2008ರ ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ | 38 ಆರೋಪಿಗಳ ಮರಣದಂಡನೆ ಶಿಕ್ಷೆ ಎತ್ತಿಹಿಡಿದ ಗುಜರಾತ್ ಹೈಕೋರ್ಟ್
Photo Credit : PTI
ಗಾಂಧಿನಗರ, ಜು. 7: 2008ರ ಅಹ್ಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 38 ಆರೋಪಿಗಳಿಗೆ ಮರಣದಂಡನೆ ಮತ್ತು ಇತರ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯವು 2022ರಲ್ಲಿ ನೀಡಿದ್ದ ತೀರ್ಪನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ಈ ಭೀಕರ ಸ್ಫೋಟದಲ್ಲಿ 56 ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು 246 ಜನರು ಗಾಯಗೊಂಡಿದ್ದರು.
2008ರ ಜುಲೈ 26ರಂದು, ಅಹ್ಮದಾಬಾದ್‌ನ 20 ಸ್ಥಳಗಳಲ್ಲಿ ಕೇವಲ 70 ನಿಮಿಷಗಳ ಅವಧಿಯಲ್ಲಿ 21 ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ಎರಡು ದಿನಗಳ ನಂತರ, ಸೂರತ್‌ನಲ್ಲಿ ಸಜೀವ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಗರದ ಕ್ರೈಂ ಬ್ರಾಂಚ್ 100ಕ್ಕೂ ಹೆಚ್ಚು ಜನರನ್ನು ಆರೋಪಿಗಳೆಂದು ಹೆಸರಿಸಿತ್ತು. ಅವರ ಪೈಕಿ 78 ಜನರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ನ್ಯಾಯಮೂರ್ತಿ ಎ.ವೈ. ಕೋಗ್ಜೆ ಮತ್ತು ನ್ಯಾಯಮೂರ್ತಿ ಎಸ್.ಜೆ. ದವೆ ಅವರನ್ನೊಳಗೊಂಡ ವಿಭಾಗೀಯ ಪೀಠವು, ವಿಶೇಷ ನ್ಯಾಯಾಲಯದ 7,015 ಪುಟಗಳ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳು ಮತ್ತು 38 ಆರೋಪಿಗಳಿಗೆ ವಿಧಿಸಲಾಗಿರುವ ಮರಣದಂಡನೆಯನ್ನು ಖಚಿತಪಡಿಸುವಂತೆ ಕೋರಿ ರಾಜ್ಯ ಸರಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿತ್ತು.
ವಿಶೇಷ ನ್ಯಾಯಾಲಯದಲ್ಲಿ ವರ್ಷಗಳ ಕಾಲ ನಡೆದ ವಿಚಾರಣೆಯ ಅವಧಿಯಲ್ಲಿ, ಪ್ರಾಸಿಕ್ಯೂಷನ್ 1,163 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಸುರಕ್ಷತೆಯ ಕಾರಣಗಳಿಗಾಗಿ 26 ಪ್ರಮುಖ ಸಾಕ್ಷಿಗಳ ಗುರುತನ್ನು ರಹಸ್ಯವಾಗಿಡಲಾಗಿತ್ತು. 9 ನ್ಯಾಯಾಧೀಶರು ವಿಚಾರಣೆಯನ್ನು ನಡೆಸಿದ್ದರು.
2022 ಫೆಬ್ರವರಿ 8ರಂದು, ವಿಶೇಷ ನ್ಯಾಯಾಲಯವು 49 ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿತ್ತು ಹಾಗೂ 28 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.