ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಗೆ ಗುರುವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅದ್ದೂರಿಯಾಗಿ ಚಾಲನೆ ನೀಡಿದರು.

ಈ ಬಾರಿಯ ಜಂಬೂಸವಾರಿಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಪ್ರಶಾಂತ ಆನೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ್ದು ವಿಶೇಷವಾಗಿತ್ತು. ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಚಾಮುಂಡೇಶ್ವರಿ ತಾಯಿಯ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು.

ಬಿರುಬಿಸಿಲಿನ ನಡುವೆಯೂ 416ನೇ ವಿಜಯದಶಮಿ ಮೆರವಣಿಗೆ ವೈಭವದಿಂದ ಸಾಗಿತು. ನಾಡಿನ ಶ್ರೀಮಂತ ಸಂಸ್ಕೃತಿಯನ್ನು ಬಿಂಬಿಸುವ ಕಲಾತಂಡಗಳು ಹಾಗೂ ಸರ್ಕಾರದ ಸಾಧನೆಗಳನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ಲಕ್ಷಾಂತರ ಜನರು ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.

ಶುಭ ಮೀನ ಲಗ್ನದಲ್ಲಿ ಪುಷ್ಪಾರ್ಚನೆ :

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಂಜೆ 4.10ರಿಂದ 4.35ರವರೆಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಚಿನ್ನದ ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ತಾಯಿಯ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ಆನೆಗಳು ಸೊಂಡಿಲೆತ್ತಿ ನಮಸ್ಕರಿಸಿದವು. ಪೊಲೀಸ್ ಬ್ಯಾಂಡ್ ತಂಡ ರಾಷ್ಟ್ರಗೀತೆಯನ್ನು ನುಡಿಸಿತು. ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸಲಾಯಿತು.

ಈ ಬಾರಿ ಕೇರಳ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಾದ ವಿ.ಡಿ.ಸತೀಶನ್ ಹಾಗೂ ರೇವಂತ್ ರೆಡ್ಡಿ ಅವರು ಚಾಮುಂಡೇಶ್ವರಿ ತಾಯಿ ವಿರಾಜಮಾನಳಾಗಿದ್ದ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಮೈಸೂರು ರಾಜವಂಶಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಹಾಗೂ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಮಧ್ಯಾಹ್ನ ಅರಮನೆಗೆ ಆಗಮಿಸಿ, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಧ್ಯಾಹ್ನ 1.36ರಿಂದ 1.56ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಿದರು. ಬಳಿಕ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.

ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಆನೆಗಳು :

ಜಂಬೂಸವಾರಿ ಮೆರವಣಿಗೆಯಲ್ಲಿ ಮೊದಲಿಗೆ ಅಭಿಮನ್ಯು ಆನೆ ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿತು. ಬಳಿಕ ನೌಫತ್ ಆನೆ ಗೋಪಿ, ಸಾಲಾನೆಗಳಾದ ಲಕ್ಷ್ಮಿ, ಮಹೇಂದ್ರ, ಶ್ರೀರಾಮ, ಚೈತ್ರ, ಸುಗ್ರೀವ ಹಾಗೂ ಏಕಲವ್ಯ ಸೇರಿದಂತೆ ಆನೆಗಳು ಮೆರವಣಿಗೆಯಲ್ಲಿ ಸಾಗಿದವು.

ಮೊದಲ ಬಾರಿಗೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಕ್ಯಾಪ್ಟನ್ ಪ್ರಶಾಂತ ಆನೆ ರಾಜಗಾಂಭೀರ್ಯದಿಂದ ರಾಜಬೀದಿಯಲ್ಲಿ ಹೆಜ್ಜೆ ಹಾಕಿತು. ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪ ಅದರೊಂದಿಗೆ ಸಾಗಿದವು. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಶ್ರೀಚಾಮುಂಡೇಶ್ವರಿ ತಾಯಿಯ ಮೂರ್ತಿಯೊಂದಿಗೆ ಪ್ರಶಾಂತ ಆನೆ ಜನಸ್ತೋಮದತ್ತ ಬರುತ್ತಿದ್ದಂತೆ ‘ಜೈ ಚಾಮುಂಡೇಶ್ವರಿ’ ಘೋಷಣೆಗಳು ಮೊಳಗಿದವು. 

ಆನೆಗಳ ಮೆರವಣಿಗೆಗೆ ಅಶ್ವಾರೋಹಿ ಪಡೆ, ನಾದಸ್ವರ ತಂಡ ಹಾಗೂ ಕಮಾಂಡೊ ಪಡೆಯ ಬಿಗಿಭದ್ರತೆ ಸಾಥ್ ನೀಡಿದವು. ಕನ್ನಡ ಚಿತ್ರರಂಗದ ತಾರೆಯರು ಹಾಗೂ ಕ್ರೀಡಾಲೋಕದ ಗಣ್ಯರನ್ನು ಕಂಡ ಜನರು ಹರ್ಷೋದ್ಗಾರಗಳನ್ನು ಕೂಗಿದರು. ಒಟ್ಟು ಒಂಬತ್ತು ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸಹೋದ್ಯೋಗಿಗಳು ಕಲಾತಂಡಗಳು ಮತ್ತು ಸ್ತಬ್ಧಚಿತ್ರಗಳ ಮೆರವಣಿಗೆಯನ್ನು ವೀಕ್ಷಿಸಿದರು. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ತಾಯಿಯ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಲು ಶಿಷ್ಟಾಚಾರದಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ರಾಜ್ಯದ ಮುಖ್ಯ ಕಾರ್ಯದರ್ಶಿ, ರಾಜವಂಶಸ್ಥರು, ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಸಚಿವರು, ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ವೇದಿಕೆ ಏರಲು ಅವಕಾಶವಿರುತ್ತದೆ. ಆದರೆ, ಈ ಬಾರಿ ಕೇರಳ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳಿಗೂ ಪುಷ್ಪಾರ್ಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆ :

ಅರಮನೆಯಿಂದ ಆರಂಭಗೊಂಡ ಜಂಬೂಸವಾರಿ ಮೆರವಣಿಗೆಯು ಅರಮನೆ ಆವರಣ, ಜಯಚಾಮರಾಜ ವೃತ್ತ, ಕೃಷ್ಣರಾಜೇಂದ್ರ ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಆರ್‌ಎಂಸಿ ವೃತ್ತ ಹಾಗೂ ಬಂಬೂಬಜಾರ್ ಮೂಲಕ ಬನ್ನಿಮಂಟಪ ತಲುಪಿತು.

ಮೆರವಣಿಗೆ ಸಾಗುವ ರಸ್ತೆಗಳ ಇಕ್ಕೆಲಗಳಲ್ಲಿ ಸಾವಿರಾರು ಮಂದಿ ನೆರೆದಿದ್ದರು. ನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಕಲಾತಂಡಗಳು, ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು ಹಾಗೂ ಚಿನ್ನದ ಅಂಬಾರಿಯಲ್ಲಿ ಸಾಗಿದ ಚಾಮುಂಡೇಶ್ವರಿ ತಾಯಿಯ ಮೂರ್ತಿಯನ್ನು ಜನರು ಕಣ್ತುಂಬಿಕೊಂಡರು. ಕೆಲವರು ಬೆಳಗ್ಗೆಯೇ ಬಂದು ರಸ್ತೆಯ ಬದಿಯಲ್ಲಿ ಸ್ಥಳ ಕಾಯ್ದಿರಿಸಿ, ಸಂಜೆವರೆಗೂ ಕಾದು ಜಂಬೂಸವಾರಿಯನ್ನು ವೀಕ್ಷಿಸಿ ಸಂತಸಪಟ್ಟರು.

ವಿವಿಧ ಇಲಾಖೆಗಳು, ಜಿಲ್ಲೆಗಳ ಸ್ತಬ್ಧಚಿತ್ರಗಳ ಆಕರ್ಷಣೆ :

ಜಂಬೂಸವಾರಿಯಲ್ಲಿ ರಾಜ್ಯದ ವಿವಿಧ ಇಲಾಖೆಗಳು, ಜಿಲ್ಲೆಗಳು, ಅಭಿವೃದ್ಧಿ ನಿಗಮಗಳು ಹಾಗೂ ಇತರ ಸಂಸ್ಥೆಗಳ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಶಕ್ತಿಯೋಜನೆಯಡಿ ಕೆಂಪೇಗೌಡ ಬಸ್ ನಿಲ್ದಾಣದ ಮಾದರಿ, ಹಾಲು ಉತ್ಪಾದಕರ ಸಹಕಾರ ಸಂಘದ ನಂದಿನಿ ಉತ್ಪಾದನಾ ಘಟಕ, ಮೈಸೂರು ಸ್ಯಾಂಡಲ್ ಸೋಪ್, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಅರ್ಪಣೆಯ ಪರಿಕಲ್ಪನೆ, ಭಾರತ್ ಜೋಡೊ ಯುವ ಸಂಘ ಯೋಜನೆ ಹಾಗೂ ಕಾರ್ಮಿಕ ಇಲಾಖೆಯ ‘ಶ್ರಮಕ್ಕೆ ಗೌರವ, ಬದುಕಿಗೆ ಭದ್ರತೆ’ ಎಂಬ ಸಂದೇಶ ಸಾರುವ ಸ್ತಬ್ಧಚಿತ್ರಗಳು ಗಮನ ಸೆಳೆದವು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಪರಮಾಣು ವಿಜ್ಞಾನಿ ಡಾ.ರಾಜಾರಾಮಣ್ಣ ಅವರ ಸ್ಮರಣೆ, ತುಮಕೂರು ಜಿಲ್ಲೆಯ ಸಮಗ್ರ ಇತಿಹಾಸ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಶಿವಮೊಗ್ಗ ಜಿಲ್ಲೆಯ ಹಸೆ ಚಿತ್ತಾರ ಹಾಗೂ ಮಲೆನಾಡಿನ ಜನಪದ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿದ್ದವು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜನಪರ ಕೊಡುಗೆಗಳು ಮತ್ತು ಸಮಾನತೆಯ ಸಂದೇಶ, ಯಾದಗಿರಿಯ ಬೋನಾಳ ಪಕ್ಷಿಧಾಮ ಹಾಗೂ ದಬದಬಿ ಜಲಪಾತ, ಮೈಸೂರು ಮೃಗಾಲಯ, ಚಾಮರಾಜನಗರ ಜಿಲ್ಲೆಯ ಅರಣ್ಯ ಸಂಪತ್ತಿನೊಳಗಿನ ಪುಣ್ಯಕ್ಷೇತ್ರಗಳು, ಜಾನಪದ ಪರಂಪರೆ ಹಾಗೂ ಅರಣ್ಯದೊಳಗಿನ ಧಾರ್ಮಿಕ ಸ್ಥಳಗಳನ್ನು ಬಿಂಬಿಸುವ ‘ಚಲುವ ಚಾಮರಾಜನಗರ’ ಸ್ತಬ್ಧಚಿತ್ರಗಳು ಜನರ ಗಮನ ಸೆಳೆದವು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ), ಹಾಸನ ಜಿಲ್ಲೆ, ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್‌ಇ), ಬೀದರ್ ಜಿಲ್ಲೆ, ತುಳುನಾಡಿನ ಸಂಸ್ಕೃತಿ, ಪವರ್‌ಗ್ರಿಡ್, ಮಂಡ್ಯ ಜಿಲ್ಲೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಬೆಳಗಾವಿ ಜಿಲ್ಲೆಯ ಬೆಳವಾಡಿ ಮಲ್ಲಮ್ಮ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ ಜಿಲ್ಲೆ ಹಾಗೂ ಕರ್ನಾಟಕ ಬೋವಿ ಅಭಿವೃದ್ಧಿ ನಿಗಮದ ಸ್ತಬ್ಧಚಿತ್ರಗಳೂ ಮೆರವಣಿಗೆಯಲ್ಲಿ ಸಾಗಿದವು.

ಇತಿಹಾಸದಲ್ಲಿ ಮೊಟ್ಟಮೊದಲ ದಸರಾ ಆಚರಣೆಯೊಂದಿಗೆ ಗುರುತಿಸಿಕೊಂಡ ವಿಜಯನಗರ ಜಿಲ್ಲೆ, ಮೈಸೂರು ಹೋಟೆಲ್ ಮಾಲಕರ ಸಂಘದ ವತಿಯಿಂದ ಮೈಸೂರು ಪಾಕ್‌ನ ರಾಜಪರಂಪರೆಯ ಸವಿರುಚಿ, ಕೋಲಾರದ ಸೋಮೇಶ್ವರ ದೇವಾಲಯ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ಚಿಕ್ಕಬಳ್ಳಾಪುರ ಜಿಲ್ಲೆಯ ದಕ್ಷಿಣ ಭಾರತದ ಜಲಿಯನ್‌ವಾಲಾಬಾಗ್ ಎಂದೇ ಗುರುತಿಸಲ್ಪಡುವ ವಿದುರಾಶ್ವತ್ಥ, ಬಿಇಎಂಎಲ್, ಹಾವೇರಿ ಜಿಲ್ಲೆ ಹಾಗೂ ಕೌಶಲಾಭಿವೃದ್ಧಿ ಇಲಾಖೆಯ ಸ್ತಬ್ಧಚಿತ್ರಗಳು ಮೆರವಣಿಗೆಯ ಭಾಗವಾಗಿದ್ದವು.

ಕೇರಳಂ ರಾಜ್ಯ, ಉತ್ತರ ಕನ್ನಡ ಜಿಲ್ಲೆಯ ಸಾಂಪ್ರದಾಯಿಕ ಕಲೆ ಮತ್ತು ಪ್ರಕೃತಿ ವೈಭವ, ತಮಿಳುನಾಡು ರಾಜ್ಯ, ‘ಭದ್ರ ಬುನಾದಿಯಿಂದ ಭವಿಷ್ಯದತ್ತ ಮೈಸೂರು’ ಎಂಬ ಪರಿಕಲ್ಪನೆ, ಟಿಬೆಟಿಯನ್ ವಸಾಹತು, ನೆಪ್ರೊ-ಯೂರಾಲಜಿ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ, ನವನಗರ ಮಂಗಳೂರು ಪ್ರಾಧಿಕಾರ, ಎಚ್‌ಎಂಟಿ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾಫಿ ಮಂಡಳಿ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಭಾರತೀಯ ರೈಲ್ವೆಯ ಸ್ತಬ್ಧಚಿತ್ರಗಳು ಮೆರವಣಿಗೆಯನ್ನು ಶ್ರೀಮಂತಗೊಳಿಸಿದವು.

ಇದರೊಂದಿಗೆ ಸಿಎಸ್‌ಐಆರ್‌ನ ರಾಷ್ಟ್ರೀಯ ವೈಮಾನಿಕ ಪ್ರಯೋಗಶಾಲೆಗಳು, ಕೊರಗಜ್ಜ ಸಮುದಾಯ, ಭಾರತೀಯ ವಾಯುಪಡೆ, ಭಾರತೀಯ ನೌಕಾಪಡೆ ಹಾಗೂ ಭಾರತೀಯ ಸೇನೆಯ ಸ್ತಬ್ಧಚಿತ್ರಗಳೂ ಸಾಗಿದವು.

ವೈವಿಧ್ಯಮಯ ಕಲಾತಂಡಗಳ ಪ್ರದರ್ಶನ :

ಜಂಬೂಸವಾರಿ ಮೆರವಣಿಗೆಯಲ್ಲಿ ನಾಡಿನ ವಿವಿಧ ಭಾಗಗಳ ಹಾಗೂ ಹೊರರಾಜ್ಯಗಳ ಕಲಾತಂಡಗಳು ತಮ್ಮ ಸಾಂಪ್ರದಾಯಿಕ ಕಲೆಗಳನ್ನು ಪ್ರದರ್ಶಿಸಿದವು. ನಾದಸ್ವರ, ಹಾಲಕ್ಕಿ ಕುಣಿತ, ಪುರವಂತಿಕೆ, ಕೊಂಬು-ಕಹಳೆ, ವೀರಭದ್ರ ಕುಣಿತ, ಮಣಿಪುರಿ ಜನಪದ ಕಲೆ, ತಮಿಳುನಾಡಿನ ಸಾಂಪ್ರದಾಯಿಕ ಇರಯ ನಡುನಮ್, ಕೀಲುಕುದುರೆ, ಚಿಟ್ಟಿಮೇಳ, ಮಹಿಳಾ ಕೋಲಾಟ, ಹಳ್ಳಿಕಾರ್ ತಳಿ ಎತ್ತುಗಳ ಪ್ರದರ್ಶನ, ಶಹನಾಯಿ ಹಾಗೂ ತಾಸೆ ವಾದನಗಳು ಮೆರವಣಿಗೆಗೆ ಮೆರುಗು ನೀಡಿದವು.

ಚಿತ್ರದುರ್ಗ ಜಿಲ್ಲೆಯ ಖಾಸಾ ಬೇಡರ ಪಡೆ, ಕಡುಬಿ ನೃತ್ಯ, ಪೂಜಾ ಕುಣಿತ, ಮಹಿಳಾ ವೀರಗಾಸೆ, ಗೊರವರ ಕುಣಿತ, ಜಗ್ಗಲಿಗೆ, ಕಂಗೀಲು ನೃತ್ಯ, ತಮಟೆ, ಗೋರುಕನ ನೃತ್ಯ, ಮಹಿಳಾ ಡೊಳ್ಳು, ಗಾರುಡಿ ಗೊಂಬೆ, ಸತ್ತಿಗೆ ಕುಣಿತ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಡಮಾಮಿ ನೃತ್ಯಗಳು ಜನರ ಗಮನ ಸೆಳೆದವು.

ಕರಾವಳಿ ಕರ್ನಾಟಕದ ಹುಲಿವೇಷ, ಪೂತನತಿರಾ ನೃತ್ಯ, ತುಳುನಾಡಿನ ಯಕ್ಷಗಾನ, ಸೋಮನ ಕುಣಿತ, ಸಿಂಗಾರಿ ಮೇಳಂ, ದತ್ತಿ ಕುಣಿತ, ತಮಿಳುನಾಡಿನ ಪ್ರಾಚೀನ ಜನಪದ ಕರಗಟ್ಟಂ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಕೊಂಬು ಕೋಯ, ಲಂಬಾಣಿ ನೃತ್ಯ, ಪಟಕುಣಿತ, ಹಕ್ಕಿಪಿಕ್ಕಿ ನೃತ್ಯ, ನಗಾರಿ ಹಾಗೂ ಕರಡಿ ಮಜಲು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಮಧ್ಯಪ್ರದೇಶದ ಗಂಗೌರ್ ಜನಪದ ನೃತ್ಯ, ಬೀಸು ಕಂಸಾಳೆ, ಮಹಾರಾಷ್ಟ್ರದ ಸಾಂಪ್ರದಾಯಿಕ ಗೊಂಡಾಳ್ ನೃತ್ಯ, ಜುಮುರ್ ಜನಪದ ಕಲೆ ಹಾಗೂ ಗುಜರಾತಿನ ಗರ್ಭಾ ನೃತ್ಯಗಳು ಸಾಂಸ್ಕೃತಿಕ ವೈವಿಧ್ಯವನ್ನು ಅನಾವರಣಗೊಳಿಸಿದವು. ಪೊಲೀಸ್ ಬ್ಯಾಂಡ್, ನೌಕಾಪಡೆಯ ಬ್ಯಾಂಡ್ ಹಾಗೂ ಸೇನೆಯ ಬ್ಯಾಂಡ್‌ಗಳು ಮೆರವಣಿಗೆಯ ಆಕರ್ಷಣೆಯನ್ನು ಹೆಚ್ಚಿಸಿದವು.

ವಿವಿಧ ರಾಜ್ಯಗಳ ಸಾಂಪ್ರದಾಯಿಕ ಕಲೆಗಳು, ನಾಡಿನ ಜನಪದ ಪರಂಪರೆ, ಸರ್ಕಾರದ ಯೋಜನೆಗಳು ಹಾಗೂ ದೇಶದ ರಕ್ಷಣಾ ಪಡೆಗಳ ಸಾಧನೆಗಳನ್ನು ಬಿಂಬಿಸಿದ ಸ್ತಬ್ಧಚಿತ್ರಗಳು ಮತ್ತು ಕಲಾತಂಡಗಳ ಪ್ರದರ್ಶನದೊಂದಿಗೆ ಮೈಸೂರು ದಸರಾ ಜಂಬೂಸವಾರಿ ವಿಜೃಂಭಣೆಯಿಂದ ಸಾಗಿತು.

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor