ಮೈಸೂರು/ಟಿ.ನರಸೀಪುರ: ಸಂಘ ಪರಿವಾರದವರು ಕರೆ ನೀಡಿದ್ದ ಶೋಭಾಯಾತ್ರೆಯು ಶುಕ್ರವಾರ ಟಿ.ನರಸೀಪುರದಲ್ಲಿ ನಡೆಯಿತು.

ಕಾಲೇಜು ರಸ್ತೆ, ಲಿಂಕ್ ರಸ್ತೆ, ಮಾರ್ಕೆಟ್ ರಸ್ತೆ ಮೂಲಕ ಬಂದ ಮೆರವಣಿಗೆಯು ಗುಂಜಾನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂತ್ಯಗೊಂಡಿತು.

ವಿದ್ಯಾನಗರದಿಂದ ಬಂದ ಯಾತ್ರೆ ಮಸೀದಿ ರಸ್ತೆಗೆ ಬರುತ್ತಿದ್ದಂತೆ ಘೋಷಣೆಗಳು ಮೊಳಗಿದವು. ಮಸೀದಿ ಬಳಿ ಮಾತನಾಡಿದ ಮಾಜಿ ಸಂಸದ ಪ್ರತಾಪ ಸಿಂಹ, ‘‘ಇನ್‌ಸ್ಪೆಕ್ಟರ್ ಧನಂಜಯ ಮಸೀದಿ ಮುಂದೆ ಹೋದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಹೇಳಿದ್ದಿಯಲ್ಲ. ಬಾರಪ್ಪ, ಈಗ ಮಸೀದಿ ಮುಂದೆ ಬಂದಿದ್ದೇವೆ’’ ಎಂದು ಪ್ರಚೋದನಕಾರಿಯಾಗಿ ಭಾಷಣ ಮಾಡಿದರು.

‘‘ಖಾಕಿ ಹಾಕಿದ್ದೀನಿ ಅಂತ ದರ್ಪದಲ್ಲಿ ಗ್ರಹಚರ ಬಿಡಿಸುತ್ತಿನಿ ಅಂತ ಹೇಳಿದ್ಯಲ್ಲ, ನಾವು ಕಟ್ಟೊ ಟ್ಯಾಕ್ಸ್ ದುಡ್ಡಿನಿಂದ ನಿನಗೆ ಪಗಾರ್ ಕೊಡೊದು.ಇನ್ನು ಒಂದೂವರೆ ವರ್ಷ. ಆಮೇಲೆ ನಾವು ಅಧಿಕಾರಕ್ಕೆ ಬರುತ್ತೇವೆ ಅವಾಗ ಲೆಕ್ಕ ಚುಕ್ತಾ ಮಾಡ್ತೀವಿ’’ ಎಂದು ಅವರು ಪೊಲೀಸರಿಗೆ ಧಮ್ಕಿ ಹಾಕಿದರು. ಶೋಭಾ ಯಾತ್ರೆ ಮಸೀದಿ ರಸ್ತೆಗೆ ಬರುತ್ತಿದ್ದಂತೆ ಮಸೀದಿ ಮುಂದೆ ಪೊಲೀಸರು ಸರ್ಪಗಾವಲು ಹಾಕಿ ಬಂದೋಬಸ್ತ್ ಮಾಡಿದರು.

ಪೊಲೀಸ್ ಡ್ರೋನ್ ಕ್ಯಾಮರಾ ನಿರಂತರವಾಗಿ ಕಣ್ಗಾವಲಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಖುದ್ದು ಪ್ರಭಾರ ಐಜಿಪಿ ವಿಷ್ಣುವರ್ಧನ್ ಸ್ಥಳದಲ್ಲೇ ಎಲ್ಲಾ ವ್ಯವಸ್ಥೆಯನ್ನು ನೋಡಿಕೊಂಡರು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಉಸ್ತುವಾರಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ಮೆರವಣಿಗೆ ನಡೆಯಿತು.

ದಸಂಸದವರು ಅಂಬೇಡ್ಕರ್ ಬಗ್ಗೆ ತಿಳಿದುಕೊಂಡಿಲ್ಲ: ಪ್ರತಾಪ್ ಸಿಂಹ

ದಲಿತ ಸಂಘರ್ಷ ಸಮಿತಿಯವರು ಮೊದಲು ಅಂಬೇಡ್ಕರ್ ಅವರನ್ನು ಸರಿಯಾಗಿ ಓದಿಕೊಳ್ಳಬೇಕು. ಒಬ್ಬ ಕಳಪೆ ಅಧಿಕಾರಿ ಧನಂಜಯ ನಿಮ್ಮ ಜಾತಿಯವನು ಎಂಬ ಕಾರಣಕ್ಕೆ ದಸಂಸದವರು ಅವನ ಸಮರ್ಥನೆಗೆ ಇಳಿದಿರುವುದು ಎಷ್ಟು ಸರಿ? ನಾವು ಬಿಜೆಪಿಯವರು ಏನ್ ಮಾಡಿದರೂ ದಲಿತ ಸಂಘರ್ಷ ಸಮಿತಿಯವರು ನೀಲಿ ಶಾಲು ಹಾಕಿಕೊಂಡು ಅದಕ್ಕೆ ಅಡ್ಡ ಬರುತ್ತಾರೆ. ದಲಿತ ಸಂಘರ್ಷ ಸಮಿತಿಯವರು ಐದು ಪೈಸೆಯಷ್ಟೂ ಅಂಬೇಡ್ಕರ್ ಬಗ್ಗೆ ತಿಳಿದುಕೊಂಡಿಲ್ಲ ಎಂದು ಪ್ರತಾಪ ಸಿಂಹ ವಾಗ್ದಾಳಿ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor