ಮೈಸೂರು : ಮುಡಾದಲ್ಲಿ 2019 ರಿಂದ 2023ರವರೆಗೆ ಹಂಚಿಕೆಯಾಗಿರುವ ಎಲ್ಲ 50:50 ನಿವೇಶನಗಳನ್ನು ರದ್ದುಪಡಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ 50:50 ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಿದರು.

ಈ ಅವಧಿಯಲ್ಲಿ ಹಂಚಿಕೆಯಾಗಿರುವ 1,000ಕ್ಕೂ ಅಧಿಕ ನಿವೇಶನಗಳನ್ನು ರದ್ದುಪಡಿಸಲಾಗಿದೆ. ಸಂಪೂರ್ಣ ಆದೇಶವನ್ನು ಮುಡಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದ್ದು, ಆದೇಶ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎಂದರು.

50:50 ನಿವೇಶನ ಪಡೆದು ಮನೆ ನಿರ್ಮಿಸಿಕೊಂಡಿರುವವರ ಪಟ್ಟಿಯನ್ನೂ ತರಿಸಲಾಗುತ್ತಿದೆ. ಸದ್ಯಕ್ಕೆ ಎಲ್ಲ ನಿವೇಶನಗಳನ್ನೂ ರದ್ದುಪಡಿಸಲಾಗಿದೆ. ಕಾನೂನಾತ್ಮಕ ಹೋರಾಟ ನಡೆಯುತ್ತಿರುವ ನಿವೇಶನಗಳ ವಿಚಾರದಲ್ಲಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

2018ಕ್ಕಿಂತ ಹಿಂದೆಯೇ ನಿವೇಶನ ಪಡೆದಿರುವ ಪ್ರಕರಣಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲಿ ಅಕ್ರಮ ಕಂಡುಬಂದರೆ ಅಂತಹ ನಿವೇಶನಗಳನ್ನೂ ರದ್ದುಪಡಿಸಲಾಗುವುದು ಎಂದರು.

ರಸ್ತೆ ನಿರ್ಮಾಣಕ್ಕಾಗಿ ತಮ್ಮ ಜಮೀನು ಬಿಟ್ಟುಕೊಟ್ಟು ಪರಿಹಾರ ಪಡೆದ ಕೆಲವರು ಕೂಡ ನಿವೇಶನ ಪಡೆದಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. 50:50 ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಯಾವುದೇ ತಪ್ಪು ಮಾಡಿಲ್ಲ:

ಸಚಿವ ನಾಗೇಂದ್ರ ಅವರು ಯಾವುದೇ ತಪ್ಪು ಮಾಡಿಲ್ಲ. ಅವರ ವಿಚಾರದಲ್ಲಿ ತಪ್ಪು ಕಂಡುಬಂದಿದ್ದರೆ ಬಿಜೆಪಿಯವರು ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ ಬಿಜೆಪಿ ಸದಸ್ಯರು ಗದ್ದಲ ನಡೆಸಿ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor