ನೇತ್ರದಾನ ಕುರಿತು ಕನಕಗಿರಿಯಲ್ಲಿ ಜನಜಾಗೃತಿ ಜಾಥಾ
ಕನಕಗಿರಿ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಶ್ರೀ ಕನಕಾಚಲ ಛಾಯಾಗ್ರಾಹಕ ಹಾಗೂ ವಿಡಿಯೋಗ್ರಾಫರ್ ಸಂಘ, ಎಂ.ಎಂ. ಜೋಷಿ ನೇತ್ರ ವಿಜ್ಞಾನ ಸಂಸ್ಥೆ ಹಾಗೂ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಿಯು ಕಾಲೇಜಿನ ಸಹಯೋಗದಲ್ಲಿ ನೇತ್ರದಾನದ ಕುರಿತು ಜನಜಾಗೃತಿ ಜಾಥಾ ಗುರುವಾರ ನಡೆಯಿತು.
ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ, ನೇತ್ರದಾನ ಮಹಾದಾನ. ಕಣ್ಣುಗಳ ಮೂಲಕವೇ ಸುಂದರ ಜಗತ್ತನ್ನು ನೋಡಲು ಸಾಧ್ಯವಾಗುತ್ತದೆ. ನೇತ್ರದಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳಬೇಕು. ಇಂದಿನ ಯುವಕರಿಗೆ ನಟ ದಿವಂಗತ ಪುನೀತ್ ರಾಜಕುಮಾರ್ ಅವರ ನೇತ್ರದಾನ ಪ್ರೇರಣೆಯಾಗಿದೆ ಎಂದರು.
ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ವಾಗೀಶ ಹಿರೇಮಠ ಮಾತನಾಡಿ, ಕಣ್ಣು ಮನುಷ್ಯನ ಪ್ರಮುಖ ಅಂಗವಾಗಿದ್ದು, ಪ್ರತಿಯೊಬ್ಬರೂ ತಮ್ಮ ಕಣ್ಣುಗಳ ಸುರಕ್ಷತೆ ಹಾಗೂ ನೇತ್ರದಾನದ ಮಹತ್ವದ ಕುರಿತು ಜಾಗೃತಿ ಹೊಂದಬೇಕು ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಹರೀಶ ಪೂಜಾರ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಹನುಮೇಶ ಭಜಂತ್ರಿ . ನಗರ ಘಟಕದ ಅಧ್ಯಕ್ಷ ಬಸವರಾಜ ಕೋರಿ ಮಾತನಾಡಿದರು.
ಛಾಯಗ್ರಾಹಕರ ಸಂಘದ ಗಂಗಾಧರ ಭೋವಿ, ಪ್ರಮುಖರಾದ ಖಾದರಬಾಷ, ಶರಣಪ್ಪ ಸೋಮಶೇಖರ, ವೆಂಕಟೇಶ ಬಲಿಜ, ನಾಗರಾಜ, ಬಸವರಾಜ ಇತರರು ಇದ್ದರು.