ಮೈಸೂರು: "ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ 2027ರಲ್ಲಿ ಮೂರು ದಿನಗಳ ಕಾಲ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಈ ಕುರಿತು ಮುಂದಿನ ಬಜೆಟ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಘೋಷಿಸಿದರು.

ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯಿಲಿಯವರ "ವಿಶ್ವಸಂಸ್ಕೃತಿಯ ಮಹಾಯಾನ (ಸಂಪುಟ 4)- ಗದ್ಯ ಮಹಾಕಾವ್ಯವನ್ನು ಮೈಸೂರಿನ ಊಟಿ ರಸ್ತೆಯ ಜೆಎಸ್ ಎಸ್ ವಿದ್ಯಾಸಂಸ್ಥೆಯಲ್ಲಿ ಬುಧವಾರ ಲೋಕಾರ್ಪಣೆ ಮಾಡಿ ಮಾತನಾಡಿದರು.

"ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ವಿದೇಶಗಳಲ್ಲಿಯೂ ಕನ್ನಡಕ್ಕೆ ಅಪಾರ ಗೌರವ ನೀಡುತ್ತಿರುವ ಕನ್ನಡಿಗರನ್ನು ಒಂದೆಡೆ ಸೇರಿಸಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ಉದ್ದೇಶವಿದೆ" ಎಂದರು.

"ಜಗತ್ತು ಒಂದಾಗಬೇಕಾದರೆ ಮೊದಲು ಮನುಷ್ಯರು ಒಂದಾಗಬೇಕು. ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿ ರೂಪಿಸುವುದೇ ಧರ್ಮ ಮತ್ತು ಸಂಸ್ಕೃತಿ. ರಾಜಕೀಯದಲ್ಲಿರುವ ನಮ್ಮ ಹೆಸರುಗಳು ಭವಿಷ್ಯದಲ್ಲಿ ಮರೆಯಾಗಬಹುದು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಹೆಸರು ಮತ್ತು ಅವರ ಚಿಂತನೆಗಳು ಶಾಶ್ವತವಾಗಿ ಉಳಿಯುತ್ತವೆ. ಶಿಕ್ಷಣ ಮತ್ತು ಸಾಹಿತ್ಯ ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಧನಗಳಾಗಿವೆ" ಎಂದು ಹೇಳಿದರು.

ಸಾಹಿತ್ಯದ ಪ್ರಭಾವ ಶಾಶ್ವತ

"ಸಾಹಿತ್ಯ ಮತ್ತು ರಾಜಕಾರಣದ ನಂಟು ಹೊಸದೇನಲ್ಲ. ಅಧಿಕಾರವನ್ನು ಬಳಸಿಕೊಂಡು ಜನರ ಬದುಕಿನಲ್ಲಿ ಬದಲಾವಣೆ ತರಬಹುದು. ಆದರೆ ಸಾಹಿತ್ಯದ ಮೂಲಕ ಜನರ ಆಲೋಚನೆಗಳನ್ನೇ ಬದಲಾಯಿಸಬಹುದು. ಅಧಿಕಾರದ ಅವಧಿ ಸೀಮಿತವಾದರೂ ಸಾಹಿತ್ಯದ ಪ್ರಭಾವ ಶಾಶ್ವತ. ಒಬ್ಬ ವ್ಯಕ್ತಿಯ ಬದುಕು ಮುಗಿದರೂ ಆತ ಬರೆದ ಚಿಂತನೆಗಳಿಗೆ ಸಾವಿಲ್ಲ" ಎಂದು ಅಭಿಪ್ರಾಯಪಟ್ಟರು.

"ಮನುಷ್ಯ ಬದುಕಲು ಆಹಾರ ಎಷ್ಟು ಮುಖ್ಯವೋ, ಆತ್ಮತೃಪ್ತಿಗೆ ಸಾಹಿತ್ಯ ಮತ್ತು ಕಲೆ ಅಷ್ಟೇ ಮುಖ್ಯ. ಕತ್ತಲೆಯನ್ನು ದೂರ ಮಾಡಲು ಬೆಳಕು ಬೇಕು. ಅಜ್ಞಾನವನ್ನು ದೂರ ಮಾಡಲು ಸಾಹಿತ್ಯ ಮತ್ತು ಸಂಸ್ಕೃತಿ ಬೇಕು. ಅಭಿವೃದ್ಧಿಗೆ ಸಂಪತ್ತು ಅಗತ್ಯವಾದರೆ, ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮೌಲ್ಯಗಳು ಅಗತ್ಯ. ಸಂಸ್ಕೃತಿ ನಮ್ಮ ಗುರುತು, ಮಾನವೀಯತೆ ನಮ್ಮ ಅಸ್ತಿತ್ವ. ನಮ್ಮ ಕಾಯಕಗಳು ಬೇರೆಬೇರೆಯಾಗಿರಬಹುದು, ಆದರೆ ಮಾನವೀಯ ಭಾವನೆಗಳು ಒಂದೇ ಆಗಿರಬೇಕು"ಎಂದರು.

"ಎಲ್ಲ ಭಾಷೆಗಳ ಸಾಹಿತ್ಯ, ಕಾವ್ಯ, ಶಾಯರಿ ಮತ್ತು ಸಂಗೀತಗಳಲ್ಲಿಯೂ ಮಾನವೀಯ ಭಾವನೆಗಳ ಅಭಿವ್ಯಕ್ತಿ ಕಾಣಬಹುದು. ಎಲ್ಲ ಧರ್ಮಗಳಲ್ಲಿಯೂ ಮಾನವೀಯತೆ ಮತ್ತು ಸಂಸ್ಕೃತಿಯನ್ನು ಬೆಸೆಯುವ ಮೌಲ್ಯಗಳಿವೆ. ಇಂತಹ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಸಾಹಿತ್ಯ ಲೋಕದ ಪಾತ್ರ ಬಹಳ ದೊಡ್ಡದು" ಎಂದರು.

"ವೀರಪ್ಪ ಮೊಯ್ಲಿ ಅವರ ಸಾಹಿತ್ಯಿಕ ಹಾಗೂ ರಾಜಕೀಯ ಕೊಡುಗೆಗಳು ಅಪಾರ. 1985ರಲ್ಲಿ ತಮಗೆ, ಎಚ್.ಎಂ. ರೇವಣ್ಣ, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ಯುವ ನಾಯಕರಿಗೆ ರಾಜೀವ್ ಗಾಂಧಿ ಅವರೊಂದಿಗೆ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರಕಿಸಿಕೊಡುವಲ್ಲಿ ವೀರಪ್ಪ ಮೊಯ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ರಾಜಕೀಯ ಜೀವನದಲ್ಲಿ ಹಲವು ಯುವ ನಾಯಕರಿಗೆ ಅವಕಾಶ ಕಲ್ಪಿಸಿದ ಅವರು, ಇಂದು ಸಾಹಿತ್ಯ ಲೋಕದಲ್ಲಿಯೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ" ಎಂದು ಸ್ಮರಿಸಿದರು.

"ವೀರಪ್ಪ ಮೊಯ್ಲಿ ಅವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ಅವರ 'ರಾಮಾಯಣ ಮಹಾನ್ವೇಷಣಂ' ಕೃತಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿ ಲಭಿಸಿದೆ. ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಕುರಿತಂತೆ ಅವರು ಬರೆದಿರುವ ಭಾಗವನ್ನು ಪ್ರತ್ಯೇಕ ಪುಸ್ತಕವಾಗಿ ಪ್ರಕಟಿಸುವಂತೆ ಮನವಿ ಮಾಡಿದ್ದೇನೆ. ಇದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೆ ಜ್ಞಾನಪೀಠ ಸೇರಿದಂತೆ ಇನ್ನಷ್ಟು ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳು ಲಭಿಸಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor