Photo: @edgenews.in/Instagram

ಉತ್ತರ ಪ್ರದೇಶದಲ್ಲಿ ನಡೆದ ಮದುವೆಯ ಮೆರವಣಿಗೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ. ಮಥುರಾದ ಗೋವರ್ಧನದಲ್ಲಿ ನಡೆದ ಮದುವೆಯೊಂದರಲ್ಲಿ ಇಬ್ಬರು ವರರಿಗೆ ತಲಾ 100 ಅಡಿ ಉದ್ದದ 500 ರೂ. ನೋಟುಗಳಿಂದ ಮಾಡಿದ ಹಾರಗಳನ್ನು ಹಾಕಲಾಗಿದೆ. ಈ ನೋಟುಗಳ ಒಟ್ಟು ಮೌಲ್ಯ ಸುಮಾರು 2 ಕೋಟಿ ರೂ. ಎಂದು ಹೇಳಲಾಗಿದೆ.

ನಾಗ್ಲಾ ಘೌಡಾ ಗ್ರಾಮದ ಪ್ರಶಾಂತ್ ಸಿಂಗ್ ಮತ್ತು ಕನ್ಹಾ ಸಿಂಗ್ ಎಂಬ ಸೋದರ ಸಂಬಂಧಿಗಳಿಗೆ ಈ ವಿಶಿಷ್ಟ ಹಾರಗಳನ್ನು ನೀಡಲಾಯಿತು. ವರರ ಭಾವನಾದ ರಾಜಸ್ಥಾನದ ಕಾಮಾ ಪ್ರದೇಶದ ನಂದೋಳಿ ಗ್ರಾಮದ ನಿವಾಸಿಯಾಗಿರುವ ಯೋಗೇಶ್ ಠಾಕೂರ್ ಅವರು ಈ ಬೃಹತ್ ಹಾರಗಳನ್ನು ಸಿದ್ಧಪಡಿಸಿದ್ದರು. ಇವು ಎಷ್ಟು ಉದ್ದವಾಗಿದ್ದವೆಂದರೆ ವರರು ಅವುಗಳನ್ನು ಹಿಡಿದುಕೊಳ್ಳಲು ಮನೆಯ ಮೇಲ್ಛಾವಣಿಯ ಮೇಲೆ ಹತ್ತಬೇಕಾಯಿತು. ಈ ಘಟನೆಯು ಇಷ್ಟೊಂದು ನಗದು ಎಲ್ಲಿಂದ ಬಂತು ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ವರದಿಗಳ ಪ್ರಕಾರ ಈ ಹಾರಗಳನ್ನು 500 ರೂ. ನೋಟುಗಳನ್ನು ಬಳಸಿ ತಯಾರಿಸಲಾಗಿತ್ತು ಎಂದು indianexpress.com ವರದಿ ಮಾಡಿದೆ.

Full View

ಈ ಅದ್ದೂರಿ ಪ್ರದರ್ಶನವು ಸಂಬಂಧಿಕರು ಮತ್ತು ಗ್ರಾಮಸ್ಥರನ್ನು ಬೆರಗುಗೊಳಿಸಿತು. ಈ ಉದ್ದನೆಯ ಹಾರಗಳನ್ನು ಹಿಡಿದುಕೊಳ್ಳಲು ಮತ್ತು ನಿರ್ವಹಿಸಲು ಹಲವು ಜನರ ಅಗತ್ಯವಿತ್ತು. ವರದಿಗಳ ಪ್ರಕಾರ, “ಪ್ರತಿಯೊಬ್ಬ ವರನಿಗೂ 1 ಕೋಟಿ ರೂ. ಮೌಲ್ಯದ ನೋಟುಗಳ ಹಾರವನ್ನು ನೀಡುವ ಮೂಲಕ ಈ ಸಂದರ್ಭವನ್ನು ವಿಶೇಷವಾಗಿಸಲು ನಿರ್ಧರಿಸಿದ್ದರು!”

ಮದುವೆಯ ಮೆರವಣಿಗೆಯಲ್ಲಿದ್ದ ಈ ಹಾರಗಳು ಎಲ್ಲರ ಗಮನ ಸೆಳೆದವು. ಈ ಹಾರಗಳನ್ನು ಹೊತ್ತುಕೊಂಡು ಸಾಗಲು ಅನೇಕರು ನೆರವಾಗಿದ್ದರು. ವರರ ಕುಟುಂಬಗಳು ಮಾರ್ಬಲ್ ಮತ್ತು ಕಲ್ಲಿನ ಶೋರೂಂ ವ್ಯವಹಾರದಲ್ಲಿ ತೊಡಗಿವೆ ಎಂದು ಹೇಳಲಾಗಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ವರರು ಧರಿಸಿರುವ ಹಾರಗಳು ಮನೆಯ ಮೇಲ್ಛಾವಣಿಯಿಂದ ನೇತಾಡುತ್ತಾ ರಸ್ತೆಯುದ್ದಕ್ಕೂ ಹರಡಿರುವುದನ್ನು ಕಾಣಬಹುದು.

ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ದುಬಾರಿ ಉಡುಗೊರೆಗೆ ಛೀಮಾರಿ ಹಾಕಿದ್ದಾರೆ. ವ್ಯಕ್ತಿಯೊಬ್ಬರು 2 ಕೋಟಿ ಖರ್ಚುಮಾಡಿಯೂ ಅಗ್ಗವಾಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಹೀಗೆ ಸಂಪತ್ತು ಹರಿಸುತ್ತಿರುವುದನ್ನು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎನ್ ಕೆ ಸುಪ್ರಭಾ

contributor

ಎನ್ ಕೆ ಸುಪ್ರಭಾ, ಹಿರಿಯ ಪತ್ರಕರ್ತೆ ಮತ್ತು ಅನುವಾದಕಿ. ಸಮಕಾಲೀನ ವಿದ್ಯಮಾನಗಳು, ರಾಷ್ಟ್ರೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುವ ಉತ್ಸಾಹಿ. ಸುದೀರ್ಘ ಎರಡೂವರೆ ದಶಕಗಳ ಕಾಲ ಮುದ್ರಣ ಹಾಗೂ ಡಿಜಿಟಲ್‌ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ ಅನುಭವಿ. ತರಂಗ ಮತ್ತು ದಿ ಸಂಡೇ ಇಂಡಿಯನ್‌ ಸಾಪ್ತಾಹಿಕ, ಉಷಾಕಿರಣ, ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ, ಕನ್ನಡಪ್ರಭ, ವಾರ್ತಾಭಾರತಿ ದಿನಪತ್ರಿಕೆಗಳು ಹಾಗೂ ದಿ ಸ್ಟೇಟ್‌, ಈ ದಿನ ಡಿಜಿಟಿಲ್ ಮಾಧ್ಯಮ ಸಂಸ್ಥೆಗಳಲ್ಲಿ ಸಂಪಾದಕೀಯ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಸಿನಿಮಾ, ತಂತ್ರಜ್ಞಾನ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ವರದಿ, ವಿಶ್ಲೇಷಣೆಗಳನ್ನು ಪ್ರಕಟಿಸಿದ್ದಾರೆ.