ಮೈಸೂರು : ಜಾತಿ ವ್ಯವಸ್ಥೆ ಮತ್ತು ಬಂಡವಾಳ ಶಾಹಿಗಳ ಪರಿಣಾಮ ಶಿಕ್ಷಣ, ಉದ್ಯೋಗ, ಆರ್ಥಿಕತೆ ಹಾಗೂ ಆಡಳಿತ ಕ್ಷೇತ್ರಗಳಲ್ಲಿ ಜಾತಿಯ ಪ್ರಭಾವ ಗಾಢವಾಗಿದ್ದು, ಇಂತಹ ಸಂದರ್ಭದಲ್ಲಿ ಮೀಸಲಾತಿಯನ್ನು ಕೇವಲ ಉಳಿಸಿಕೊಳ್ಳುವುದಷ್ಟೇ ಅಲ್ಲ, ಅದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ಚಿಂತಕ ಶಿವಸುಂದರ್ ಹೇಳಿದ್ದಾರೆ.

ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಗುರುವಾರ ನಡೆದ ‘ಪ್ರಸ್ತುತ ಅಸಮಾನತೆಯ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯ ಅಗತ್ಯತೆ ಮತ್ತು ಮೀಸಲಾತಿಯ ಬಗ್ಗೆ ಅಪಸ್ವರದ ಹುನ್ನಾರಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಖಾಸಗಿ ಉದ್ಯೋಗ ಕ್ಷೇತ್ರದಲ್ಲಿನ ನೇಮಕಾತಿ ಪ್ರಕ್ರಿಯೆಗಳಲ್ಲಿ ಜಾತಿ ಆಧಾರಿತ ತಾರತಮ್ಯ ನಡೆಯುತ್ತಿರುವುದನ್ನು ಹಲವು ಅಧ್ಯಯನಗಳು ತೋರಿಸಿವೆ. ‘ಮೆರಿಟ್’ ಪ್ರಧಾನವಾಗಿದ್ದರೆ ಒಂದೇ ವಿದ್ಯಾರ್ಹತೆ ಹೊಂದಿರುವ ಎಲ್ಲರಿಗೂ ಸಮಾನವಾಗಿ ಸಂದರ್ಶನದ ಅವಕಾಶ ಸಿಗಬೇಕಿತ್ತು. ಆದರೆ, ಬ್ರಾಹ್ಮಣರನ್ನು ಸೂಚಿಸುವ ಸರ್‌ನೇಮ್ ಹೊಂದಿರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂದರ್ಶನದ ಅವಕಾಶ ದೊರೆತರೆ, ದಲಿತ ಹಾಗೂ ಮುಸ್ಲಿಮ್ ಹಿನ್ನೆಲೆಯನ್ನು ಸೂಚಿಸುವ ಹೆಸರುಗಳಿರುವವರಿಗೆ ಅವಕಾಶ ಕಡಿಮೆಯಾಗಿದೆ ಎಂದರು.

ಶಿಕ್ಷಣ ಕ್ಷೇತ್ರದ ಖಾಸಗೀಕರಣದಿಂದ ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯುವುದು ಮತ್ತಷ್ಟು ಕಷ್ಟವಾಗುತ್ತಿದೆ. ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾದರೂ ಅವುಗಳಲ್ಲಿ ಬಹುಪಾಲು ಖಾಸಗಿ ವಲಯದಲ್ಲಿವೆ ಎಂದರು.

ಖಾಸಗಿ ವಲಯದಲ್ಲಿ ಮೀಸಲಾತಿ ಅಗತ್ಯ: 1991ರ ಆರ್ಥಿಕ ಉದಾರೀಕರಣ, ಖಾಸಗೀಕರಣದ ಬಳಿಕ ಸರ್ಕಾರಿ ವಲಯದ ಉದ್ಯೋಗಗಳ ಪ್ರವಾಣ ಕುಸಿದಿದೆ. ಖಾಸಗಿ ವಲುಂದಲ್ಲಿಯೂ ಮೀಸಲಾತಿ ಜಾರಿಗೆ ತರಬೇಕು. ಸರ್ಕಾರದ ಹಣ ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುವ ಖಾಸಗಿ ಸಂಸ್ಥೆಗಳು ಎಷ್ಟು ಉದ್ಯೋಗ ಸೃಷ್ಟಿಸುತ್ತಿವೆ ಎಂಬುದನ್ನು ಪ್ರಶ್ನಿಸಬೇಕು. ಸರ್ಕಾರಿ ವಲಯದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಹೊರಗುತ್ತಿಗೆಗೆ ಒತ್ತು ನೀಡುವುದರಿಂದ ಮೀಸಲಾತಿಯ ಉದ್ದೇಶವೇ ದುರ್ಬಲವಾಗುತ್ತಿದೆ ಎಂದು ಹೇಳಿದರು.

ಸರ್ಕಾರದ ಕ್ರಮಗಳಿಂದ ದಲಿತ, ಆದಿವಾಸಿ ಹಾಗೂ ಇತರ ಹಿಂದುಳಿದ ಸಮುದಾಯಗಳ ದೊಡ್ಡ ಪ್ರವಾಣದ ಜನರು ಇನ್ನೂ ಆರ್ಥಿಕವಾಗಿ ದುರ್ಬಲರಾಗಿದ್ದಾರೆ. ಅವರಿಗೆ ಭೂಮಿ, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಅಧಿಕಾರದ ಅವಕಾಶಗಳು ದೊರೆಯಬೇಕು. ಸರ್ಕಾರದ ಬಳಿಯಿರುವ ಭೂಮಿಯನ್ನು ಭೂಹೀನರಿಗೆ ಹಂಚಿಕೆ ಮಾಡುವ ಬದಲು ಕೈಗಾರಿಕೆಗಳು ಹಾಗೂ ಭೂಸ್ವಾಧೀನ ಗೋಜನೆಗಳಿಗೆ ಬಳಸುವುದರಿಂದ ಸಾಮಾಜಿಕ ಅಸಮಾನತೆ ಹೆಚ್ಚಿಸುತ್ತಿದೆ. ಸಂಪತ್ತು ಕೆಲವೇ ವರ್ಗಗಳ ಕೈಯಲ್ಲಿ ಕೇಂದ್ರೀಕೃತವಾಗಿರುವವರೆಗೆ ನಿಜವಾದ ರಾಜಕೀಯ ಸ್ವಾತಂತ್ರ್ಯ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಹಿರಿಯ ಹೋರಾಟಗಾರ ಕೆ.ಎನ್.ಲಿಂಗಪ್ಪ ಮಾತನಾಡಿ, ಮೀಸಲಾತಿ ಅಪವ್ಯಾಖ್ಯಾನದ ಬಗ್ಗೆ ಆಂದೋಲನ ರೂಪಿಸಬೇಕು ಮತ್ತು ಮೀಸಲಾತಿ ಕಡಿತ ಮಾಡಿರುವುದರ ವಿರುದ್ಧ ನ್ಯಾಯಾಲಯದಲ್ಲಿಯೂ ಹೋರಾಟ ಮಾಡಬೇಕು. ಮೀಸಲಾತಿಯನ್ನು ಹಿಂದೆಯೂ ವಿರೋಧಿಸಿದ್ದರೂ ಈಗಲೂ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ದಸಂಸ ಮೈಸೂರು ವಿಭಾಗೀಯ ಸಂಚಾಲಕ ರಾಜಶೇಖರ ಕೋಟೆ, ದಸಂಸ ರಾಜ್ಯ ಸಂಘಟನಾ ಸಂಚಾಲಕ ದೇವಗಳ್ಳಿ ಸೋಮಶೇಖರ್, ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ಜಾನಕಮ್ಮ ಲಕ್ಷ್ಮೀನಾರಾಯಣ, ಜಿಲ್ಲಾ ಸಂಚಾಲಕಿ ಜಯಲಕ್ಷ್ಮೀ ರಂಗಸ್ವಾಮಿ, ಶ್ರೀಕಂಠಸ್ವಾಮಿ, ಮಂಜು ಎಸ್‌ಆರ್‌ಎಸ್, ಉಮಾಶಂಕರ್, ಸಣ್ಣಸ್ವಾಮಿ, ಆಲಗೂಡು ಶಿವಣ್ಣ ಉಪಸ್ಥಿತರಿದ್ದರು.

ಮೀಸಲಾತಿ ಪ್ರಾತಿನಿಧ್ಯವನ್ನು ಒದಗಿಸುವ ಪ್ರಮುಖ ಸಾಧನವಾದರೂ, ಅದು ಮಾತ್ರ ಸಾಮಾಜಿಕ ನ್ಯಾಯದ ಅಂತಿಮ ಪರಿಹಾರವಲ್ಲ. ಸಂಪತ್ತು, ಜ್ಞಾನ ಮತ್ತು ಅಧಿಕಾರ ಈ ಮೂರೂ ಎಲ್ಲರಿಗೂ ಸಮಾನವಾಗಿ ಲಭ್ಯವಾಗುವಂತೆ ಮಾಡುವ ಮೂಲಕವೇ ನಿಜವಾದ ಪ್ರಜಾತಂತ್ರ ನಿರ್ಮಾಣ ಸಾಧ್ಯ. ಜಾತಿ ವ್ಯವಸ್ಥೆ ಮತ್ತು ಆರ್ಥಿಕ ಅಸಮಾನತೆ ಪರಸ್ಪರ ಸಂಬಂಧ ಹೊಂದಿದೆ. ಆದರೆ, ನಾವೀಗ ಫ್ಯಾಸಿಸ್ಟ್ ಕಾಲಘಟ್ಟದಲ್ಲಿದ್ದೇವೆ. ದಲಿತರು-ದಮನಿತರು ವಂಚನೆಗೆ ಒಳಗಾದವರು ಬಲಿಷ್ಠವಾಗಿ ಒಗ್ಗೂಡಿ ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನೇ ಕಟ್ಟಬೇಕು.

-ಶಿವಸುಂದರ್, ಚಿಂತಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor