ಮಂಡ್ಯ: ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಪತಿ, ಪತ್ನಿ ಹಾಗೂ ಪುತ್ರಿ ಮೃತಪಟ್ಟ ದಾರುಣ ಘಟನೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.

ಮೂಲತಃ ಕೊಪ್ಪ ಗ್ರಾಮದ, ಪ್ರಸಕ್ತ ಬೆಂಗಳೂರು ನಿವಾಸಿಗಳಾದ ಮುತ್ತುರಾಜು (35), ಪತ್ನಿ ಕಾವ್ಯಾ (35) ಹಾಗೂ ಪುತ್ರಿ ಕೀರ್ತನಾ (8) ಮೃತಪಟ್ಟವರು. ದಂಪತಿಯ ಇನ್ನೊಂದು ಮಗು ತೀವ್ರವಾಗಿ ಗಾಯಗೊಂಡಿದೆ.

ಚೌತಿ ಹಬ್ಬದ ಪ್ರಯುಕ್ತ ಮುತ್ತುರಾಜು ಅವರು ಪತ್ನಿ ಮಕ್ಕಳೊಂದಿಗೆ ಸ್ವಗ್ರಾಮ ಕೊಪ್ಪಕ್ಕೆ ಆಗಮಿಸಿದ್ದರು. ಹಬ್ಬವನ್ನು ಮುಗಿಸಿಕೊಂಡು ಮಂಗಳವಾರ ಮುಂಜಾನೆ ಬೆಳಗ್ಗೆ ಐದರ ವೇಳೆ ಸ್ಕೂಟರ್ ನಲ್ಲಿ ಬೆಂಗಳೂರಿಗೆ ಮರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಹಾಲಿನ ಟ್ಯಾಂಕರ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಟ್ಯಾಂಕರ್ ಅನ್ನು ಅದರ ನಿಲ್ಲಿಸದೆ ಪರಾರಿಯಾಗಿದ್ದಾನೆ.

ತಂದೆ-ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಗಳು ಕೀರ್ತನಾ ಮಂಡ್ಯ ಮಿಮ್ಸ್ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾಳೆ. ತೀವ್ರ ಗಾಯಗೊಂಡಿರುವ ಇನ್ನೊಂದು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೊಪ್ಪ ಗ್ರಾಮದ ವರವಲಯದ ಮದ್ದೂರು ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ರಸ್ತೆ ಎದುರುಗಡೆ ಇರುವ ಪೆಟ್ರೋಲ್ ಬಂಕ್ ನ ಸಿಸಿಟಿವಿ ಕ್ಯಾಮೆರದಲ್ಲಿ ಭೀಕರ ದೃಶ್ಯ ಸೆರಿಯಾಗಿದೆ.

ಕೊಪ್ಪ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಪಘಾತಕ್ಕೆ ಕಾರಣವಾದ ಟ್ಯಾಂಕರ್ ಪತ್ತೆಗೆ ಕ್ರಮ ವಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor