ಮೈಸೂರು : ರಾಜ್ಯದಲ್ಲಿ ಜೂನ್‌ನಿಂದ 1,225 ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದ ಕರ್ನಾಟಕ ಕಲಾಮಂದಿರದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026 ಅಂಗವಾಗಿ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ಸಿಎಸ್‌ಆರ್ ಅನುದಾನಲ್ಲೂ 1,000 ಶಾಲೆಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ.ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (ಕೆಪಿಎಸ್) ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಪ್ರತೀ ತರಗತಿಗೆ ಒಬ್ಬರು ಶಿಕ್ಷಕರು ಹಾಗೂ ಕೌಶಲ ಅಭಿವೃದ್ಧಿ, ನಾಟಕ, ದೈಹಿಕ ಹಾಗೂ ಸಂಗೀತ ಶಿಕ್ಷಣಕ್ಕೆ ಪ್ರತ್ಯೇಕ ಶಿಕ್ಷಕರು ಇರಲಿದ್ದಾರೆ. ಅಲ್ಲದೇ ಮಕ್ಕಳಿಗೆ ಇಲಾಖೆಯಿಂದಲೇ ಜೂನ್ ತಿಂಗಳಿಂದ ಉಚಿತ ಬಸ್ ವ್ಯವಸ್ಥೆಯನ್ನು ಸಹ ಮಾಡಲಾಗುವುದು ಎಂದರು.

ಶಿಕ್ಷಣ ಸಚಿವನಾಗಿ ನಾಲ್ಕನೇ ಬಾರಿಗೆ ಮಕ್ಕಳ ದಸರಾ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಸರಕಾರದಿಂದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ, ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಸಾಧನೆಗೈದ ಮಕ್ಕಳಿಗೆ ಸಚಿವರಿಂದ ಸನ್ಮಾನ: ಕಲಾವಿದೆ ಬೆಂಗಳೂರಿನ ಕು.ಟಿ.ಬಿ.ರಚನಾ, ಕ್ರೀಡಾಪಟು ಮೈಸೂರಿನ ಮೇದಿನಿ ಗ್ರಾಮದ ತನುಶ್ರೀ, ವಿಶೇಷ ಚೇತನ ಕ್ರೀಡಾಪಟು ಧಾರವಾಡದ ವಿನಾಯಕ ಹಳ್ಳಿಕೇರಿ ಅವರನ್ನು ಸಚಿವ ಮಧು ಬಂಗಾರಪ್ಪಸನ್ಮಾನಿಸಿದರು. ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಹಾಗೂ ಉಪ ಕಾರ್ಯದರ್ಶಿ(ಆಡಳಿತ) ಬಿ.ಎನ್.ಸವಿತಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ಚೂಡಾಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಆರ್.ನಾಗರಾಜು, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಉದಯ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor