ʼದಲಿತರ ಭೂ ಕಬಳಿಕೆಗೆ ಕಬ್ಬಿನಕೆರೆ ಸವರ್ಣೀಯರ ಸಂಚುʼ : ಅಧಿಕಾರಿಗಳೇ ಶಾಮೀಲಾಗಿರುವ ಆರೋಪ
ನಾಗಮಂಗಲ : ದಶಕಗಳ ಮಾಲಕತ್ವದ ದಲಿತರ ಭೂಮಿ ಕಬಳಿಕೆಗೆ ತಾಲೂಕಿನ ಕಬ್ಬಿನಕೆರೆ ಗ್ರಾಮದ ಸವರ್ಣೀಯರು ಮಾಡಿರುವ ಷಡ್ಯಂತ್ರಕ್ಕೆ ತಾಲೂಕು ಆಡಳಿತವೇ ಕುಮ್ಮಕ್ಕು ನೀಡುತ್ತಿರುವ ಆರೋಪ ಕೇಳಿಬಂದಿದ್ದು ಸಂತ್ರಸ್ತ ದಲಿತ ಕುಟುಂಬಗಳು ಜಮೀನಿನಲ್ಲೇ ಧರಣಿ ನಡೆಸಿ ತಮ್ಮ ನ್ಯಾಯಬದ್ಧ ಹಕ್ಕಿಗೆ ಅಂಗಲಾಚಿರುವ ಘಟನೆ ವರದಿಯಾಗಿದೆ.
ತಾಲೂಕಿನ ಬೆಳ್ಳೂರು ಹೋಬಳಿ ಕಬ್ಬಿನ ಕೆರೆ ಗ್ರಾಮದ ಸ.ನಂ 21 ರಲ್ಲಿ ತಲಾ 4,3,2 ಎಕರೆಯಂತೆ ಮೂರು ದಲಿತ ಕುಟುಂಬಗಳಿಗೆ 1963-64 ರಲ್ಲಿ ಕಾನೂನುಬದ್ಧ ಜಮೀನು ಮಂಜೂರಾಗಿದೆ ಎನ್ನಲಾಗಿದೆ. ಆದರೆ ಜಮೀನು ವ್ಯವಸಾಯಕ್ಕೆ ಸದರಿ ಗ್ರಾಮದ ಸವರ್ಣಿಯರು ಅಡ್ಡಿ ಪಡಿಸುತ್ತಾ ಬಂದು. ಎರಡು ಜನಾಂಗದ ನಡುವೆ ಸಂಘರ್ಷ ಮುಂದುವರಿದಿತ್ತು.
ದಲಿತರೇ ಭೂ ಮಾಲಕರು: ಕೋರ್ಟ್ ಆದೇಶ
ಇದರಿಂದ ಬೇಸತ್ತ ದಲಿತ ಕುಟುಂಬಗಳು 2001ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. 2006ರಲ್ಲಿ ದಲಿತ ಕುಟುಂಬಗಳೇ ಭೂಮಾಲಕರಾಗಿದ್ದು, ಬೆಳೆ ಕೊಯ್ಲಿಗೆ ಯಾರು ತೊಂದರೆ ಕೊಡಬಾರದು ಎಂದು ನ್ಯಾಯಾಲಯ ಆದೇಶ ನೀಡಿತ್ತು ಎಂದು ಧರಣಿ ನಿರತ ಸಂತ್ರಸ್ತ ದಲಿತ ಕುಟುಂಬಗಳ ವಾದವಾಗಿದೆ.
ದಲಿತರ ಭೂ ಕಬಳಿಕೆಗೆ ತಾಲೂಕು ಆಡಳಿತವೇ ಶಾಮೀಲು: ಎಲ್ಲ ದಾಖಲೆಗಳು ದಲಿತರ ಪರವಾಗಿದ್ದು ಕೋರ್ಟ್ ಆದೇಶದಂತೆ ದಲಿತರಿಗೆ ಭೂಮಿ ಹಕ್ಕು ಕೊಡಿಸಬೇಕಿದ್ದ ತಹಶೀಲ್ದಾರ್ ಆದರ್ಶ ಎಂಬವರು, ಈಗ ನಿಮಗೆ ಕಬ್ಬಿನ ಕೆರೆ ಗ್ರಾಮದಲ್ಲಿನ ಭೂಮಿಗೆ ಬದಲಾಗಿ ಬೇರೊಂದು ಕಡೆ ಜಮೀನು ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ದಲಿತರ ಭೂಮಿ ಹಕ್ಕು ಕಸಿಯಲು ತಾಲೂಕು ಆಡಳಿತವೇ ಶಾಮೀಲು ಆಗಿದೆ ಎಂದು ದಲಿತ ಸಂಘಟನೆ ಮುಖಂಡ ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ.
ದೂರು ಕೊಟ್ಟರೂ ಕ್ರಮವಿಲ್ಲ
ನಮ್ಮ ಹಕ್ಕುಬದ್ಧ ಜಮೀನು ಉಳುಮೆಗೆ ಅಂದಿನಿಂದಲೂ ಬಲಾಡ್ಯ ಸವರ್ಣೀಯರು ಅಡ್ಡಿ ಪಡಿಸುತ್ತಿದ್ದಾರೆ. ರಾತ್ರೋರಾತ್ರಿ ನಮ್ಮ ಬೆಳೆ ನಾಶ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಎರಡು ಜನಾಂಗಗಳ ನಡುವೆ ಜಮೀನಿಗಾಗಿ ಗಲಾಟೆಗಳಾಗಿವೆ. ಈ ಬಗ್ಗೆ ಹತ್ತಾರು ಬಾರಿ ಬೆಳ್ಳೂರು ಪೋಲಿಸ್ ಠಾಣೆಗೆ ದೂರು ನೀಡಿದರೂ ಪ್ರಕರಣ ದಾಖಲು ಮಾಡಿಲ್ಲ, ತಹಶೀಲ್ದಾರ್‌ಗೆ ದೂರು ನೀಡಿದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ದಲಿತ ಕುಟುಂಬಗಳು ಆರೋಪಿಸಿವೆ.