ಇದು ಬರೀ ಮನೆಯಲ್ಲ, ಮೌಲ್ಯವರ್ಧನೆಯ ಸಾಗರ!

Update: 2026-08-16 10:29 IST

ಸಾಗರ್ ಕುಟುಂಬವನ್ನು ನೋಡಿದಾಗ ನನಗೆ ಅನ್ನಿಸಿದ್ದು, ಕೃಷಿಯೆಂದರೆ ಕೇವಲ ಮಣ್ಣಿನಲ್ಲಿ ಬೆಳೆ ಬೆಳೆಸುವುದು ಅಲ್ಲ. ಮಣ್ಣಿನಿಂದ ಹುಟ್ಟಿದ ಪ್ರತಿಯೊಂದು ಸಾಧ್ಯತೆಯನ್ನು ಗುರುತಿಸುವುದು. ಅದಕ್ಕೆ ಮೌಲ್ಯ ಸೇರಿಸುವುದು. ಮೌಲ್ಯವರ್ಧಿತ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸುವುದು. ತನ್ನ ಮನೆಯ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ಸುತ್ತಲಿನ ಕೃಷಿಕರಿಗೂ ಉಪಯೋಗವಾಗುವ ವ್ಯವಸ್ಥೆ ಕಟ್ಟುವುದು. ಎಲ್ಲಕ್ಕಿಂತ ಮುಖ್ಯವಾಗಿ, ಆ ಕೆಲಸದಲ್ಲಿ ಕುಟುಂಬದ ಪ್ರತಿಯೊಬ್ಬರೂ ಒಳಗೊಳ್ಳುವುದು.

ಕೆಲವರು ಕೃಷಿ ಮಾಡುತ್ತಾರೆ. ಕೆಲವರು ಕೃಷಿಯ ಬಗ್ಗೆ ಮಾತನಾಡುತ್ತಾರೆ. ಇನ್ನೂ ಕೆಲವರು ಕೃಷಿಯ ಹುಟ್ಟುವಳಿಯನ್ನು ಮೌಲ್ಯವರ್ಧಿಸಿ, ಅದನ್ನು ಮತ್ತೊಬ್ಬರ ಬದುಕಿಗೆ ಉಪಯೋಗವಾಗುವ ಉತ್ಪನ್ನವನ್ನಾಗಿ ಪರಿವರ್ತಿಸುತ್ತಾರೆ. ಸಾಗರದ ನಾಗೇಂದ್ರ ಸಾಗರ್ ಈ ಮೂರನೆಯ ಸಾಲಿಗೆ ಸೇರಿದವರು. ಮೊನ್ನೆ ಇಡೀ ದಿನ ಅವರೊಟ್ಟಿಗೆ ಕಳೆದಾಗ ನನಗೆ ಮತ್ತೆ ಮತ್ತೆ ಅನ್ನಿಸಿದ್ದು ಇದು ಕೇವಲ ಒಬ್ಬ ಕೃಷಿಕನ ಕಥೆಯಲ್ಲ; ಕೃಷಿಯನ್ನು ಬದುಕಿನ ಮೂಲಪಾಯವನ್ನಾಗಿಟ್ಟುಕೊಂಡು ಅದರ ಸುತ್ತ ಸ್ವಾವಲಂಬನೆಯ ಅನೇಕ ವೃತ್ತಗಳನ್ನು ಕಟ್ಟಿಕೊಂಡ ಒಂದು ಕುಟುಂಬದ ಕಥೆ ಎಂದು.

ನಾಗೇಂದ್ರ ಸಾಗರ್ ಅವರಿಗೆ ನನ್ನದೇ ವಯಸ್ಸು. ಇಬ್ಬರೂ ಒಂದೇ ಕಾಲಕ್ಕೆ ಪತ್ರಿಕೋದ್ಯಮವನ್ನು ಪ್ರವೇಶಿಸಿದವರು. ನನಗೆ ಮಣಿಪಾಲ ಬಾಗಿಲು ತೆರೆದರೆ ಅವರಿಗೆ ಮಂಗಳೂರು ನೆರವಾಯಿತು, ಮುಂದೆ ಅದೇ ದಾರಿಯಲ್ಲಿ ಬೆಂಗಳೂರಿಗೆ ನಡೆದರು. ಬರವಣಿಗೆಯಲ್ಲಿ ಕಳೆದುಹೋಗುವಷ್ಟು ಅಲ್ಲಿ ಅವಕಾಶಗಳಿತ್ತು. ಯಾಕೋ ಏನೋ ರಾಜಧಾನಿಯ ಒತ್ತಡ ಅವರ ಮನಸ್ಸನ್ನು ಒಳ ಸೇರಿಸಿಲ್ಲ. ಮಾಧ್ಯಮದ-ಕದನ ರೇಖೆ ಅವರಿಗೆ ಇಷ್ಟವಾಗಲಿಲ್ಲ. ಹಠಾತ್ ಆ ವೃತ್ತಿ ಕಳಚಿ ಹುಟ್ಟೂರಿಗೆ ಬಂದು ಮಣ್ಣಿಗೆ ಅಂಟಿಕೊಂಡರೂ ಪತ್ರಕರ್ತನ ಒಳಗಣ್ಣು ಮಾತ್ರ ಅವರೊಳಗೆ ಇನ್ನೂ ಜೀವಂತವಾಗಿದೆ. ಬರೆಯದಿರುವ ಸ್ವಾತಂತ್ರ್ಯದಷ್ಟೇ ಬರೆಯುವ ಸ್ವಾತಂತ್ರ್ಯವೂ ಈಗ ಅವರಲ್ಲಿದೆ. ಸುತ್ತಲಿನ ಊರುಪೇಟೆಗಳಿಗೆ, ರೈತಾಪಿಗಳ ಮನೆಗೆ ಹೋಗುವಾಗಲೋ, ತಾವು ಉತ್ಪಾದಿಸುವ ಗೊಬ್ಬರ, ಹಿಂಡಿ, ಜೇನು ಮುಂತಾದವುಗಳನ್ನು ತಲುಪಿಸಬೇಕಾದ ಗಮ್ಯಗಳಿಗೆ ಸಾಗಿಸುವಾಗಲೂ ಅವರ ಕಣ್ಣು ಸುಮ್ಮನೆ ದಾರಿಯನ್ನು ನೋಡುವುದಿಲ್ಲ; ಹಾದಿಯಲ್ಲಿರುವ ಸೂಕ್ಷ್ಮ ಸಂಗತಿಗಳನ್ನು ಹುಡುಕುತ್ತದೆ.

ಮೊನ್ನೆ ಮೊನ್ನೆ ರಾಜ್ಯದ ನೂತನ ಮುಖ್ಯಮಂತ್ರಿ ತಮ್ಮ ಕೊರಳಿಗೆ ಸುಗಂಧರಾಜ ಹೂವಿನ ಮಾಲೆ ಹಾಕಬೇಡಿ, ನನಗೆ ಅಲರ್ಜಿ ಇದೆ ಎಂದು ಹೇಳಿದ ಸುದ್ದಿ ನಾಗೇಂದ್ರ ಕಣ್ಣಿಗೆ ಬಿತ್ತು. ಅನೇಕರಿಗೆ ಅದು ಕೇವಲ ಒಂದು ರಾಜಕೀಯ ಸುದ್ದಿ. ನಾಗೇಂದ್ರ ಅವರಿಗೆ ಮಾತ್ರ ಆ ಸುಗಂಧರಾಜ ಒಂದು ಕಥೆಯಾಗಿ ಪರಿಣಮಿಸಿತು. ಆ ಹೂವಿನ ಮೂಲ ಎಲ್ಲಿದೆ? ಅದನ್ನು ಹೇಗೆ ಬೆಳೆಯುತ್ತಾರೆ? ಅದರಿಂದ ಸುಗಂಧದ ಎಣ್ಣೆಯನ್ನು ಹೇಗೆ ತೆಗೆಯುತ್ತಾರೆ? ಅದರ ಮಾರುಕಟ್ಟೆ ಹೇಗಿದೆ? ಎಂಬ ಪ್ರಶ್ನೆಗಳು ಅವರನ್ನು ಹಿಂಬಾಲಿಸಿದವು. ಹೀಗೆ ಒಂದು ಸುದ್ದಿಯ ಬೆನ್ನೇರಿ ಕೃಷಿಯ ಹೊಸ ಸಾಧ್ಯತೆಯನ್ನು ಹುಡುಕುವ ಪತ್ರಕರ್ತನ ಕಣ್ಣು ಅವರಲ್ಲಿದೆ.

ಇನ್ಯಾವುದೋ ದಾರಿಯಲ್ಲಿ ಬರುವಾಗ ಹೋಟೆಲೊಂದರ ಕ್ಯಾಶ್ ಕೌಂಟರ್ ಮೇಲಿದ್ದ ಅಪರೂಪದ ಉಪ್ಪಿನಕಾಯಿ ಅವರ ಗಮನ ಸೆಳೆಯುತ್ತದೆ. ಸಾಮಾನ್ಯನಿಗೆ ಅದು ಊಟದ ಜೊತೆಗಿನ ಒಂದು ಪದಾರ್ಥ. ನಾಗೇಂದ್ರರಿಗೆ ಅದರ ಹಿಂದೆ ಮತ್ತೊಂದು ಕೃಷಿಕಥೆ ಕಾಣಿಸುತ್ತದೆ. ಮೂಲವನ್ನು ಹುಡುಕುತ್ತಾರೆ. ತಮ್ಮದೇ ಮಲೆನಾಡು ಗಿಡ್ಡ ಅಭಿವೃದ್ಧಿ ಕೇಂದ್ರಕ್ಕೆ ತಂದು ಅದನ್ನು ಮಾರಾಟಕ್ಕಿಡುತ್ತಾರೆ.

ನಾಗೇಂದ್ರ ಅವರ ಕೃಷಿ ಯಾವತ್ತೂ ತೋಟದ ಗಡಿಯಲ್ಲಿ ಮುಗಿಯುವುದಿಲ್ಲ. ಕಣ್ಣಿಗೆ ಕಂಡ ಪ್ರತಿಯೊಂದು ಸಾಧ್ಯತೆಯನ್ನೂ ಕೃಷಿಯೊಂದಿಗೆ ಜೋಡಿಸುವ ಮನಸ್ಸಿನಲ್ಲಿಯೇ ಅವರ ನಿಜವಾದ ಕೃಷಿ ಆರಂಭವಾಗುತ್ತದೆ. ಸಾಗರದ ಸಮೀಪದ ಚಿಪ್ಪಳಿಯಲ್ಲಿರುವ ಅವರ ಕೃಷಿ ಆವರಣಕ್ಕೆ ಹೋದಾಗ ಮೊದಲು ಕಾಣಿಸುವುದು ತೊನೆಯುವ ಅಡಿಕೆ, ತೆಂಗು, ಕಾಳುಮೆಣಸು, ಬಿದಿರು ಮುಂತಾದ ಬೆಳೆಗಳಲ್ಲ. ನಾಲ್ಕೈದು ಎಕರೆ ಜಾಗದಲ್ಲಿ ಬಿಡಿ ಬಿಡಿಯಾಗಿ ಹರಡಿಕೊಂಡಿರುವ ಇವೆಲ್ಲವನ್ನು ನೋಡಿದಾಗ, ‘ಇಷ್ಟೇನಾ ನಾಗೇಂದ್ರ ಸಾಗರ್ ಅವರ ಕೃಷಿ?’ ಎಂದುಕೊಂಡರೆ ನಾವು ತಪ್ಪುತ್ತೇವೆ.

ಈ ತೋಟದ ನಿಜವಾದ ಬೆಳೆ ಗಿಡಮರಗಳಾಚೆ ಇದೆ. ಇಲ್ಲಿ ಹೈನುಗಾರಿಕೆ ಇದೆ, ಹಾಲಿದೆ, ಅದೇ ಹಾಲಿನಿಂದ ಮಾಡುವ ಮಲೆನಾಡ ಐಸ್‌ಕ್ರೀಂ ಇದೆ. ಹಸುಗಳ ಗಂಜಲ ಗೊಬ್ಬರ ತ್ಯಾಜ್ಯದಿಂದ ಮಾಡುವ ಬೃಹತ್ ಎರೆಗೊಬ್ಬರದ ಘಟಕಗಳಿವೆ. ಹೈನುಗಳಿಗೆ ಬೇಕಾಗುವ ಹಿಂಡಿ ತಯಾರಿಸುವ ಸ್ಥಾವರವಿದೆ. ತಮ್ಮ ತೋಟದಲ್ಲಿ ಹುಟ್ಟಿದ ಜೇನು ಸಾಕಣೆಯನ್ನು ವಿಸ್ತರಿಸುವುದಷ್ಟೇ ಅಲ್ಲ, ಜೇನನ್ನು ಸ್ಥಳೀಯ ಮಾರುಕಟ್ಟೆಗೆ ತಲುಪಿಸುವ ಸೂಕ್ಷ್ಮತೆಯೂ ಅವರಿಗಿದೆ.

ಇದು ನಿಜಕ್ಕೂ ಗಮನಿಸಬೇಕಾದ ಕೃಷಿ ಮಾದರಿ.

ನೂರಾರು ಎಕರೆ ಜಮೀನು ಹೊಂದಿ ಅದರಲ್ಲಿ ಗರಿಷ್ಠ ಆದಾಯ ತರುವ ಬೆಳೆಗಳನ್ನು ಬೆಳೆಸಿ, ಮಾರುಕಟ್ಟೆ ಮಾಡಿ ಲಾಭ ಗಳಿಸುವ ರೈತರು ನಮ್ಮಲ್ಲಿ ಅನೇಕರಿದ್ದಾರೆ. ಆದರೆ ತೋಟದ ನಡುವಿನ ಮುಕ್ಕಾಲು ಎಕರೆಯಷ್ಟು ಮನೆಯ ಆವರಣದೊಳಗೆ ಕೃಷಿಯನ್ನೇ ಮೂಲಪಾಯವನ್ನಾಗಿಟ್ಟುಕೊಂಡು, ಅಲ್ಲಿಯೇ ಹುಟ್ಟುವ ಹಾಲು, ಗೊಬ್ಬರ, ಜೇನು, ಹಿಂಡಿ, ಹಣ್ಣು ಮುಂತಾದವುಗಳಿಗೆ ಮೌಲ್ಯವರ್ಧನೆ ಮಾಡಿ, ಅವುಗಳನ್ನೇ ಮತ್ತೊಬ್ಬ ಕೃಷಿಕನಿಗೆ ಬೇಕಾಗುವ ಉತ್ಪನ್ನಗಳನ್ನಾಗಿ ಪರಿವರ್ತಿಸುವುದು ಮತ್ತೊಂದು ದೊಡ್ಡ ಮಾದರಿ.

ಇದು ಯಾವುದೋ ಸರಕಾರದ ಒಂದು ಯೋಜನೆಯಿಂದ ಹುಟ್ಟಿ, ಬ್ಯಾಂಕಿನ ಸಾಲದಿಂದ ಬೃಹತ್ ಉದ್ದಿಮೆಯಾಗಿ ಬೆಳೆದ ಕಥೆಯಲ್ಲ. ಮನೆಯ ಸುತ್ತಲಿನ ಜೀವವರ್ಧಕ, ಪ್ರಾಣಿಜನ್ಯ ಮತ್ತು ಸಸ್ಯಜನ್ಯ ಸಂಪನ್ಮೂಲಗಳನ್ನು ಗುರುತಿಸಿ, ಅವುಗಳ ಸಾಧ್ಯತೆಗಳನ್ನು ಒಂದೊಂದಾಗಿ ತೆರೆದು, ನಂಬಿಕೆಯಿಂದ ಕಟ್ಟಿಕೊಂಡ ಕೃಷಿ ಆರ್ಥಿಕತೆ. ಮೇಲ್ನೋಟಕ್ಕೆ ನಾಗೇಂದ್ರ ಸಾಗರ್ ಅವರ ಮನೆ ನೋಡಿದರೆ ನಮ್ಮ ಮಲೆನಾಡಿನ ಪಕ್ಕ ಸಾಂಪ್ರದಾಯಿಕ ಮನೆಯಂತೆಯೇ ಕಾಣುತ್ತದೆ. ಹೊರಗೆ ಕೆಲವು ಆಲಂಕಾರಿಕ ಗಿಡಗಳು. ಮನೆಯಂಗಳ. ಬರುವ ಅತಿಥಿಗಳಿಗೆ ಸಹಜವಾಗಿಯೇ ಇದೊಂದು ಸುಂದರ ಮನೆಯೇ.

ಶಿವಮೊಗ್ಗ ಮತ್ತು ಉತ್ತರ ಕನ್ನಡದ ಎರಡು ಜಿಲ್ಲೆಗಳಲ್ಲಿ ಹಂಚಿಕೊಂಡಿರುವ ಮಲೆನಾಡಿನ ಬಹುತೇಕ ಹವ್ಯಕ ಕೃಷಿಕರ ಮನೆಗಳಿಗೆ ಒಂದು ವಿಶೇಷತೆಯಿದೆ. ಮನೆ ಕಟ್ಟಿದ ಮೂರುನಾಲ್ಕು ದಶಕಗಳ ನಂತರ ಅದರ ಮೂಲ ಸ್ವರೂಪವನ್ನು ಗುರುತಿಸುವುದೇ ಕಷ್ಟವಾಗಿರುತ್ತದೆ. ಮನೆಯೊಂದಕ್ಕೆ ಮತ್ತೊಂದು ಇಳಿಮಾಡು, ಅದಕ್ಕೊಂದು ಹಟ್ಟಿ, ಹಟ್ಟಿಯಾಚೆ ಕೊಟ್ಟಿಗೆ, ಇನ್ನೊಂದು ಕಡೆ ಕೃಷಿ ಉಪಕರಣಗಳ ಜಾಗ, ಧಾನ್ಯಗಳ ಕೋಣೆ, ಅಡಿಕೆ ಒಣಗಿಸುವ ಅಂಗಳ... ಹೀಗೆ ಮನೆ ವಿಸ್ತರಿಸುತ್ತಲೇ ಹೋಗುತ್ತದೆ. ಕೊನೆಗೆ ಅದು ಕೇವಲ ಮನುಷ್ಯರು ವಾಸಿಸುವ ಮನೆಯಾಗಿ ಉಳಿಯದೆ, ಮನೆಯವರ ಬದುಕಿನ ಬಹುತೇಕ ಅಗತ್ಯಗಳನ್ನು ಪೂರೈಸುವ ಒಂದು ಕಾರ್ಯಾಗಾರವಾಗಿಬಿಡುತ್ತದೆ.

ನನಗೆ ನಾಗೇಂದ್ರ ಸಾಗರ್ ಅವರ ಮನೆ ನೋಡಿದಾಗಲೂ ಇದೇ ಭಾವನೆ ಮೂಡುತ್ತದೆ; ಕೃಷಿಯನ್ನೇ ಬದುಕಿನ ಒಂದು ಸಮಗ್ರ ವ್ಯವಸ್ಥೆಯನ್ನಾಗಿ ಮಾಡಿಕೊಂಡಿರುವ ಮೌಲ್ಯವರ್ಧನೆಯ ಕಾರ್ಯಾಗಾರವಾಗಿ ಕಾಣಿಸುತ್ತದೆ. ಹಟ್ಟಿಯಿಂದ ಹಿಡಿದು ಐಸ್‌ಕ್ರೀಂ ತಯಾರಿಸುವ ಸ್ಥಾವರದವರೆಗೆ ಮನೆಯೊಳಗೆ ಒಂದೊಂದು ಬಾಗಿಲು ತೆರೆದುಕೊಳ್ಳುತ್ತದೆ. ಮನೆಯ ಒಡತಿ ವಾಣಿಶ್ರೀಯವರ ಕೈಚಳಕದಲ್ಲಿ ನಡೆಯುವ ಹೈನುಗಾರಿಕೆ, ಹಾಲಿನಿಂದ ರೂಪಾಂತರಗೊಳ್ಳುವ ಉತ್ಪನ್ನಗಳು, ತೋಟದಲ್ಲಿ ಬೆಳೆಯುವ ವಸ್ತುಗಳಿಗೆ ಸಿಗುವ ಹೊಸ ರೂಪ ಇವೆಲ್ಲ ಸೇರಿ ಆ ಮನೆಯ ಅಂಗಳಕ್ಕೆ ಒಂದು ವಿಭಿನ್ನ ಚೈತನ್ಯ ನೀಡುತ್ತವೆ.

ಮಲೆನಾಡಿನ ಮನೆಗಳು ಹಾಗೆಯೇ. ಮನೆಗಳಂತೆಯೇ ಅಲ್ಲಿನ ಮನಸ್ಸುಗಳೂ ವಿಸ್ತಾರವಾಗಿರುತ್ತವೆ ಎಂಬುದು ಕರ್ನಾಟಕಕ್ಕೆ ಗೊತ್ತಿರುವ ಸಂಗತಿ. ಮನೆಯ ಗೋಡೆಗಳು ಬೆಳೆಯುವಷ್ಟೇ ಬದುಕಿನ ಸಾಧ್ಯತೆಗಳನ್ನೂ ವಿಸ್ತರಿಸಿಕೊಳ್ಳುವ ಗುಣ ಅಲ್ಲಿನ ಕೃಷಿಕರದ್ದು. ನಾಗೇಂದ್ರ ಸಾಗರ್ ಅವರ ಕುಟುಂಬ ಇದಕ್ಕೆ ಮತ್ತೊಂದು ಜೀವಂತ ಉದಾಹರಣೆ.

ಅವರ ಮಹಾಮನೆಯಲ್ಲಿ ವಾಸಿಸುವುದು ಕೇವಲ ಮನುಷ್ಯರಲ್ಲ; ಮಣ್ಣು, ಸೆಗಣಿ, ಹಾಲು, ಎರೆಹುಳು, ಗಿಡ, ಹಣ್ಣು, ಹೂವು, ಕೃಷಿ ಉತ್ಪನ್ನ ಮತ್ತು ಅವುಗಳ ಮೌಲ್ಯವರ್ಧನೆಯ ಸಾಧ್ಯತೆಗಳೂ ಅಲ್ಲಿ ಬದುಕುತ್ತಿವೆ. ರೈತನ ಕೈಯಲ್ಲಿರುವ ಪ್ರತಿಯೊಂದು ವಸ್ತುವಿಗೂ ಒಂದು ಉಪಯೋಗವಿದೆ, ಪ್ರತಿಯೊಂದು ಉಪಯೋಗಕ್ಕೂ ಒಂದು ಆರ್ಥಿಕ ಸಾಧ್ಯತೆಯಿದೆ ಎಂಬುದನ್ನು ಈ ಮನೆ ಹೇಳುತ್ತದೆ.

ನಾಗೇಂದ್ರ ಅವರು ವರ್ಷಕ್ಕೆ ನಾಲ್ಕು ನೂರಕ್ಕೂ ಹೆಚ್ಚು ಟನ್ ಎರೆಗೊಬ್ಬರ ಉತ್ಪಾದಿಸುತ್ತಾರೆ ಎನ್ನುವುದು ಒಂದು ದೊಡ್ಡ ಸಂಖ್ಯೆಯಂತೆ ಕೇಳಿಸುತ್ತದೆ. ಆದರೆ ಅದರ ಹಿಂದಿರುವ ಚಿಂತನೆ ಇನ್ನೂ ದೊಡ್ಡದು. ತೋಟದಲ್ಲಿ ಬಿದ್ದ ಎಲೆ, ಕಸ, ಕಡ್ಡಿ, ಕೃಷಿ ತ್ಯಾಜ್ಯ ಸಾಮಾನ್ಯವಾಗಿ ನಾವು ‘ತ್ಯಾಜ್ಯ’ ಎಂದು ಬದಿಗೊತ್ತುವ ವಸ್ತುಗಳೇ ಅವರ ಪಾಲಿಗೆ ಎರೆಗೊಬ್ಬರದ ಮೂಲದ್ರವ್ಯ. ಅಂದರೆ ತೋಟದಿಂದ ಹೊರಗೆ ಹೋಗಬೇಕಾದ ಕಸವೇ ಮತ್ತೆ ತೋಟಕ್ಕೆ ಮರಳಿ ಬಂದು ಮಣ್ಣಿನ ಆಹಾರವಾಗುತ್ತದೆ.

ಇದು ಕೇವಲ ಎರೆಗೊಬ್ಬರ ತಯಾರಿಸುವ ವಿಧಾನವಲ್ಲ. ಕೃಷಿ ತನ್ನೊಳಗೆ ಉತ್ಪಾದಿಸುವ ತ್ಯಾಜ್ಯವನ್ನು ಮತ್ತೆ ಕೃಷಿಯೊಳಗೇ ಸಂಪತ್ತಾಗಿ ಪರಿವರ್ತಿಸುವ ಒಂದು ಪೂರ್ಣ ಚಕ್ರ. ಹೆಚ್ಚು ಎಕರೆ ಜಮೀನು ಹೊಂದಿರುವ ರೈತರಿಗೆ ಇದು ಬಹಳ ಮುಖ್ಯವಾದ ಪಾಠ. ತೋಟ ದೊಡ್ಡದಾದಷ್ಟೂ ಹೊರಗಿನಿಂದ ಗೊಬ್ಬರ, ಪೋಷಕಾಂಶ, ಒಳಸಾಮಗ್ರಿ ತಂದು ಸುರಿಯುವುದೇ ಕೃಷಿಯ ಮಾರ್ಗವಲ್ಲ; ತನ್ನ ತೋಟವೇ ಉತ್ಪಾದಿಸುವ ವಸ್ತುಗಳನ್ನು ಗುರುತಿಸಿ ಅವುಗಳ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದೂ ಕೃಷಿಯ ಬುದ್ಧಿವಂತಿಕೆ.

ನಾಗೇಂದ್ರ ಸಾಗರ್ ಅವರ ಮನೆ ದೊಡ್ಡದಾಗಿರುವುದಕ್ಕಿಂತ ಅದರೊಳಗೆ ಕೆಲಸ ಮಾಡುವ ಬುದ್ಧಿ ದೊಡ್ಡದಾಗಿದೆ. ಕೃಷಿಕನ ಕೈಯಲ್ಲಿ ಮಣ್ಣು ಇದ್ದರೆ ಸಾಕು ಎಂದು ಹಳೆಯವರು ಹೇಳುತ್ತಿದ್ದರು. ಇವತ್ತಿನ ಕಾಲದಲ್ಲಿ ಅದಕ್ಕೆ ಇನ್ನೊಂದು ಮಾತು ಸೇರಿಸಬೇಕಾಗಿದೆ: ಮಣ್ಣಿನ ಜೊತೆಗೆ ಯೋಚಿಸುವ ಬುದ್ಧಿಯೂ ಇದ್ದರೆ, ಅದೇ ಮಣ್ಣು ಬದುಕಿನ ಹಲವು ದಾರಿಗಳನ್ನು ತೆರೆದುಕೊಡುತ್ತದೆ.

ಹಾಗಾಗಿ ನಾಗೇಂದ್ರ ಸಾಗರ್ ಅವರ ಕುಟುಂಬದ ಕಥೆ ಮನೆಯೊಳಗೆ ವಾಸಿಸುವ ಮನುಷ್ಯರ ಕಥೆಯಾಗಿ ಮುಗಿಯುವುದಿಲ್ಲ. ಅದು ರೈತ ತನ್ನ ಜಮೀನು, ತನ್ನ ಶ್ರಮ ಮತ್ತು ತನ್ನ ಸುತ್ತಲಿನ ಸಂಪನ್ಮೂಲಗಳನ್ನು ಎಷ್ಟು ಸೃಜನಶೀಲವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಒಂದು ‘ಮಹಾಮನೆ’ಯ ಉದಾಹರಣೆ. ಮಲೆನಾಡಿನ ಈ ಮನೆಯ ಗೋಡೆಗಳು ವಿಸ್ತರಿಸಿರುವುದು ಕೇವಲ ಜಾಗಕ್ಕಾಗಿ ಅಲ್ಲ; ಅದರೊಳಗಿನ ಕೃಷಿ ಕಲ್ಪನೆಯೂ ವಿಸ್ತರಿಸುತ್ತಾ ಹೋಗಿದೆ.

ನಾಗೇಂದ್ರ ಸಾಗರ್ ಊರೂರು ಸುತ್ತಿ ಉತ್ಪನ್ನಗಳನ್ನು ತಲುಪಿಸುವ ಕೆಲಸದಲ್ಲಿರುವಾಗ ಈ ಮನೆಯ ಮತ್ತೊಂದು ಅರ್ಧವನ್ನು ಅವರ ಪತ್ನಿ ವಾಣಿಶ್ರೀ ನಡೆಸುತ್ತಾರೆ. ವಾಣಿಶ್ರೀ ಅವರ ಪಾತ್ರವನ್ನು ‘ಮನೆಯ ಕೆಲಸ’ ಎಂದು ಹೇಳಿ ಮುಗಿಸುವುದು ಈ ಕುಟುಂಬದ ಕಥೆಗೆ ಮಾಡುವ ದೊಡ್ಡ ಅನ್ಯಾಯ.

ಅಡುಗೆ ಮಾಡುವುದರಿಂದ ಹಿಡಿದು ಮಲೆನಾಡ ಐಸ್‌ಕ್ರೀಂ ಉತ್ಪಾದನಾ ಘಟಕ ನೋಡಿಕೊಳ್ಳುವುದು, ಕೃಷಿ ಆವರಣಕ್ಕೆ ಬರುವ ಯಾತ್ರಿಕರಿಗೆ ಜೇನುಪೆಟ್ಟಿಗೆ ತೆರೆದು ಜೇನುಕೃಷಿಯ ಪಾಠ ಹೇಳುವುದು, ಊರೂರು ಸುತ್ತಿ ತರಬೇತಿ ನೀಡುವುದು, ಕೆಲಸಗಾರರಿಗೆ ನಿರ್ದೇಶನ ಕೊಡುವುದು ಎಲ್ಲವನ್ನೂ ಅವರು ಮಾಡುತ್ತಾರೆ.

ನಾಗೇಂದ್ರ ಸಾಗರ್ ಅವರ ಯಶಸ್ಸಿನ ಹಿಂದೆ ವಾಣಿಶ್ರೀ ಅವರ ಪರಿಶ್ರಮವನ್ನು ಪಕ್ಕಕ್ಕೆ ಸರಿಸಿ ನೋಡಲು ಸಾಧ್ಯವೇ ಇಲ್ಲ. ಮಗಳು ವಕೀಲೆ ಶ್ರಾವ್ಯಸಾಗರ್, ಇವರ ಪತಿ ಸಚಿನ್ ಹೆಗಡೆ ವಕೀಲರೇ. ಇಬ್ಬರು ಸಾಗರದಲ್ಲಿ ಕ್ರಿಯಾಶೀಲರು. ಶ್ರಾವ್ಯ ವೃತ್ತಿಜೀವನದ ಜೊತೆಗೆ ಮನೆಯ ಐಸ್‌ಕ್ರೀಂ ಘಟಕದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಕಚೇರಿ ಮುಗಿಸಿ ಸಂಜೆ ಮನೆಗೆ ಬಂದ ಮೇಲೆ ಮೊಬೈಲ್ ಹಿಡಿದು ಮೂಲೆಯಲ್ಲಿ ಕುಳಿತುಕೊಳ್ಳುವ ಹೊಸ ತಲೆಮಾರಿನ ಸಾಮಾನ್ಯ ದೃಶ್ಯಕ್ಕಿಂತ ಈ ಮನೆಯಲ್ಲಿ ಬೇರೆಯದೇ ಚಿತ್ರವಿದೆ. ಶ್ರಾವ್ಯ ಒಂದು ಮೂಲೆಯಲ್ಲಿ ಕುಳಿತು ತಡರಾತ್ರಿಯವರೆಗೆ ಐಸ್ ಕ್ರೀಮ್ ಹಂಚಿಕೆಯ ಕೆಲಸ ಮಾಡುತ್ತಿದ್ದರೆ ಅಪ್ಪ-ಅಮ್ಮ ಅದೇ ಜಾಗದಲ್ಲಿ ಕೂತು ಲೋಕಾಭಿರಾಮವಾಗಿ ಮಾತನಾಡುತ್ತಾ ಬಾಟಲಿಗಳಿಗೆ ಜೇನು ತುಂಬಿಸುತ್ತಾರೆ. ತೋಟದಲ್ಲಿ ಮಿಕ್ಕುಳಿದ ಹಣ್ಣುಗಳನ್ನು ಹೊಸ ಉತ್ಪನ್ನ ತಯಾರಿಸುವ ಕೆಲಸದಲ್ಲಿ ತೊಡಗುತ್ತಾರೆ. ಆ ಮಾತುಕತೆಯ ನಡುವೆಯೇ ಮುಂದಿನ ದಿನದ ಕೃಷಿ ಯೋಜನೆಗಳೂ ಅಲ್ಲಿಯೇ ರೂಪುಗೊಳ್ಳುತ್ತವೆ. ಒಂದು ನಿಮಿಷವೂ ಹಾಳು ಮಾಡದೆ ಕೈಗೆ ಹೆಚ್ಚು ಕೆಲಸ ಕೊಡುವ ಈ ಕುಟುಂಬ ಸಂಸ್ಕೃತಿ ನನಗೆ ಈ ಮನೆಯ ಅತ್ಯಂತ ದೊಡ್ಡ ಸಂಪತ್ತು ಎನ್ನಿಸಿತು. ಇಷ್ಟೇ ಅಲ್ಲ, ತನ್ನೂರಿನ ಅನೇಕ ರೈತಾಪಿಗಳಿಗೆ ಡ್ರೈಯರ್, ಪುಡಿ ಮಾಡುವ ಸಣ್ಣ ಯಂತ್ರಗಳನ್ನು ಒದಗಿಸಿ, ತರಬೇತಿ ನೀಡಿ, ಉತ್ಪನ್ನಗಳನ್ನು ತಾವೇ ಖರೀದಿಸಿ, ಹೆಚ್ಚುವರಿ ದುಡಿಮೆಯ ಮೂಲಕ ಗಳಿಸುವ ಹಾಗೆ ಮಾಡಿದ್ದಾರೆ

ಇಂದು ಅನೇಕ ಕೃಷಿಕ ಕುಟುಂಬಗಳ ಮಕ್ಕಳು ನಗರ ಹುಡುಕಿಕೊಂಡು ಊರು ಬಿಡುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಶ್ರಾವ್ಯ ಮತ್ತು ಅವರ ಪತಿಯ ಕಥೆ ಒಂದು ಹೊಸ ಭರವಸೆಯನ್ನು ಹುಟ್ಟಿಸುತ್ತದೆ. ಕೃಷಿಯಲ್ಲಿ ಬೇರುಬಿಟ್ಟು, ವೃತ್ತಿಯನ್ನೂ ಮಾಡುತ್ತಾ, ಕುಟುಂಬದ ಕೃಷಿ ಉದ್ಯಮವನ್ನೂ ಮುಂದುವರಿಸುವ ಹೊಸ ತಲೆಮಾರು ಸಿದ್ಧವಾಗುತ್ತಿದೆ ಎಂಬ ಭರವಸೆಯದು. ಸಾಗರ್ ಅವರ ಕೃಷಿ ಆವರಣ ವರದಾ ನದಿಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ನಮ್ಮ ದೇಶದ ಅಧಿಕೃತ ದಾಖಲೆಗಳಲ್ಲೂ ಹೆಚ್ಚು ಕಾಣಿಸದ ಈ ನದಿಯ ಮೂಲವನ್ನು ಹುಡುಕಿಕೊಂಡು ಶ್ರಾವ್ಯ ಮಾಡಿದ ಕಿರುಚಿತ್ರ ಈಗಾಗಲೇ ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದಿದೆ.ಅಂದರೆ ಈ ಮನೆಯ ಮಗಳು ಕೃಷಿಯನ್ನು ಮಾತ್ರ ನೆಚ್ಚಿಕೊಂಡಿಲ್ಲ; ತನ್ನ ನೆಲದ ನದಿಯನ್ನೂ, ಪರಿಸರವನ್ನೂ, ಅದರ ಕಥೆಯನ್ನೂ ಹಚ್ಚಿಕೊಂಡಿದ್ದಾಳೆ.

ಸಾಗರ್ ಕುಟುಂಬವನ್ನು ನೋಡಿದಾಗ ನನಗೆ ಅನ್ನಿಸಿದ್ದು, ಕೃಷಿಯೆಂದರೆ ಕೇವಲ ಮಣ್ಣಿನಲ್ಲಿ ಬೆಳೆ ಬೆಳೆಸುವುದು ಅಲ್ಲ. ಮಣ್ಣಿನಿಂದ ಹುಟ್ಟಿದ ಪ್ರತಿಯೊಂದು ಸಾಧ್ಯತೆಯನ್ನು ಗುರುತಿಸುವುದು. ಅದಕ್ಕೆ ಮೌಲ್ಯ ಸೇರಿಸುವುದು. ಮೌಲ್ಯವರ್ಧಿತ ಉತ್ಪನ್ನವನ್ನು ಮಾರುಕಟ್ಟೆಗೆ ತಲುಪಿಸುವುದು. ತನ್ನ ಮನೆಯ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ಸುತ್ತಲಿನ ಕೃಷಿಕರಿಗೂ ಉಪಯೋಗವಾಗುವ ವ್ಯವಸ್ಥೆ ಕಟ್ಟುವುದು. ಎಲ್ಲಕ್ಕಿಂತ ಮುಖ್ಯವಾಗಿ, ಆ ಕೆಲಸದಲ್ಲಿ ಕುಟುಂಬದ ಪ್ರತಿಯೊಬ್ಬರೂ ಒಳಗೊಳ್ಳುವುದು.

ಸಾಗರ್ ಅವರ ಮನೆ ಆವರಿಸಿದ ಮುಕ್ಕಾಲು ಎಕರೆಯೊಳಗೆ ನಾನು ಕಂಡದ್ದು ಅದನ್ನೇ, ಒಂದು ಮನೆ ಹೇಗೆ ಸಣ್ಣ ಕೃಷಿ ಕೈಗಾರಿಕಾ ಪರಿಸರವಾಗಬಹುದು ಮತ್ತು ಕೃಷಿಯಲ್ಲಿಯೇ ಹೊಸ ತಲೆಮಾರಿಗೆ ಭವಿಷ್ಯವನ್ನು ಹೇಗೆ ಕಟ್ಟಿಕೊಡಬಹುದು ಎಂಬುದರ ಜೀವಂತ ಪಾಠವನ್ನು. ನೂರಾರು ಎಕರೆ ಜಮೀನು ಹೊಂದಿರುವುದೇ ಕೃಷಿಯ ಶಕ್ತಿ ಅಲ್ಲ. ಕೆಲವೇ ಎಕರೆ ಜಮೀನಿನ ಪ್ರತಿಯೊಂದು ಚದರ ಅಡಿಯನ್ನೂ ಅರ್ಥಮಾಡಿಕೊಂಡು, ಅದರೊಳಗಿರುವ ಸಾಧ್ಯತೆಗಳನ್ನು ಮೌಲ್ಯವರ್ಧಿಸಿ, ಆ ಮೌಲ್ಯವನ್ನು ನಂಬಿಕೆಯಾಗಿ ಮಾರುಕಟ್ಟೆಗೆ ಕೊಂಡೊಯ್ಯುವ ಸಾಮರ್ಥ್ಯವೇ ಕೃಷಿಯ ನಿಜವಾದ ಬಲ. ನಾಗೇಂದ್ರ ಸಾಗರ್ ಅವರ ಮನೆ ನನಗೆ ಅದನ್ನೇ ಹೇಳಿತು. ಅವರ ಐದು ಎಕರೆ ಜಮೀನು ಚಿಕ್ಕದಿರಬಹುದು. ಆದರೆ ಕೃಷಿಯ ಕನಸು ಚಿಕ್ಕದಾಗಿಲ್ಲ. ಸ್ಥಳೀಯ ಸಂಸದರ ಪ್ರಯತ್ನದಿಂದ ಸಾಗರ್, ಬಂದಗದ್ದೆ ಮೊದಲಾದವರ ನೇತೃತ್ವದಲ್ಲಿ ಮಲೆನಾಡ ಗಿಡ್ಡ ಹಸುವಿನ ಅಭಿವೃದ್ಧಿಗಾಗಿ ಆರಂಭವಾದ ಸಂಸ್ಥೆಯೊಂದು ಎರಡು ಮೂರು ವರ್ಷಗಳಲ್ಲೇ ತನ್ನ ಕಾಲ ಮೇಲೆ ನಿಂತಿರುವುದು ಗಮನಾರ್ಹ. ಮಲೆನಾಡ ಗಿಡ್ಡ ಹಸುವಿನ ಸಂತತಿ ಉಳಿಕೆಗೆ, ಗವ್ಯೋತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವುದರ ಜೊತೆಗೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ, ಮಣ್ಣು ಪರೀಕ್ಷೆ ಹಾಗೂ ಸ್ಥಳೀಯ ದೇಶಿ ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆಯನ್ನೂ ಸಂಸ್ಥೆ ಮಾಡುತ್ತಿದೆ.

ಸುಮಾರು ಆರುನೂರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿರುವ ಈ ಸಂಸ್ಥೆಯ ವಿಶೇಷವೆಂದರೆ, ಅದರ ನಿರ್ದೇಶಕರೂ ಸ್ಥಳೀಯ ರೈತರೇ. ರೈತರು ಕೇವಲ ಉತ್ಪಾದಕರಾಗಿ ಉಳಿಯದೆ, ತಾವೇ ಷೇರುದಾರರಾಗಿ, ಸಂಸ್ಥೆಯ ನಿರ್ವಹಣೆಯಲ್ಲೂ ಪಾಲುದಾರರಾಗಿದ್ದಾರೆ. ಎರಡು ಮೂರು ವರ್ಷಗಳಲ್ಲಿ ಸ್ವಾವಲಂಬಿಯಾಗಿರುವುದು ಈ ಪ್ರಯತ್ನದ ದೊಡ್ಡ ಹೆಗ್ಗಳಿಕೆ. ಕೃಷಿಯ ಸಮಸ್ಯೆಗಳಿಗೆ ಪರಿಹಾರವನ್ನು ಹೊರಗಿನಿಂದ ಹುಡುಕುವುದಕ್ಕಿಂತ, ರೈತರೇ ಸೇರಿ ತಮ್ಮದೇ ಸಂಸ್ಥೆ ಕಟ್ಟಿಕೊಳ್ಳಬಹುದು ಎನ್ನುವುದಕ್ಕೆ ಇದು ಮಲೆನಾಡಿನಲ್ಲಿ ಮೂಡುತ್ತಿರುವ ಒಂದು ಒಳ್ಳೆಯ ಉದಾಹರಣೆ. ಕರ್ನಾಟಕ ಕೃಷಿ ಕಥನ ಮಾಲಿಕೆಯಲ್ಲಿ ಮುಂದೆ ಈ ಕೃಷಿ ಸಾಧಕನ ಬಗ್ಗೆ ವಿಸ್ತಾರವಾಗಿ ಬರೆಯುವೆ, ಅಲ್ಲಿಯವರೆಗೆ ಇಷ್ಟೇ ಸಾಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನರೇಂದ್ರ ರೈ ದೇರ್ಲ

contributor

Similar News