×
Ad

ಕರ್ನಾಟಕದ ಈ ಊರಲ್ಲಿದೆ ಖೊಮೇನಿ ಹೆಸರಿನ ಆಸ್ಪತ್ರೆ

Update: 2025-06-19 19:19 IST

1986ರಲ್ಲಿ ಅಲೀಪುರಕ್ಕೆ ಭೇಟಿ ನೀಡಿದ್ದ ಆಯತೊಲ್ಲಾ ಅಲಿ ಖಾಮಿನೈ | PC : prajavani

ಚಿಕ್ಕಬಳ್ಳಾಪುರ ಜಿಲ್ಲೆಯ ಪುಟ್ಟ ಊರು ಅಲೀಪುರಕ್ಕೂ ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರಿಗೂ ಒಂದು ರೀತಿಯ ನಂಟು ಇದೆ. ಯಾಕೆಂದರೆ ಈ ಊರಿನಲ್ಲಿದೆ ರಿಪಬ್ಲಿಕ್ ಆಫ್ ಇರಾನ್ ನ ಮೊದಲ ಪರಮೋಚ್ಚ ನಾಯಕನ ಹೆಸರಿನ ಆಸ್ಪತ್ರೆ. 

ಇರಾನ್‌ ಇಸ್ರೇಲ್ ನಡುವೆ ಸಂಘರ್ಷ ತೀವ್ರವಾಗುತ್ತಿದ್ದರೆ, ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಅಲೀಪುರ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗುತ್ತಿದೆ. ಅಲೀಪುರ ಮತ್ತು ಇರಾನ್‌ ನಡುವೆ ಹಲವು ದಶಕಗಳ ಆತ್ಮೀಯ ಸಂಬಂಧ ಇದೆ.

ಅಲೀಪುರದ ನೂರಕ್ಕೂ ಹೆಚ್ಚು ಜನರು, ವಿದ್ಯಾರ್ಥಿಗಳು ಇರಾನ್‌ನಲ್ಲಿ ನೆಲೆಸಿದ್ದಾರೆ. ಹಾಗಾಗಿ ಈ ಗ್ರಾಮದ ಜನರಿಗೆ ಇರಾನ್‌ ನೊಂದಿಗೆ ಒಡನಾಟ, ಬಾಂಧವ್ಯ ಹೆಚ್ಚು. ಇರಾನ್‌ ಮತ್ತು ಇಸ್ರೇಲ್‌ ಸಂಘರ್ಷದ ಕ್ಷಣ, ಕ್ಷಣದ ಮಾಹಿತಿ, ಬೆಳವಣಿಗೆಗಳು ಈ ಗ್ರಾಮದ ಜನರನ್ನು ತಲುಪುತ್ತವೆ. 

ವೈದ್ಯಕೀಯ ಶಿಕ್ಷಣ, ಧಾರ್ಮಿಕ ಶಿಕ್ಷಣದ ಕಾರಣಕ್ಕೆ ಅಲೀಪುರದ ಶಿಯಾ ಮುಸ್ಲಿಮರಿಗೆ ಇರಾನ್ ಅಚ್ಚುಮೆಚ್ಚಿನ ತಾಣ. 20 ಸಾವಿರ ಜನಸಂಖ್ಯೆಯ ಅಲೀಪುರದಲ್ಲಿ ಶಿಯಾ ಮುಸ್ಲಿಮರದ್ದೇ ಪ್ರಾಬಲ್ಯ. ಇರಾನ್‌ ತಮ್ಮ ಪವಿತ್ರ ಧಾರ್ಮಿಕ ಭೂಮಿ ಎನ್ನುವ ಪೂಜ್ಯ ಭಾವನೆ ಇಲ್ಲಿನ ಜನರದ್ದು.

ಇರಾನ್‌ನ ಈಗಿನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಧಾರ್ಮಿಕ ಆದೇಶಗಳನ್ನು ಚಾಚೂ ತಪ್ಪದೆ ಪಾಲಿಸುವ ದೊಡ್ಡ ವರ್ಗವೇ ಇಲ್ಲಿದೆ. 1986ರಲ್ಲಿ ಇವತ್ತಿನ ಇರಾನ್ ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರು ಅಲೀಪುರಕ್ಕೆ ಭೇಟಿ ನೀಡಿದ್ದರು. ಇದು ಇರಾನ್ ಮತ್ತು ಅಲೀಪುರದ ಬಾಂಧವ್ಯಕ್ಕೆ ಸಾಕ್ಷಿ.

ಇಮಾಮ್ ಖೊಮೇನಿ ಹೆಸರಲ್ಲಿ ಅಲೀಪುರದಲ್ಲಿ ಒಂದು ಆಸ್ಪತ್ರೆ ಕೂಡಾ ಇದೆ. ಇದರ ಉದ್ಘಾಟನೆಗಾಗಿಯೇ ಖಾಮಿನೈ ಅವರು ಅಲೀಪುರಕ್ಕೆ ಬಂದಿದ್ದರು. ‘ಅಲೀಪುರದ ವರ್ತಕರು ಚಿನ್ನಾಭರಣ ವಜ್ರ ಹರಳು ವ್ಯಾಪಾರ ಮಾಡುತ್ತಾರೆ. ಆದರೆ ಇರಾನ್‌ ಜತೆ ವ್ಯಾಪಾರಕ್ಕಿಂತ ಧಾರ್ಮಿಕ ಸಂಬಂಧ ಗಾಢವಾಗಿ ಬೆಸೆದುಕೊಂಡಿದೆ. ಏಕೆಂದರೆ ಶಿಯಾ ಮುಸ್ಲಿಮರ ಪ್ರಮುಖ ಧಾರ್ಮಿಕ ಸ್ಥಳ ಮಶ್ ಹದ್ ಇರಾನ್‌ನಲ್ಲಿದೆ’ .

ಧಾರ್ಮಿಕ ಅಧ್ಯಯನಕ್ಕಾಗಿ ಗ್ರಾಮದ 50ಕ್ಕೂ ಹೆಚ್ಚು ಮಂದಿ ಇರಾನ್‌ನಲ್ಲಿ ನೆಲೆಸಿದ್ದಾರೆ. 15 ವಿದ್ಯಾರ್ಥಿಗಳು ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿದಿನ ಕರೆ ಮಾಡಿ ಬಂಧು ಬಾಂಧವರ ಯೋಗಕ್ಷೇಮ ವಿಚಾರಿಸುತ್ತಾರೆ ಎಂದು ಇಲ್ಲಿನ ಸ್ಥಳೀಯರು ಪ್ರಜಾವಾಣಿಗೆ ತಿಳಿಸಿದ್ದಾರೆ.

‘ನಾವು ಚಿಕ್ಕವರಾಗಿದ್ದಾಗ ಖಾಮಿನೈ ಅವರು ನಮ್ಮ ಊರಿಗೆ ಭೇಟಿ ನೀಡಿದ್ದರು. ಆಗಲೇ ಅಲೀಪುರವನ್ನು ಬೇಬಿ ಆಫ್ ಇರಾನ್ ಎನ್ನುತ್ತಿದ್ದರು’ ಎಂದು ಅಲೀಪುರದ ಆರಿ ಅಸ್ಕಿಲ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News