ನೇಪಾಳದ ದುರ್ಘಟನೆ ಕೇವಲ ನೇಪಾಳಕ್ಕಷ್ಟೇ ಸೇರಿದ ಕಥೆಯಲ್ಲ. ಪಕ್ಕದ ಭೂತಾನ್ ಇದರಿಂದ ಕಲಿಯಬೇಕು. ಸಿಕ್ಕಿಂ ಕಲಿಯಬೇಕು. ಹಿಮಾಲಯದ ಪ್ರತಿಯೊಂದು ಕಣಿವೆಯೂ ಕಲಿಯಬೇಕು. ನಮ್ಮ ಕೊಡಗೂ ಕಲಿಯಬೇಕು! ಅಷ್ಟೇ ಅಲ್ಲ, ಹಿಮಾಲಯವೂ ಸೇರಿ ಬೆಟ್ಟ ಗುಡ್ಡ ಪರ್ವತಗಳನ್ನು ಅಭಿವೃದ್ಧಿಯ ಹೊಸ ಪ್ರಯೋಗಶಾಲೆಯನ್ನಾಗಿ ನೋಡುತ್ತಿರುವ ಸರಕಾರಗಳು ಮತ್ತು ಕಂಪೆನಿಗಳೂ ಇದರಿಂದ ಕಲಿಯಬೇಕು. ಪ್ರಕೃತಿಯೊಂದಿಗೆ ಪೈಪೋಟಿ ನಡೆಸಿ ಯಾವತ್ತೂ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ.

ನಿಂತ ಮನುಷ್ಯ ದೇಹದೊಳಗಿನ ಎಲುಬು ಮುರಿದು ಕೆಳಗೆ ಬೀಳುವುದಕ್ಕೂ, ಕೆಳಗೆ ಬಿದ್ದು ಎಲುಬು ಮುರಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಎರಡರಲ್ಲೂ ಪರಿಣಾಮ ಒಂದೇ. ಆದರೆ ಕಾರಣ ಒಂದೇ ಅಲ್ಲ. ಒಂದು ಒಳಗಿನಿಂದ ಕುಸಿದದ್ದು; ಮತ್ತೊಂದು ಹೊರಗಿನ ಹೊಡೆತಕ್ಕೆ ಆದದ್ದು. ನೇಪಾಳ-ಹಿಮಾಲಯದ ಇತ್ತೀಚಿನ ಪ್ರಾಕೃತಿಕ ವಿಪತ್ತು, ಬೆಳವಣಿಗೆಗಳನ್ನು ನೋಡಿದಾಗ ನನಗೆ ಮತ್ತೆ ಮತ್ತೆ ಈ ರೂಪಕವೇ ನೆನಪಾಗುತ್ತದೆ.

ಮೊದಲು ಅಲ್ಲಿ ಭೂಮಿನಡುಕವನ್ನು ಭೂಕಂಪ ಎಂದು ಭಾವಿಸಲಾಯಿತು. ನಂತರ ಅದು ಹಾಗಲ್ಲ, ಹಿಮದ ದೊಡ್ಡ ದೊಡ್ಡ ಗುಡ್ಡೆಗಳು, ಬಂಡೆಗಳು ಮತ್ತು ಭೂಕುಸಿತ ಕಣಿವೆಯ ಕಡೆಗೆ ಏಕಾಏಕಿ ಜರುಗಿದಾಗ ಉಂಟಾದ ಭಾರೀ ಆಘಾತ ಎಂದು ದೃಢಪಡಿಸಲಾಯಿತು. ಹಿಮ ಮತ್ತು ಕಲ್ಲುಗಳ ಕುಸಿತದಿಂದ ಕೆಳಭಾಗದಲ್ಲಿ ಸಂಗ್ರಹಗೊಂಡ ಹಿಮ ನೀರಿನ ಸರೋವರಗಳು ಕ್ಷಣಾರ್ಧದಲ್ಲಿ ಒಡೆದು ಚಿಮ್ಮಿದಾಗ ಆ ಕ್ಷಣಕ್ಕೆ ಅದು ಸಾಮಾನ್ಯ ಪ್ರವಾಹವಾಗಿರುವುದಿಲ್ಲ. ಶಿಖರಾಗ್ರದಿಂದ ಒಮ್ಮೆಲೆ ಕೆಳಕ್ಕೆ ಸುರಿಯುವ ನೀರಿಗೆ ಗುರುತ್ವಾಕರ್ಷಣೆಯ ವೇಗವೂ ಸೇರುತ್ತದೆ. ದಾರಿಯಲ್ಲಿ ಅಡ್ಡ ಸಿಕ್ಕ ಮರ, ಮನೆ, ಸೇತುವೆ, ರಸ್ತೆ, ವಿದ್ಯುತ್ ಘಟಕ, ಕೃಷಿಭೂಮಿ ಯಾವುದನ್ನೂ ಅದು ತನ್ನ ದಾರಿಗೆ ಅಡ್ಡಿ ಎಂದು ಪರಿಗಣಿಸುವುದಿಲ್ಲ. ಆಗ ಅದು ಬರೀ ನೀರಿನ ಪ್ರವಾಹವಲ್ಲ; ಬೆಟ್ಟದ ಎತ್ತರದಲ್ಲಿ ಸಂಗ್ರಹವಾಗಿದ್ದ ಶಕ್ತಿಯೊಂದು ಏಕಾಏಕಿ ಕಣಿವೆಯ ಕಡೆಗೆ ಧಾವಿಸುವುದು.

ಬರೀ ನೇಪಾಳವಷ್ಟೇ ಅಲ್ಲ, ಹಿಮಾಲಯದ ಒಡಲಲ್ಲಿ ಇಂತಹ ಅನೇಕ ಅಪಾಯಗಳಿವೆ. ಭೂತಾನ್, ಸಿಕ್ಕಿಂ, ಟಿಬೆಟ್ ಮತ್ತು ಚೀನಾದ ಅಂಚುಗಳೂ ಇದೇ ಭೌಗೋಳಿಕ ಸತ್ಯದೊಳಗೆ ಬರುತ್ತವೆ. ಅಲ್ಲಿ ಹಿಮ ಕರಗುವುದು ಹೊಸ ಸಂಗತಿಯಲ್ಲ. ಸಾವಿರಾರು ವರ್ಷಗಳಿಂದ ಅದು ಕರಗುತ್ತಲೇ ಇದೆ. ತಾಪಮಾನ ಏರಿಕೆಯ ಈ ಕಾಲದಲ್ಲಿ ಕರಗುವಿಕೆಯ ವೇಗ ಮತ್ತು ಅದರ ಪರಿಣಾಮಗಳ ಬಗ್ಗೆ ಹೊಸದಾಗಿ ಯೋಚಿಸಬೇಕಾಗಿದೆ. ಹಿಮನದಿ ಕೆಲವೊಮ್ಮೆ ಹಿಮ, ಕಲ್ಲು ಮತ್ತು ಮಣ್ಣಿನ ನೈಸರ್ಗಿಕ ಅಣೆಕಟ್ಟಿನ ನಡುವೆ ಹರಿಯಲಾರದೆ ಸಿಕ್ಕಿಹಾಕಿಕೊಳ್ಳುತ್ತದೆ. ಹಾಗೆ ಹಿಮಸರೋವರದಲ್ಲಿ ನೀರು ತುಂಬುತ್ತಾ ಹೋದಂತೆ ಸುತ್ತಲಿನ ಪ್ರದೇಶಕ್ಕೆ ಅಪಾಯ ಹೆಚ್ಚುತ್ತಾ ಹೋಗುತ್ತದೆ.

ಒಂದು ದಿನ ಮೇಲಿನ ಹಿಮಗುಡ್ಡೆ ಬಿರಿದು ಬಿದ್ದರೆ ಸಾಕು, ತಕ್ಷಣ ಅಜ್ಞಾತ ಕಣಿವೆಯಲ್ಲಿ ನಡೆದ ಘಟನೆ ಕೆಳಗಿನ ಹಳ್ಳಿಗಳಿಗೆ ಪ್ರವಾಹವಾಗಿ ತಲುಪುತ್ತದೆ. ಯಾರಿಗೂ ಕಾಣದ ಈ ಪ್ರಾಕೃತಿಕ ಬದಲಾವಣೆ, ಅನಿರೀಕ್ಷಿತವಾಗಿ ಕೆಳಗಿನ ಜನರಿಗೆ ಬದುಕು-ಸಾವಿನ ಪ್ರಶ್ನೆಯಾಗುತ್ತದೆ. ಗುಡ್ಡಗಾಡು ಪ್ರದೇಶದಲ್ಲಿ ಬದುಕುವ ಬುಡಕಟ್ಟು ಜನಾಂಗದವರು ಪ್ರತೀ ವರ್ಷ ಭೂಮಿಯನ್ನು ಆಕ್ರಮಿಸುತ್ತ ಬೆಟ್ಟದ ಮೇಲೆಲ್ಲ ವಸತಿ, ಕೃಷಿ, ಪ್ರವಾಸೋದ್ಯಮದ ಆವಿಷ್ಕಾರಗಳನ್ನು ವಿಸ್ತರಿಸುತ್ತಾ ಹೋಗುತ್ತಾರೆ. ಇದೂ ಒಂದು ಕಾರಣವಾಗಿ ಆ ಬೆಟ್ಟ ತನ್ನದೇ ರೀತಿಯಲ್ಲಿ ಕೆಳಗೆ ಜಾರುತ್ತಲೇ ಇರುತ್ತದೆ. ಅಲ್ಲಿ ಬದುಕು ವವರಿಗೆ ರಸ್ತೆ ಬೇಕು, ವಿದ್ಯುತ್ ಬೇಕು, ಪ್ರವಾಸೋದ್ಯಮ ಬೇಕು, ಜಲವಿದ್ಯುತ್ ಬೇಕು, ಸೇತುವೆ ಬೇಕು, ಸುರಂಗ ಬೇಕು, ಕಿರು ಅಣೆಕಟ್ಟು ಬೇಕು, ಅಭಿವೃದ್ಧಿ ಬೇಕು.... ಇವೆಲ್ಲವೂ ಬೇಕೇ ಬೇಕು. ಆದರೆ ಹಿಮಾಲಯದಲ್ಲಿ ಬೇಕಾದದ್ದು ಮತ್ತು ಸಾಧ್ಯವಾದದ್ದು ಒಂದೇ ಅಲ್ಲ ಎಂಬುದನ್ನು ಅಲ್ಲಿಯ ಜನ ಯಾವತ್ತೂ ಮರೆಯಬಾರದು!

ಹರಿಯುವ ನೀರಿಗೆ ಅಡ್ಡವಾಗಿ ಕಟ್ಟುವ ಪ್ರತಿಯೊಂದು ಅಣೆಕಟ್ಟೂ ಕೂಡ ತಪ್ಪು, ಅವೈಜ್ಞಾನಿಕ ಎಂದು ಹೇಳಲಾಗದು. ಮನುಷ್ಯ ಚಲನೆಗೆ ಕಾರಣವಾಗುವ ಪ್ರತಿಯೊಂದು ರಸ್ತೆ ಕೂಡ ಪರಿಸರ ವಿರೋಧಿ ಎಂದು ಹೇಳಲಾಗದು. ಆದರೆ ಹಿಮಾಲಯದ ಸ್ವಭಾವ ಮಾತ್ರ ಬೇರೆಯೇ. ಅಲ್ಲೆಲ್ಲ ‘ಬುದ್ಧಿವಂತ ಮನುಷ್ಯ’ ಇಳಿಜಾರು, ಮಣ್ಣಿನ ಸ್ಥಿತಿ, ಹಿಮದ ಚಲನೆ, ನೀರಿನ ಸಹಜ ಹರಿವು, ಭೂಕುಸಿತದ ಇತಿಹಾಸ ಇವೆಲ್ಲವನ್ನೂ ಕಡೆಗಣಿಸಿ ಅಭಿವೃದ್ಧಿಯ ನಕ್ಷೆ ಬಿಡಿಸಿದರೆ, ಪ್ರಕೃತಿಯ ಅಪಾಯ ಸಹಜವಾಗಿಯೇ ಕಡಿಮೆಯಾಗುವುದಿಲ್ಲ.

ಅಷ್ಟು ದೂರ ಯಾಕೆ ನಮ್ಮ ಪಕ್ಕದ ಕೊಡಗೇ ಇರಬಹುದು, ಚಿಕ್ಕಮಗಳೂರು ಇರಬಹುದು, ಕಡಿದಾದ ಏರುಬೆಟ್ಟ ಕಣಿವೆಗಳಲ್ಲಿ ಅಡ್ಡಡ್ಡ ಕಿರು ಅಣೆಕಟ್ಟುಗಳು, ಜಲವಿದ್ಯುತ್ ಘಟಕಗಳು, ರಸ್ತೆಗಳು, ಸೇತುವೆಗಳು, ಪ್ರವಾಸಿ ವಸತಿಗಳು ಇವುಗಳನ್ನೆಲ್ಲ ನಿರ್ಮಿಸಿದಷ್ಟು ಅದು ಪ್ರಕೃತಿಯ ಮೂಲ ವ್ಯವಸ್ಥೆಯನ್ನು ಬದಲಿಸುತ್ತವೆ ಎಂಬುವುದನ್ನು ನಾಲ್ಕೈದು ವರ್ಷಗಳ ಹಿಂದೆಯೇ ನಾವು ಕಲಿತಿದ್ದೇವೆ. ವಿಶೇಷವಾಗಿ ಬೆಟ್ಟದ ಇಳಿಜಾರು ಮತ್ತು ಕಣಿವೆಗಳ ನಡುವೆ ಮನುಷ್ಯನ ನಿರ್ಮಾಣಗಳು ಹೆಚ್ಚಾದಂತೆ ಒಂದು ಸಣ್ಣ ನೈಸರ್ಗಿಕ ವಿಘಟನೆ ಕೂಡ ದೊಡ್ಡ ಮಾನವೀಯ ದುರಂತವಾಗಿ ಪರಿವರ್ತನೆಯಾಗುವ ಸಾಧ್ಯತೆ ಹೆಚ್ಚುತ್ತದೆ.

ನಿಸರ್ಗಕ್ಕೆ ನಾವು ಕೊಟ್ಟಿರುವ ದೊಡ್ಡ ಬೆಲೆ ಇದೇ. ಪ್ರಕೃತಿ ಮೊದಲು ತನ್ನ ಜಾಗವನ್ನು ಕಳೆದುಕೊಳ್ಳುತ್ತದೆ. ನಂತರ ಮನುಷ್ಯ ತನ್ನ ಮನೆ ಕಳೆದುಕೊಳ್ಳುತ್ತಾನೆ. ಹಿಮಾಲಯದ ಅಪಾಯವನ್ನು ಕೇವಲ ಭೂಕಂಪ, ಭೂಕುಸಿತ ಅಥವಾ ಹಠಾತ್ ಪ್ರವಾಹ ಎಂದು ಪ್ರತ್ಯೇಕ ಪ್ರತ್ಯೇಕ ಘಟನೆಗಳಾಗಿ ನೋಡಬಾರದು. ಹಿಮ ಕರಗುವಿಕೆ, ತಾಪಮಾನ ಏರಿಕೆ, ಹಿಮಸರೋವರಗಳ ವಿಸ್ತರಣೆ, ಅತಿಯಾದ ನಿರ್ಮಾಣ, ಕಣಿವೆಗಳಲ್ಲಿನ ಮಾನವ ವಸತಿ ಮತ್ತು ಜಲವಿದ್ಯುತ್ ಯೋಜನೆಗಳು ಇವೆಲ್ಲವನ್ನೂ ಒಂದೇ ಸರಪಳಿಯ ಕೊಂಡಿಗಳಾಗಿ ನೋಡಬೇಕಾಗಿದೆ. ಮತ್ತೊಂದು ಮುಖ್ಯ ಸಂಗತಿಯೂ ಇದೆ. ಪ್ರಕೃತಿಯ ದುರಂತದಲ್ಲಿ ಯಾವತ್ತೂ ಸಾವುಗಳ ಸಂಖ್ಯೆ ಕೇವಲ ಪ್ರಕೃತಿಯ ತೀವ್ರತೆಯಿಂದ ನಿರ್ಧಾರವಾಗುವುದಿಲ್ಲ. ಅದು ಅಲ್ಲಿ ಯಾವ ಹೊತ್ತಿನಲ್ಲಿ ಸಂಭವಿಸಿತು, ಆಗ ಜನರು ಎಲ್ಲಿದ್ದರು, ಅಲ್ಲಿ ಮುನ್ನೆಚ್ಚರಿಕೆ ವ್ಯವಸ್ಥೆ ಇತ್ತೇ, ನದಿಯ ದಡದಲ್ಲಿ ಎಷ್ಟು ನಿರ್ಮಾಣಗಳಿದ್ದವು, ಅಪಾಯದ ಪ್ರದೇಶದಲ್ಲಿ ಎಷ್ಟು ಜನರನ್ನು ನೆಲೆಗೊಳಿಸಲಾಗಿತ್ತು ಎಂಬುದರ ಮೇಲೂ ಅವಲಂಬಿತವಾಗಿರುತ್ತದೆ.

ಮೊನ್ನೆಯ ಘಟನೆ ಒಂದು ವೇಳೆ ರಾತ್ರಿ ಹೊತ್ತು ಸಂಭವಿಸಿದ್ದರೆ? ಭಾರೀ ಮಳೆಯ ನಡುವೆ ಸಂಭವಿಸಿದ್ದರೆ? ಜನರು ತಮ್ಮ ಮನೆಗಳಲ್ಲೇ ಇರುವ ಹೊತ್ತು ಘಟಿಸಿದ್ದರೆ? ಅಷ್ಟಾದರೂ ಪ್ರವಾಹದ ಮುನ್ನೆಚ್ಚರಿಕೆ ಸಿಗದೆ ಹೋಗಿದ್ದರೆ? ಸಾವು ಮತ್ತು ನಾಪತ್ತೆಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದಿತ್ತು. ಹೀಗಾಗಿ ಹಗಲಿನಲ್ಲಿ ಸಂಭವಿಸಿತು, ಮಳೆ ಇರಲಿಲ್ಲ, ಜನರಿಗೆ ಕೆಲವು ಮಟ್ಟಿಗೆ ಪಾರಾಗಲು, ವಿಕೋಪಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಯಿತು ಎಂಬುದು ಸಮಾಧಾನದ ಸಂಗತಿ. ಅಷ್ಟರಮಟ್ಟಿಗೆ ಸಾವಿನ ಸಂಖ್ಯೆ ಕಡಿಮೆಯಾಗಿದೆ, ಸುರಕ್ಷಿತವಾಗಿದ್ದೇವೆ ಎಂಬುದನ್ನು ಪ್ರಮಾಣಪತ್ರವಾಗಿ ನೋಡಲು ಯಾವತ್ತೂ ಸಾಧ್ಯವಿಲ್ಲ.

ಇದೇ ಘಟನೆ ನಾಳೆ ಇನ್ನೊಂದು ಕಣಿವೆಯಲ್ಲಿ, ಇನ್ನೊಂದು ಸಮಯದಲ್ಲಿ, ಇನ್ನೊಂದು ಪ್ರಮಾಣದಲ್ಲಿ ಇದಕ್ಕಿಂತ ಭೀಕರವಾಗಿ ನಡೆಯಬಹುದು.!

ಈ ಕಾರಣಕ್ಕಾಗಿ ನೇಪಾಳದ ದುರ್ಘಟನೆ ಕೇವಲ ನೇಪಾಳಕ್ಕಷ್ಟೇ ಸೇರಿದ ಕಥೆಯಲ್ಲ. ಪಕ್ಕದ ಭೂತಾನ್ ಇದರಿಂದ ಕಲಿಯಬೇಕು. ಸಿಕ್ಕಿಂ ಕಲಿಯಬೇಕು. ಹಿಮಾಲಯದ ಪ್ರತಿಯೊಂದು ಕಣಿವೆಯೂ ಕಲಿಯಬೇಕು. ನಮ್ಮ ಕೊಡಗೂ ಕಲಿಯಬೇಕು! ಅಷ್ಟೇ ಅಲ್ಲ, ಹಿಮಾಲಯವೂ ಸೇರಿ ಬೆಟ್ಟ ಗುಡ್ಡ ಪರ್ವತಗಳನ್ನು ಅಭಿವೃದ್ಧಿಯ ಹೊಸ ಪ್ರಯೋಗಶಾಲೆಯನ್ನಾಗಿ ನೋಡುತ್ತಿರುವ ಸರಕಾರಗಳು ಮತ್ತು ಕಂಪೆನಿಗಳೂ ಇದರಿಂದ ಕಲಿಯಬೇಕು. ಪ್ರಕೃತಿಯೊಂದಿಗೆ ಪೈಪೋಟಿ ನಡೆಸಿ ಯಾವತ್ತೂ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಪ್ರಕೃತಿಯ ಮಿತಿಯನ್ನು ಅರ್ಥಮಾಡಿಕೊಂಡೇ ಅಭಿವೃದ್ಧಿಯ ವಿನ್ಯಾಸವನ್ನು ರೂಪಿಸಬೇಕಾಗುತ್ತದೆ. ಕುಸಿಯುವ ಮಣ್ಣಿಗೆ, ಪ್ರವಾಹದ ನೀರಿಗೆ ತನ್ನದೇ ದಾರಿ ಇರುತ್ತದೆ. ಕಣಿವೆಗೆ ತನ್ನದೇ ಭೌಗೋಳಿಕ ಸ್ವಭಾವ ಇರುತ್ತದೆ. ಮನುಷ್ಯನ ನಕ್ಷೆಯಲ್ಲಿ ಒಂದು ಗೆರೆ ಎಳೆದ ಮಾತ್ರಕ್ಕೆ ನದಿ ತನ್ನ ದಾರಿ ಬದಲಿಸುವುದಿಲ್ಲ; ಬೆಟ್ಟ ತನ್ನ ಇಳಿಜಾರು ಮರೆತು ಕೂರುವುದಿಲ್ಲ.

ಈಗಾಗಲೇ ಬದಲಾಗುತ್ತಿರುವ ಹವಾಮಾನದ ನಡುವೆ ನಾವು ಹೇಗೆ ಬದುಕಬೇಕು ಎಂಬುದೂ ಅಷ್ಟೇ ಮುಖ್ಯ. ಅಪಾಯ ಇರುವ ಪ್ರದೇಶಗಳನ್ನು ಗುರುತಿಸುವುದು, ಹಿಮಸರೋವರಗಳನ್ನು ನಿರಂತರವಾಗಿ ಗಮನಿಸುವುದು, ಭೂಮಿ ಮೇಲೆ ಉಪಗ್ರಹ ಮತ್ತು ಭೂಮಟ್ಟದ ನಿಗಾವ್ಯವಸ್ಥೆ ರೂಪಿಸುವುದು, ಮುನ್ನೆಚ್ಚರಿಕೆ ವ್ಯವಸ್ಥೆಗಳನ್ನು ಬಲಪಡಿಸುವುದು, ನದಿ ಕಣಿವೆಗಳಲ್ಲಿನ ನಿರ್ಮಾಣವನ್ನು ನಿಯಂತ್ರಿಸುವುದು ಇವೆಲ್ಲವೂ ಇನ್ನು ಮುಂದೆ ಐಷಾರಾಮಿ ವ್ಯವಸ್ಥೆಗಳಲ್ಲ. ಅವು ಜೀವ ರಕ್ಷಿಸುವ ಮೂಲಸೌಕರ್ಯಗಳಾಗಬೇಕು.

ಒಂದು ಬೆಟ್ಟವನ್ನು ಅಡ್ಡಡ್ಡ ಕತ್ತರಿಸಿ ರಸ್ತೆ ನಿರ್ಮಿಸಿ, ಅದರ ಕೆಳಗೆ ಊರು ಕಟ್ಟಿ, ಅದೇ ಕಣಿವೆಯಲ್ಲಿ ನೀರಿಗೆ ಅಡ್ಡವಾಗಿ ಅಣೆಕಟ್ಟು ಹಾಕಿ, ನಂತರ ಪ್ರಕೃತಿ ತನ್ನ ಸ್ವಭಾವ ತೋರಿಸಿದಾಗ ಅದನ್ನು ನೈಸರ್ಗಿಕ ವಿಕೋಪ ಎಂದು ಕರೆಯುವುದು ತುಂಬಾ ಸುಲಭ. ಇಲ್ಲೇ ನಾವು ಕೇಳಬೇಕಾದ ಪ್ರಶ್ನೆ ಇನ್ನೂ ಆಳದಲ್ಲಿದೆ. ನೈಸರ್ಗಿಕ ವಿಕೋಪ ಎಷ್ಟು ಭಾಗ ಪ್ರಕೃತಿಯದು? ಎಷ್ಟು ಭಾಗ ನಮ್ಮ ನಿರ್ಧಾರಗಳದು ಎಂಬ ಗಂಭೀರ ಪ್ರಶ್ನೆಯದು.

ನನ್ನ ಪ್ರಶ್ನೆ ಪ್ರಕೃತಿ ಯಾವಾಗ ನಮ್ಮ ಮೇಲೆ ಬೀಳುತ್ತದೆ ಎಂಬುದಲ್ಲ. ಪ್ರಕೃತಿ ತನ್ನ ಸ್ವಭಾವದಲ್ಲಿ ಬದಲಾವಣೆಯಾಗದೆ ಇರುವಾಗಲೇ, ನಾವು ಅದರ ಮೇಲೆ ಎಷ್ಟು ಅತಿಕ್ರಮಣ ಮಾಡಿದ್ದೇವೆ ಎಂಬುವುದು.

ಇದನ್ನು ಕೇವಲ ಮೊನ್ನೆ ನಡೆದ ಒಂದು ಅಪಘಾತ ಎಂದು ಮರೆತು ಬಿಡುವಂತಿಲ್ಲ. ಹಿಮಾಲಯದ ಚರಿತ್ರೆಯನ್ನು ತೆರೆದು ನೋಡಿದರೆ, ಕಳೆದ ಒಂದು ಶತಮಾನದಲ್ಲಿ ಇಂತಹ ಹಿಮನದಿ ಸರೋವರ ಸ್ಫೋಟ ಮತ್ತು ಅದರಿಂದ ಉಂಟಾದ ಪ್ರವಾಹಗಳ ಸುಮಾರು 135 ಘಟನೆಗಳು ದಾಖಲಾಗಿವೆ ಎಂದು ನೇಚರ್ ಪತ್ರಿಕೆ ಪ್ರಕಟಿಸಿರುವ ಅಧ್ಯಯನಗಳು ಹೇಳುತ್ತವೆ. ಕೈಗಾರಿಕೆಗಳಿಲ್ಲದ, ಅಣೆಕಟ್ಟುಗಳಿಲ್ಲದ, ಮನುಷ್ಯನ ಹೆಜ್ಜೆಯೇ ಅಪರೂಪವಾಗಿರುವ ಎತ್ತರದ ಹಿಮಾಲಯದಲ್ಲಿಯೂ ಇಂತಹ ಘಟನೆಗಳು ನಡೆದಿವೆ ಎಂಬುವುದು ಕೆಲವೊಮ್ಮೆ ನಮ್ಮ ತರ್ಕಕ್ಕೆ ಎಟಕದ್ದು. ಇಪ್ಪತ್ತೊಂದನೆಯ ಶತಮಾನದಲ್ಲಿ ಮಾತ್ರ ಇವುಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿರುವುದು ಇನ್ನಷ್ಟು ಆತಂಕದ ಸಂಗತಿ.

ಇದೇ ಕಾರಣಕ್ಕೆ ಪ್ರತಿಯೊಂದು ದುರಂತಕ್ಕೂ ಮನುಷ್ಯನೇ ಕಾರಣ ಎಂದು ಹೇಳಲಾಗದು. ಪ್ರಕೃತಿಗೆ ತನ್ನದೇ ಆದ ಚಲನೆ ಇದೆ. ಆದರೆ ಈಗ ಬದಲಾಗುತ್ತಿರುವ ಹವಾಮಾನದಲ್ಲಿ ಆ ನೈಸರ್ಗಿಕ ಚಲನೆಗಳು ಯಾವ ಪ್ರಮಾಣದಲ್ಲಿ, ಯಾವ ವೇಗದಲ್ಲಿ, ಯಾವ ಸಮಯದಲ್ಲಿ ನಮ್ಮ ಬದುಕಿಗೆ ಅಪ್ಪಳಿಸಬಹುದು ಎಂಬುದನ್ನು ನಾವು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕಾಗಿದೆ.

ಹಿಮಾಲಯವನ್ನು ಆಧರಿಸಿದ ಸುತ್ತು ಮುತ್ತಲಿನ ಪ್ರದೇಶಗಳ ಇನ್ನೊಂದು ವೈರುಧ್ಯವೆಂದರೆ, ಅಪಾಯದ ಸ್ಥಳಗಳೇ ಮನುಷ್ಯನಿಗೆ ಅತ್ಯಂತ ಸುಂದರವಾಗಿ ಕಾಣುವುದು. ಬೆಟ್ಟ, ಕಣಿವೆ, ನದಿ, ಹಿಮಸರೋವರ ಇವೇ ಹೆಚ್ಚು ಹೆಚ್ಚು ಅಲ್ಲಿ ಪ್ರವಾಸಿಗರನ್ನು ಸೆಳೆಯುತ್ತವೆ. ಇದೇ ಸೌಂದರ್ಯದ ಸುತ್ತ ಹಳ್ಳಿಗಳು ಬೆಳೆದಿವೆ. ಮನೆಗಳು ಕಟ್ಟಲ್ಪಟ್ಟಿವೆ. ರಸ್ತೆಗಳು ಬಂದಿವೆ. ಪ್ರವಾಸಿ ವಸತಿಗಳು ನಿರ್ಮಾಣವಾಗಿವೆ. ಹೀಗಾಗಿ ಪ್ರಕೃತಿಯ ಒಂದು ಹಠಾತ್ ಬದಲಾವಣೆ ಸಂಭವಿಸಿದಾಗ ಅದರ ಹೊಡೆತ ಖಾಲಿ ಭೂಪ್ರದೇಶಕ್ಕೆ ಬೀಳುವುದಿಲ್ಲ; ಮನುಷ್ಯನ ಬದುಕಿನ ಮಧ್ಯಕ್ಕೆ ಬಂದು ಬೀಳುತ್ತದೆ.

ಇಲ್ಲಿ ವಿಜ್ಞಾನಕ್ಕೆ ದೊಡ್ಡ ಜವಾಬ್ದಾರಿ ಇದೆ.

ಮನುಷ್ಯನ ಕಣ್ಣು ಕಾಣುವಷ್ಟರಲ್ಲಿ ಅಪಾಯವನ್ನು ಗುರುತಿಸುವುದು ಯಾವಾಗಲೂ ಸಾಧ್ಯವಿಲ್ಲ. ಆದರೆ ಉಪಗ್ರಹಗಳು ನೋಡಬಲ್ಲವು. ಸಂವೇದಕಗಳು ಗಮನಿಸಬಲ್ಲವು. ಹಿಮಸರೋವರದ ನೀರಿನ ಮಟ್ಟದಲ್ಲಾಗುವ ಸಣ್ಣ ಬದಲಾವಣೆಯನ್ನು ಯಂತ್ರಗಳು ದಾಖಲಿಸಬಲ್ಲವು. ಹಿಮದ ಚಲನೆ, ಬಂಡೆಗಳ ಅಸ್ಥಿರತೆ, ನೀರಿನ ಒತ್ತಡ ಇವುಗಳನ್ನೆಲ್ಲ ನಿರಂತರವಾಗಿ ಗಮನಿಸುವ ತಂತ್ರಜ್ಞಾನ ಇಂದು ನಮ್ಮ ಕೈಯಲ್ಲಿದೆ. ಹಾಗಿದ್ದ ಮೇಲೆ ಪ್ರಶ್ನೆ ತಂತ್ರಜ್ಞಾನ ಇದೆಯೇ ಇಲ್ಲವೇ ಎನ್ನುವುದಲ್ಲ. ಅದನ್ನು ಅಪಾಯದಲ್ಲಿರುವ ಜನರ ಬದುಕಿನ ಭಾಗವನ್ನಾಗಿ ಮಾಡಿದ್ದೇವೆಯೇ ಎನ್ನುವುದು. ಒಂದು ಸರೋವರದ ನೀರು ಏರಿದಾಗ ಎಚ್ಚರಿಕೆ ಕೊಡುವ ವ್ಯವಸ್ಥೆ ಇರಬೇಕು. ಎಚ್ಚರಿಕೆ ಬಂದ ತಕ್ಷಣ ಜನರಿಗೆ ತಲುಪಬೇಕು. ಎಚ್ಚರಿಕೆ ತಲುಪಿದ ಮೇಲೆ ಅವರು ಹೋಗಬೇಕಾದ ಸುರಕ್ಷಿತ ಸ್ಥಳ ಗೊತ್ತಿರಬೇಕು. ಅಲ್ಲಿಗೆ ಹೋಗುವ ರಸ್ತೆ ಮತ್ತು ಸೇತುವೆ ಉಳಿದಿರಬೇಕು. ಅಷ್ಟೇ ಅಲ್ಲ, ರಾತ್ರಿ ನಿದ್ರೆಯಲ್ಲಿರುವ ಮನುಷ್ಯನನ್ನೂ ಎಬ್ಬಿಸುವಷ್ಟು ಸರಳವಾದ, ನಂಬಬಹುದಾದ ಸ್ಥಳೀಯ ಎಚ್ಚರಿಕಾ ವ್ಯವಸ್ಥೆ ಇರಬೇಕು. ಇದು ದೊಡ್ಡ ದೊಡ್ಡ ತಂತ್ರಜ್ಞಾನಗಳಿಗಿಂತಲೂ ಮುಖ್ಯ. ಭೂತಾನ್‌ನಂತಹ ದೇಶಗಳು ಹಿಮಸರೋವರಗಳ ನೀರನ್ನು ಸಾಧ್ಯವಾದಷ್ಟು ನಿಯಂತ್ರಿತವಾಗಿ ಹೊರಹರಿಯುವಂತೆ ಮಾಡುವ ಕ್ರಮಗಳಿಗೆ ಒತ್ತು ನೀಡುತ್ತಿರುವುದು ಈ ಹಿನ್ನೆಲೆಯಲ್ಲಿ ಗಮನಾರ್ಹ. ಪ್ರಕೃತಿಯ ನೀರನ್ನು ಬಲವಂತವಾಗಿ ಬಂಧಿಸುವುದಕ್ಕಿಂತ, ಅದರ ಒತ್ತಡವನ್ನು ಮುಂಚಿತವಾಗಿ ಕಡಿಮೆ ಮಾಡುವ ಪ್ರಯತ್ನ ಅಲ್ಲಿಯದು. ಅಪಾಯವನ್ನು ಬಂದ ನಂತರ ಎದುರಿಸುವುದಕ್ಕಿಂತ, ಅದು ರೂಪುಗೊಳ್ಳುವ ಮೊದಲೇ ಅದರ ತೀವ್ರತೆಯನ್ನು ತಗ್ಗಿಸುವ ಬುದ್ಧಿವಂತಿಕೆಯದು.

ಇದೇ ಮುಂದೆ ಹಿಮಾಲಯದ ಅಭಿವೃದ್ಧಿಯ ಮೂಲಮಂತ್ರವಾಗಬೇಕಿದೆ. ನಾವು ಬೆಟ್ಟದ ಮೇಲೆ ಇನ್ನೊಂದು ರಸ್ತೆ ನಿರ್ಮಿಸುವ ಮೊದಲು, ಅದರ ಕೆಳಗೆ ಇರುವ ಕಣಿವೆಯ ಅಪಾಯವನ್ನು ಓದಬೇಕು. ಹೊಸ ಜಲವಿದ್ಯುತ್ ಯೋಜನೆ ರೂಪಿಸುವ ಮೊದಲು, ಅದರ ಮೇಲ್ಭಾಗದ ಹಿಮಸರೋವರಗಳ ನಡವಳಿಕೆಯನ್ನು ಅರ್ಥಮಾಡಿಕೊಳ್ಳಬೇಕು. ಪ್ರವಾಸಿ ನಗರ ಕಟ್ಟುವ ಮೊದಲು, ನೂರು ವರ್ಷಗಳ ಪ್ರವಾಹದ ದಾರಿಯನ್ನು ಗುರುತಿಸಬೇಕು. ಅಭಿವೃದ್ಧಿಯ ನಕ್ಷೆಯಲ್ಲಿ ಅಪಾಯದ ನಕ್ಷೆಯೂ ಜೊತೆಯಾಗಿ ಇರಬೇಕು.

ಏಕೆಂದರೆ ಹಿಮಾಲಯದಲ್ಲಿ ಪ್ರಕೃತಿ ಎಚ್ಚರಿಕೆ ಕೊಡುವ ವಿಧಾನ ಮನುಷ್ಯನ ವಿಧಾನಕ್ಕಿಂತ ಭಿನ್ನ. ಅದು ಪತ್ರ ಬರೆಯುವುದಿಲ್ಲ. ಮೈಕಿನಲ್ಲಿ ಅನೌನ್ಸ್‌ಮೆಂಟ್ ಮಾಡುವುದಿಲ್ಲ. ತುರ್ತು ಸಭೆ ಕರೆಯುವುದಿಲ್ಲ. ಮನೆ ಮನೆಗೆ ಬಂದು ಬಾಗಿಲಿಗೆ ನೋಟಿಸ್ ಅಂಟಿಸುವುದಿಲ್ಲ. ಕೆಲವೊಮ್ಮೆ ತೀರಾ ಸಹಜವಾಗಿ ಒಂದು ಬಂಡೆ ಜಾರುತ್ತದೆ. ಒಂದು ಹಿಮದ ಪದರ ಮುರಿಯುತ್ತದೆ. ಒಂದು ಸರೋವರದ ಅಂಚು ಒಡೆಯುತ್ತದೆ. ಅಷ್ಟೇ. ಮುಂದಿನ ಸಮಯ ನಮ್ಮ ಪರವಾಗಿರುವುದಿಲ್ಲ.

ಆದ್ದರಿಂದ ನೇಪಾಳದ ಈ ಘಟನೆಗೆ ಶೋಕ ವ್ಯಕ್ತಪಡಿಸುವುದಷ್ಟೇ ಸಾಲದು. ಅದರಿಂದ ಮುಂದಿನ ಬದುಕಿಗೆ ಒಂದು ಶಾಶ್ವತ ಜನೋಪಯೋಗಿ ವ್ಯವಸ್ಥೆಯನ್ನು ಕಟ್ಟಿಕೊಳ್ಳಬೇಕು. ಹಿಮಾಲಯದ ಪ್ರತಿಯೊಂದು ಅಪಾಯದ ಸರೋವರಕ್ಕೂ ಅಪಾಯದ ನಕ್ಷೆ ಇರಬೇಕು. ಅದರ ಕೆಳಗಿನ ಪ್ರತಿಯೊಂದು ಕಣಿವೆಯಲ್ಲೂ ಮುನ್ನೆಚ್ಚರಿಕಾ ವ್ಯವಸ್ಥೆ ಇರಬೇಕು. ಜನರಿಗೆ ವರ್ಷಕ್ಕೊಮ್ಮೆಯಾದರೂ ಸ್ಥಳಾಂತರದ ಅಭ್ಯಾಸ-ತರಬೇತಿ ಇರಬೇಕು. ನಿರ್ಮಾಣಕ್ಕೆ ಮಿತಿಬೇಕು. ವಿಜ್ಞಾನಿಗಳ ಎಚ್ಚರಿಕೆಯನ್ನು ಅಭಿವೃದ್ಧಿಯ ಯೋಜನೆಗಿಂತ ಕೆಳಗಿನ ಸ್ಥಾನದಲ್ಲಿ ಇಡುವ ಮನೋಭಾವ ಬದಲಾಗಬೇಕು.

ಮುಂದಿನ ದುರಂತವನ್ನು ತಡೆಯಲು ನಮಗೆ ಪ್ರಕೃತಿಯನ್ನು ನಿಲ್ಲಿಸುವ ಶಕ್ತಿ ಬೇಕಿಲ್ಲ. ಅದರ ದಾರಿಯನ್ನು ಅರ್ಥಮಾಡಿಕೊಳ್ಳುವ ವಿವೇಕ ಸಾಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor