರು ಕೂಡ ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸದ ಅವರು, ಅವರಿಗೆ ಮಾಹಿತಿ ಇಲ್ಲ. ಜೊತೆಗೆ ಇರುವವರು ಅವರಿಗೆ ಸೂಕ್ತ ಮಾಹಿತಿ ನೀಡಲಿ. ಅವರಿಗೆಲ್ಲ ಕೆಲಸ ಇಲ್ಲದಂತಾಗಿದೆ. ಇದೀಗ ಆ ಮೂವರು ಹಸಿರು ಟವೆಲ್ ಮೊರೆ ಹೋಗಿದ್ದಾರೆ. ರೈತರ ಪರವಾಗಿ ಯಾರ್ಯಾರು ಎಷ್ಟೆಷ್ಟು ಹೋರಾಟ ನಡೆಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.

ಆ ಮೂವರು ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸದ ಅವರು, ಅವರ ಹೆಸರು ಹೇಳಿದರೆ ಅವರಿನ್ನೂ ದೊಡ್ಡವರಾಗುತ್ತಾರೆ ಎಂದು ಹೇಳಿದರು.

ಆನೆಗುಂದಿ ಉತ್ಸವದ ಪ್ರಸ್ತಾವನೆ ಸಲ್ಲಿಕೆ :

ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ಸವಗಳನ್ನು ನಡೆಸಲಾಗುತ್ತದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ‌ ನೀಡಲಾಗಿದೆ. ಆನೆಗುಂದಿ‌ ಉತ್ಸವದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಲ್ಲಿಸಿದ್ದಾರೆ. ಈ‌ ಬಾರಿ ಆನೆಗುಂದಿ ಉತ್ಸವ ನಡೆಸಲಾಗುವುದು ಎಂದು‌ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News