×
Ad

ಮೈಸೂರು | ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ : ಪ್ರಕರಣ ದಾಖಲು

Update: 2026-01-18 00:39 IST

ಮೈಸೂರು : ಸರಕಾರದ ಸ್ವಾಧೀನಕ್ಕೆ ಪಡೆಯಬೇಕಾದ ಜಮೀನು ಪರಿಶೀಲನೆಗೆ ತೆರಳಿದ ಗ್ರಾಮ ಆಡಳಿತ ಮಹಿಳಾ ಅಧಿಕಾರಿ ಹಾಗೂ ಗ್ರಾಮ ಸಹಾಯಕನಿಗೆ ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ವರದಿಯಾಗಿದೆ.

ಕೊಲೆ ಬೆದರಿಕೆ ಹಾಕಿ ನಿಂದಿಸಿದ ವ್ಯಕ್ತಿ ವಿರುದ್ಧ ಮಹಿಳಾ ಅಧಿಕಾರಿ, ರಕ್ಷಣೆ ಕೋರಿ ಮೈಸೂರು ದಕ್ಷಿಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮ ಆಡಳಿತಾಧಿಕಾರಿ ಬಂಡೀಪಾಳ್ಯ ವೃತ್ತದ ಜಿ.ಭವ್ಯ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಎಂಬವರ ಮೇಲೆ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದ ನಿವಾಸಿ ಜಿ.ಎಂ. ಪುಟ್ಟಸ್ವಾಮಿ ಬೆದರಿಕೆ ಹಾಕಿದ ಆರೋಪಿ.

ಧಮ್ಕಿ ಹಾಕಿ ಕೊಲೆ ಬೆದರಿಕೆ ಹಾಕಿದ ದೃಶ್ಯಗನ್ನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿದೆ. ಈ ವೇಳೆ ಆರೋಪಿ ಪುಟ್ಟಸ್ವಾಮಿ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ವೀಡಿಯೊ ಡಿಲೀಟ್ ಮಾಡಿದರು ಎನ್ನಲಾಗಿದೆ.

ವರುಣಾ ಹೋಬಳಿಯ ಗುಡಮಾ ದನಹಳ್ಳಿಯಲ್ಲಿ ‘‘ ನಿಮ್ಹಾನ್ಸ್ ’’ ಮಾದರಿ ಆಸ್ಪತ್ರೆ ನಿರ್ಮಿಸಲು ಸರ್ವೇ ನಂ.8 ರಲ್ಲಿ 5 ಎಕರೆ 05 ಗುಂಟೆ, ಸರ್ವೇ ನಂ.60 ರಲ್ಲಿ 6 ಎಕರೆ 10 ಗುಂಟೆ ಹಾಗೂ ಸರ್ವೇ ನಂ.68 ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಜಾಗ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇದಾಗಿದೆ. ತಮ್ಮ ಸ್ವಕ್ಷೇತ್ರದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದರಾಮಯ್ಯ ಆಸಕ್ತಿ ತೋರಿದ ಹಿನ್ನೆಲೆಯಲಿ ಜಾಗ ಗುರುತಿಸಿ ಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಆದೇಶವಾಗಿದೆ. ಗುಡಮಾದನಹಳ್ಳಿಯಲ್ಲಿ ಗುರುತಿಸಲಾದ ಜಮೀನು ಪರಿಶೀಲನೆಗೆ ಮಹಿಳಾ ಅಧಿಕಾರಿ ಜಿ.ಭವ್ಯಾ ಹಾಗೂ ನವೀನ್ ಕುಮಾರ್ ತೆರಳಿದ್ದರು.

ಈ ವೇಳೆ ಸದರಿ ಜಮೀನಿನಲ್ಲಿ ಅನಧಿಕೃತವಾಗಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದ ಪುಟ್ಟಸ್ವಾಮಿ ದಿಢೀರ್ ಪ್ರತ್ಯಕ್ಷವಾಗಿ ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಎಂದು ಬೆದರಿಕೆ ಹಾಕಿ ನಿಂದಿಸಿದ್ದಾರೆ. ಪುಟ್ಟಸ್ವಾಮಿಯ ದೌರ್ಜನ್ಯ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಗ್ರಾಮ ಸಹಾಯಕ ನವೀನ್ ಕುಮಾರ್ ಗೂ ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡು ವೀಡಿಯೊ ಡಿಲೀಟ್ ಮಾಡಿಸಿರುವ ಆರೋಪ ಕೇಳಿ ಬಂದಿದೆ.

ಸರಕಾರಿ ಕೆಲಸವನ್ನ ನಿರ್ಭಯವಾಗಿ ನಿರ್ವಹಿಸಲು ಮಹಿಳಾ ಸಿಬ್ಬಂದಿಯಾದ ನನಗೆ ಭಯದ ವಾತಾವರಣ ಉಂಟು ಮಾಡಿರುವ ಪುಟ್ಟಸ್ವಾಮಿ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಭವ್ಯಾ ಪ್ರಕರಣ ದಾಖಲಿಸಿ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News