ಬೆಂಗಳೂರು | ಸಿಜೆಐ ಸೂರ್ಯಕಾಂತ್ ಭಾಗವಹಿಸಿದ NLSIU ಘಟಿಕೋತ್ಸವಕ್ಕೆ 105 ಪದವೀಧರರು ಗೈರು
ಸೂರ್ಯಕಾಂತ್ (Photo: The New Indian Express)
ಬೆಂಗಳೂರು: ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (ಎನ್ಎಲ್ಎಸ್ಐಯು)ಯ ಈ ವರ್ಷದ ಘಟಿಕೋತ್ಸವಕ್ಕೆ 105 ಪದವೀಧರರು ಗೈರು ಹಾಜರಿಯಾಗಿದ್ದಾರೆ. ಕಳೆದ ವರ್ಷ ಕೇವಲ 17 ಮಂದಿ ಮಾತ್ರ ಗೈರು ಹಾಜರಾಗಿದ್ದರು.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರು ಘಟಿಕೋತ್ಸವದಲ್ಲಿ ಭಾಗವಹಿಸುವುದನ್ನು ವಿರೋಧಿಸಿ 2026ನೇ ಸಾಲಿನ ಪದವೀಧರರು ಸೇರಿದಂತೆ ವಿಶ್ವವಿದ್ಯಾಲಯದ ಹಾಲಿ ಮತ್ತು ಹಳೆಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಘಟಿಕೋತ್ಸವವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಬಳಿಕ ಶನಿವಾರ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾರಂಭ ನಡೆಯಿತು.
ಈ ವರ್ಷದ ಘಟಿಕೋತ್ಸವ ನಡೆಯುವ ಬಗ್ಗೆ ಆರಂಭದಿಂದಲೂ ಅನಿಶ್ಚಿತತೆ ಇತ್ತು. ಅಕ್ಟೋಬರ್ 7ರಂದು ವಿಶ್ವವಿದ್ಯಾಲಯವು ಸಿಜೆಐ ಸೂರ್ಯಕಾಂತ್ ಮತ್ತು ನಟಿ ಅರುಂಧತಿ ನಾಗ್ ಅವರ ಭಾಗವಹಿಸುವಿಕೆಯನ್ನು ದೃಢಪಡಿಸಿ ಅಧಿಕೃತ ಪತ್ರವ್ಯವಹಾರ ನಡೆಸಿದ ಬಳಿಕ ಸಿಜೆಐ ಸಮಾರಂಭದ ಅಧ್ಯಕ್ಷತೆ ವಹಿಸುವುದು ಖಚಿತವಾಗಿತ್ತು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಘಟಿಕೋತ್ಸವದಲ್ಲಿ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಎನ್ಎಲ್ಎಸ್ಐಯುನ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ಆಕ್ಷೇಪ ಸಲ್ಲಿಸಿದ್ದರು. ಹೈದರಾಬಾದ್ನ NALSAR ಕಾನೂನು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಸಿಜೆಐ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿದ ವಿದ್ಯಾರ್ಥಿಗಳ ಪದವಿ ನೋಂದಣಿಗೆ ತಡೆ ನೀಡುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಈ ಹಿಂದೆ ಸೂಚಿಸಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಜೆಐ ಭಾಗವಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಘಟಿಕೋತ್ಸವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನಡುವೆ, ಬೆಂಗಳೂರಿನಲ್ಲಿ ನಡೆದ ಎನ್ಎಲ್ಎಸ್ಐಯು ಘಟಿಕೋತ್ಸವದಲ್ಲಿ 105 ವಿದ್ಯಾರ್ಥಿಗಳು ಗೈರುಹಾಜರಿಯಲ್ಲೇ ಪದವಿ ಪಡೆದಿದ್ದಾರೆ.