ಆರೆಸ್ಸೆಸ್‌ನ ಇಮೇಜ್ ಉಳಿಸಿಕೊಳ್ಳಲು ಮೋಹನ್ ಭಾಗವತ್ ʼಮುಸ್ಲಿಮರು ನಮ್ಮ ಬಾಂಧವರುʼ ಎಂದಿದ್ದಾರೆ : ಸಚಿವ ರಿಝ್ವಾನ್ ಅರ್ಷದ್
"ಶಾಸಕ ತನ್ವೀರ್ ಸೇಠ್ಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಅಸಮಾಧಾನ ಇಲ್ಲ"
ಮೈಸೂರು : ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೆಸ್ಸೆಸ್‌ನ ಇಮೇಜ್ ಉಳಿಸಿಕೊಳ್ಳುವ ಉದ್ದೇಶದಿಂದ ʼಮುಸ್ಲಿಮರು ನಮ್ಮ ಬಾಂಧವರುʼ ಎಂದು ಹೇಳಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ಷದ್ ಹೇಳಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆವರಣದಲ್ಲಿ ಬುಧವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, “ನಾವು ಹೇಳುವುದು ಒಂದು, ಮಾಡುವುದು ಒಂದು ಎಂಬಂತಾಗಬಾರದು. ಮೋಹನ್ ಭಾಗವತ್ ಅವರ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಅವರು ಈ ದೃಷ್ಟಿಯಿಂದಾದರೂ ಮುಸ್ಲಿಮರನ್ನು ನಮ್ಮ ಬಾಂಧವರು ಎಂದಿರುವುದು ಸಂತೋಷದ ಸಂಗತಿ” ಎಂದರು.
ಆದರೆ ಬಿಜೆಪಿ ಹಾಗೂ ಆರೆಸ್ಸೆಸ್‌ನ ಹಲವು ನಾಯಕರು ಬಹಿರಂಗವಾಗಿ ಮುಸ್ಲಿಮರ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಂಡು ಪಕ್ಷದಿಂದ ಹೊರಹಾಕಿದಾಗ ಮಾತ್ರ ಮೋಹನ್ ಭಾಗವತ್ ಅವರ ಮಾತನ್ನು ನಂಬಬಹುದು ಎಂದು ಅವರು ಹೇಳಿದರು.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದಲ್ಲಿ ದಾಖಲಿಸಿರುವ ಎಫ್‌ಐಆರ್ ಅನ್ನು ಖಂಡಿಸಿದ ಸಚಿವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಸ್ಥಳವನ್ನು ಶುದ್ಧೀಕರಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದೆ, ಅದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧವೇ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.
ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ಶುದ್ಧೀಕರಣ ಮಾಡಿದವರ ಕ್ರಮವನ್ನು ಸಮರ್ಥಿಸುವ ಸಂದೇಶವನ್ನು ಬಿಜೆಪಿ ಸರ್ಕಾರ ನೀಡಿದೆ. ಆದರೆ ಇಂತಹ ಎಫ್‌ಐಆರ್‌ಗಳಿಗೆ ರಾಹುಲ್ ಗಾಂಧಿ ಹೆದರುವುದಿಲ್ಲ ಎಂದು ಹೇಳಿದರು.
ಶಾಸಕ ತನ್ವೀರ್ ಸೇಠ್ ಅವರ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಿಝ್ವಾನ್ ಅರ್ಷದ್, “ತನ್ವೀರ್ ಸೇಠ್ ಪಕ್ಷದ ಹಿರಿಯ ನಾಯಕರು. ಎರಡು ಬಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡು ಪಕ್ಷದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಯಾವುದೇ ಅಸಮಾಧಾನ ಇಲ್ಲ” ಎಂದು ಸ್ಪಷ್ಟಪಡಿಸಿದರು.