ಮೈಸೂರು: ಶಾಸಕ ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ; ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

Update: 2026-08-03 14:15 IST

ಮೈಸೂರು: ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿರುವ ಬಗ್ಗೆ  ವರದಿಯಾಗಿದೆ.

ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ವಿಷಯ ತಿಳಿಯುತ್ತಿದ್ದಂತೆ ಸೋಮವಾರ ಉದಯಗಿರಿಯಲ್ಲಿರುವ ಶಾಸಕರ ನಿವಾಸದ ಎದುರು ಜಮಾಯಿಸಿದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ತಬ್ರೇಝ್ ಸೇಠ್ ಎಂಬ ಅಭಿಮಾನಿ ವಿಷದ ಬಾಟಲಿ ತೆಗೆದು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮತ್ತು ಕಾರ್ಯಕರ್ತರು ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ತಿಳಿದು ಬಂದಿದೆ.

ಈ ವೇಳೆ ಮನೆಯಿಂದ ಹೊರಬಂದ ಶಾಸಕ ತನ್ವೀರ್ ಸೇಠ್ ಅಭಿಮಾನಿಗಳನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ, ಅಭಿಮಾನಿಗಳು ಮಾತ್ರ ಸುಮ್ಮನಾಗಲಿಲ್ಲ. ಶಾಸಕ ತನ್ವೀರ್ ಸೇಠ್, ವಿಷ ಕುಡಿದ ವ್ಯಕ್ತಿಯ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News