ಪುರುಷರ ರಕ್ಷಣೆಗೆ ಪುರುಷ ಆಯೋಗ ರಚನೆ ಮಾಡಿ: ಎಚ್. ವಿಶ್ವನಾಥ್ ಒತ್ತಾಯ
ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್
ಮೈಸೂರು: ಇತ್ತೀಚಿನ ದಿನಗಳಲ್ಲಿ ಪುರುಷರ ಮೇಲೂ ದೌರ್ಜನ್ಯ ಆಗುತ್ತಿದೆ. ಪುರುಷರ ರಕ್ಷಣೆಗೆ ಕಾನೂನು ಇಲ್ಲ. ಹಾಗಾಗಿ ಪುರುಷ ಅಯೋಗ ರಚನೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ತೊಂದರೆ ಆದರೆ ಪೊಲೀಸರು ಬರ್ತಾರೆ. ಹೆಣ್ಮಕ್ಕಳ ರಕ್ಷಣೆಗೆ ಕಾನೂನು ಇದೆ. ತ್ವರಿತವಾಗಿ ಬಂಧಿಸುವ ಕೆಲಸ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಪುರುಷರ ಮೇಲು ದೌರ್ಜನ್ಯ ಆಗ್ತಿದೆ. ಅನೇಕ ಕಡೆ ಹೆಂಡತಿ ಗಂಡನನ್ನ ಕೊಲೆ ಮಾಡೋದು. ಹಿಂಸೆ ಕೊಡೋದು ಇಂತಹ ಘಟನೆ ನಡೆಯುತ್ತಿದೆ. ಹೀಗಾಗಿ ರಾಷ್ಟ್ರೀಯ ಪುರುಷರ ರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಇದರಲ್ಲಿ ಮಹಿಳೆಯರೂ ಇದ್ದಾರೆ. ಪುರುಷರ ಮೇಲಿನ ದೌರ್ಜನ್ಯ ತಡೆಯಲು ಈ ಸಮಿತಿ ಇರುತ್ತದೆ. ಇದನ್ನು ಕಾನೂನಾತ್ಮಕವಾಗಿಯೇ ನಾವು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.
ಮಹಿಳಾ ಕಾನೂನುಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪುರುಷರಿಗೂ ಈಗ ರಕ್ಷಣೆ ಸಿಗಬೇಕಿದೆ. ಕೆಲ ಕಾನೂನುಗಳು ತಿದ್ದುಪಡಿ ಆಗಬೇಕು. ಮಹಿಳೆಯರಿಗೆ ಮಹಿಳಾ ಆಯೋಗ ಇದೆ. ಅದೇ ರೀತಿ ಪುರುಷರ ಆಯೋಗ ಕೂಡ ಆಗಬೇಕು. ಅದು ಕಾನೂನಾತ್ಮಕವಾಗಿಯೇ ಆಗಬೇಕು ಎಂದು ಹೇಳಿದರು.