Mandya | ಸ್ಟಿಂಗ್ ಆಪರೇಷನ್ ನಡೆಸಲು ಏಜೆನ್ಸಿಗಳ ಬಳಕೆ : ಪಿ.ರವಿಕುಮಾರ್ ಗಣಿಗ ಆರೋಪ
ಮಂಡ್ಯ : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಭಾವ ಕುಗ್ಗಿಸಿ ಸರಕಾರಕ್ಕೆ ಮುಜುಗರ ಉಂಟುಮಾಡಲು ನಮ್ಮ ಸರಕಾರದ ಹತ್ತು ಸಚಿವರು ಹಾಗೂ ಆಯಕಟ್ಟಿನ ಕೆಲವು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲು ಎರಡು ಏಜೆನ್ಸಿಗಳನ್ನು ಬಳಸಿಕೊಂಡಿರುವ ಮಾಹಿತಿ ತಮ್ಮ ಬಳಿ ಇದೆ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ಆರೋಪಿಸಿದ್ದಾರೆ.
ಶುಕ್ರವಾರ ತನ್ನ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಫೋಟೊ, ಆಡಿಯೊ ವೀಡಿಯೊ, ಸಿಸಿಟಿವಿ ದೃಶ್ಯಾವಳಿ ಮುಂತಾದ ದಾಖಲೆಗಳಿರುವ ಪೆನ್‌ಡ್ರೈವ್ ಪ್ರದರ್ಶಿಸಿ ಮಾತನಾಡಿದ ಅವರು, ಶೀಘ್ರದಲ್ಲೇ ಅವುಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುವುದಾಗಿ ಹೇಳಿದರು.
ಸ್ಟಿಂಗ್ ಆಪರೇಷನ್ ನಡೆಸಲು ದಿಲ್ಲಿ ಮತ್ತು ಕೊಲ್ಕತ್ತಾ ಮೂಲದ ಏಜೆನ್ಸಿಗಳಿಗೆ ಹಣ ಪಾವತಿಸಲಾಗಿದೆ. ಎಷ್ಟು ಹಣ ಪಾವತಿಸಲಾಗಿದೆ? ಯಾರು ಪಾವತಿಸಿದರು? ಇದರ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ. ಈ ಸಂಚಿನಲ್ಲಿ ಕೇಂದ್ರ ಸಚಿವ ಹಾಗೂ ರಾಜ್ಯದ ಬಿಜೆಪಿ ನಾಯಕರೊಬ್ಬರು ಇದ್ದಾರೆ ಎಂದು ಅವರು ಆರೋಪಿಸಿದರು.
ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಏಜೆನ್ಸಿಗೆ ವಾಸ್ತವ್ಯ ಕಲ್ಪಿಸಿ, ಹಣ ಪಾವತಿಸಿರುವ ಸಂಪೂರ್ಣ ದಾಖಲೆಗಳು ತಮ್ಮಲ್ಲಿವೆ. ಸದ್ಯದಲ್ಲೇ ದೂರು ನೀಡಿ ಎಲ್ಲಾ ದಾಖಲೆಗಳನ್ನು ತನಿಖಾಧಿಕಾರಿಗಳಿಗೆ ಒಪ್ಪಿಸುತ್ತೇನೆ ಎಂದು ಅವರು ಹೇಳಿದರು.
ರಮೇಶ ಜಾರಕಿಹೊಳಿ ಪ್ರಕರಣ ಸೇರಿದಂತೆ ಈ ಹಿಂದಿನ ಸೀಡಿ ಪ್ರಕರಣಗಳಿಗೆ ಬಿಜೆಪಿ ನಾಯಕರೇ ಬಂಡವಾಳ ಹೂಡಿದ್ದಾರೆ. ಮೈಸೂರಿನ ‘ಮುಡಾ’ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ದಾಖಲೆ ಪೂರೈಸಿದ್ದು ಯಾರ ಕಚೇರಿಯಿಂದ ಎಂಬುದು ಗೊತ್ತಿದೆ ಎಂದೂ ಅವರು ದೂರಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅನುಕಂಪದ ಮಾತನಾಡುವ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕರು, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಅವರ ಮೇಲೆ ಯಾವ ರೀತಿ ಪ್ರಹಾರ ನಡೆಸುತ್ತಿದ್ದರು ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಈಗ ಸಿದ್ದರಾಮಯ್ಯನವರ ಬಗ್ಗೆ ಅನುಕಂಪದ ಮಾತನಾಡಿದರೆ ಏನು ಪ್ರಯೋಜನ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ಗಣಿಗ ಟೀಕಿಸಿದರು.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ (ಮನ್‌ಮುಲ್) ನಡೆದಿರುವ ಹಾಲಿನ ಪುಡಿ ಕಲಬೆರಕೆ ಪ್ರಕರಣ ಸೇರಿದಂತೆ ಎಲ್ಲ ಪ್ರಮುಖ ಹಗರಣಗಳ ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು. ಹಾಲಿನ ಪುಡಿ ಕಲಬೆರಿಕೆ ಪ್ರಕರಣ ಮಾತ್ರವಲ್ಲದೆ, ಈ ಹಿಂದೆ ನಡೆದಿರುವ ಹಾಲು-ನೀರು ಮಿಶ್ರಣ, ಮೆಗಾ ಡೇರಿ ಕಾಮಗಾರಿ, ಅಕ್ರಮ ನೇಮಕಾತಿ ಸೇರಿದಂತೆ ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿಯವರಿಗೆ ಪತ್ರ ಬರೆಯುತ್ತೇನೆ. ಮನ್‌ಮುಲ್ ಅಕ್ರಮಗಳಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ.
-ಪಿ.ರವಿಕುಮಾರ್ ಗಣಿಗ, ಮಂಡ್ಯ ಶಾಸಕ