ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲದ ಚರ್ಚೆಗೆ ಪ್ರಧಾನಿ ಭೇಟಿಗೆ ಸಮಯ ಕೇಳಿದ್ದೇನೆ : ಸಿಎಂ ಡಿ.ಕೆ.ಶಿವಕುಮಾರ್
ಮೈಸೂರು : 'ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ಬರಗಾಲ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಅವರ ಭೇಟಿಗೆ ಸಮಯ ಕೇಳಿದ್ದೇನೆ. ವಿರೋಧ ಪಕ್ಷದವರು ಸೇರಿದಂತೆ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಅವರ ಭೇಟಿಗೆ ಬರಬೇಕು ಎಂದು ಮನವಿ ಮಾಡುವೆ. ವಿರೋಧ ಪಕ್ಷದ ನಾಯಕರು ಈ ಹಿಂದೆ ಬರುವುದಾಗಿ ಹೇಳಿದ್ದರು, ಈಗಲೂ ಬರುತ್ತಾರೆ ಎಂದು ಭಾವಿಸಿದ್ದೇನೆ" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ನಾನು ರೈತರೊಂದಿಗೆ ಮಾತನಾಡಿದ್ದು, ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮತ್ತೊಮ್ಮೆ ಮಾಧ್ಯಮಗಳ ಮೂಲಕ ಮನವಿ ಮಾಡುತ್ತೇನೆ. ಇಲ್ಲಿ ಎಲ್ಲರೂ ಕೂತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ವಿಚಾರದಲ್ಲಿ ರಾಜಕಾರಣ ಮಾಡಲು, ಯಾರ ವಿರುದ್ದ ಮಾತನಾಡುವುದರಲ್ಲಿ ಅರ್ಥವಿಲ್ಲ. ಬೇರೆಯವರು ಆ ರೀತಿ ಮಾಡಬಹುದು.ನಾನು ಮಾಡುವುದಿಲ್ಲ. ರಾಜ್ಯದ ಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಂಡಿರುವ ನಾನು ಕೇವಲ ದೋಷಣೆ ಮಾಡಬಾರದು. ಅದನ್ನು ನಾನು ಬೇರೆಯವರಿಗೆ ಬಿಟ್ಟಿದ್ದೇನೆ. ರೈತರು ಹಾಗೂ ಜನರಿಗೆ ಒಳ್ಳೆಯದಾಗಬೇಕು ಎಂಬುದು ನಮ್ಮ ಉದ್ದೇಶ. ರೈತರ ಬದುಕು ನಮಗೆ ಮುಖ್ಯ" ಎಂದು ತಿಳಿಸಿದರು.
ಕಬ್ಬಿನ ಬೆಂಬಲ ಬೆಲೆಗೆ ರಾಜ್ಯ ಸರ್ಕಾರ ಕೂಡ ಹಣ ನೀಡಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ ಸಿಎಂ ಅವರು, "ಈ ಬಗ್ಗೆ ಚರ್ಚೆ ಮಾಡೋಣ. ರಾಜ್ಯದಲ್ಲಿ ಎಲ್ಲಾ ರೀತಿಯ ರೈತರು ಇದ್ದಾರೆ. ಎಲ್ಲರ ಬಗ್ಗೆ ನಾವು ಆಲೋಚಿಸಬೇಕು" ಎಂದರು.
ಕಲಬುರ್ಗಿಯಲ್ಲಿ ಶಂಕಿತ ಉಗ್ರ ಸಿಕ್ಕಿ ಬಿದ್ದಿರುವ ಬಗ್ಗೆ ಪ್ರಶ್ನಿಸಿದಾಗ, "ಈ ಬಗ್ಗೆ ಮಾಹಿತಿ ಸಂಗ್ರಹಿಸಿ, ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವತಂತ್ರ ನೀಡುತ್ತೇನೆ. ಇಂತಹ ವಿಚಾರದಲ್ಲಿ ನಾವು ರಾಜಕೀಯ ಹೇಳಿಕೆ ನೀಡಬಾರದು" ಎಂದರು.
2028ಕ್ಕೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುತ್ತದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೇಳಿಕೆ ನೀಡಿದ್ದಾರೆ ಎಂದು ಕೇಳಿದಾಗ, "ದೇವರು ಅವರಿಗೆ ಒಳ್ಳೆಯದು ಮಾಡಲಿ. ಮೆಜಾರಿಟಿ ಬರಲಿಲ್ಲ ಅಂದರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದರಲ್ಲ? ಅದನ್ನು ಮಾಡಿ ತೋರಿಸಲಿಲ್ಲ.
ಕೇರಳ, ತೆಲಂಗಾಣ ಮುಖ್ಯಮಂತ್ರಿಗಳು ಆಗಮನ
'ಕೇರಳ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳ ಬರುತ್ತಿದ್ದಾರೆ. ಆಂಧ್ರದವರು ನನಗೆ ಆಹ್ವಾನ ನೀಡಿದ್ದಾರೆ. ಆದರೆ ಅಲ್ಲಿಗೆ ಹೋಗಲು ಆಗಲಿಲ್ಲ. ನಾನು ಹೋಗಿ ನೀರಿನ ವಿಚಾರ ಮಾತಾಡಬೇಕು ಅಂದು ಕೊಂಡಿದ್ದೆ. ಆದರೆ, ಕಬ್ಬು ಬೆಳೆಯುವ ರೈತರ ಭೇಟಿಗಾಗಿ ಹೋದೆ' ಎಂದರು.