ಕೋಲ್ಕತ್ತಾ ಕಾಲ್ತುಳಿತ ದುರಂತದಲ್ಲಿ ಕನಿಷ್ಠ 19 ಮಂದಿ ಮೃತ್ಯು | ಜನಸಂದಣಿ ನಿರ್ವಹಣೆಯ ಲೋಪಗಳ ತನಿಖೆಗೆ ಎಸ್ಐಟಿ ರಚನೆ; 7 ಮಂದಿ ಬಂಧನ
Photo: India Today
ಕೋಲ್ಕತ್ತಾ: ಉತ್ತರ ಕೋಲ್ಕತ್ತಾದ ಚೋರ್ಬಗಾನ್ ಸಾರ್ವಜನಿಕ ದುರ್ಗಾ ಪೂಜಾ ಮಂಟಪದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಪೂಜಾ ಸಮಿತಿಯ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷರು ಸೇರಿದಂತೆ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, 25 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದುರಂತದ ತನಿಖೆಗಾಗಿ ಪಶ್ಚಿಮ ಬಂಗಾಳ ಸರಕಾರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿದೆ. ಜನಸಂದಣಿ ನಿರ್ವಹಣೆ, ಭದ್ರತಾ ವ್ಯವಸ್ಥೆ ಹಾಗೂ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿನ ಲೋಪಗಳ ಕುರಿತು ತನಿಖೆ ನಡೆಯಲಿದೆ.
ಚೋರ್ಬಗಾನ್ ಸಾರ್ವಜನಿಕ ದುರ್ಗೋತ್ಸವ ಸಮಿತಿಯ ಕಾರ್ಯದರ್ಶಿ ರಾಜ್ ಕುಮಾರ್ ಸೆವ್ಡಾ ಅಲಿಯಾಸ್ ರಾಜಾ (48), ಉಪಾಧ್ಯಕ್ಷ ಶಾಂತನು ದುಬೆ (55), ಪೆಂಡಾಲ್ ನ ಬಿದಿರಿನ ರಚನೆ ನಿರ್ಮಾಣದಲ್ಲಿ ತೊಡಗಿದ್ದ ಬಿಪ್ಲಬ್ ಮುಖರ್ಜಿ ಅಲಿಯಾಸ್ ಜಾಯ್ (48), ಜನಸಂದಣಿ ನಿಯಂತ್ರಣ ಮತ್ತು ವಿಐಪಿ ಪಾಸ್ಗಳ ಪರಿಶೀಲನೆಯ ಜವಾಬ್ದಾರಿ ಹೊಂದಿದ್ದ ಕೌಶಿಕ್ ಸಹಾ (53), ಜನಸಂದಣಿ ನಿರ್ವಹಣೆಯಲ್ಲಿ ತೊಡಗಿದ್ದ ಪಿಂಟು ಡೇ (51) ಹಾಗೂ ಖಾಸಗಿ ಭದ್ರತಾ ಸಿಬ್ಬಂದಿಗಳಾದ ಸುಮನ್ ಚಕ್ರವರ್ತಿ (30) ಮತ್ತು ರಾಜೇಶ್ ಪಾಲ್ (29) ಬಂಧಿತರು.
ಘಟನೆಗೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) 105, 110 ಮತ್ತು 3(5)ನೇ ಸೆಕ್ಷನ್ಗಳ ಅಡಿಯಲ್ಲಿ ಗಿರೀಶ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ಸಮಾನವಲ್ಲದ ನರಹತ್ಯೆ ಸೇರಿದಂತೆ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಂಡ ಭೇಟಿ ನೀಡಿದೆ. ಕಾಲ್ತುಳಿತಕ್ಕೆ ಕಾರಣವಾದ ಘಟನೆ ಬಗ್ಗೆ ಪತ್ತೆಹಚ್ಚಲು ಪೂಜಾ ಸಮಿತಿಯ ಸದಸ್ಯರು, ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.