×
Ad

‘21 ಲಕ್ಷ ರೂ. ಮೌಲ್ಯದ ಚೆಕ್‌ ಪಡೆದು 'ಆಕೆ' ಶ್ರದ್ಧಾಂಜಲಿ ಸಲ್ಲಿಸಿ ಹೊರಟುಹೋದಳು’: ಹುತಾತ್ಮ ವಾಯುಪಡೆ ಅಧಿಕಾರಿಯ ತಂದೆ ಆರೋಪ

Update: 2026-06-21 15:55 IST

Image | x

ಪಾಟ್ನಾ: ಅಸ್ಸಾಂನಲ್ಲಿ ಸಂಭವಿಸಿದ ವಾಯುಪಡೆಯ ವಿಮಾನ ಅಪಘಾತದಲ್ಲಿ ಹುತಾತ್ಮರಾದ ಫ್ಲೈಟ್ ಲೆಫ್ಟಿನೆಂಟ್ ಶುಭಂ ಕುಮಾರ್ ಅವರ ಕುಟುಂಬವು ಪರಿಹಾರ ಧನ ವಿತರಣೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ. ಶುಭಂ ಅವರೊಂದಿಗೆ ವಿವಾಹ ನಿಶ್ಚಯವಾಗಿದ್ದ ಶ್ರೇಯಾ ರಾಯ್ ಗೆ 21 ಲಕ್ಷ ರೂಪಾಯಿಯ ಪರಿಹಾರ ಚೆಕ್‌ ನೀಡಿರುವ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿಲ್ಲ ಎಂದು ಅವರ ತಂದೆ ಅಮರೇಂದ್ರ ಶರ್ಮಾ ಆರೋಪಿಸಿದ್ದಾರೆ.

ಈ ಬೆಳವಣಿಗೆ ಬಿಹಾರದ ಶುಭಂ ಅವರ ಸ್ವಗ್ರಾಮದಲ್ಲಿ ಭಾವನಾತ್ಮಕ ಚರ್ಚೆಗೆ ಕಾರಣವಾಗಿದ್ದು, ಕುಟುಂಬವು ಇನ್ನೂ ಯುವ ಅಧಿಕಾರಿಯ ಅಕಾಲಿಕ ಸಾವಿನ ನೋವಿನಿಂದ ಹೊರಬರಲು ಹೆಣಗಾಡುತ್ತಿರುವ ಸಂದರ್ಭದಲ್ಲೇ ಹೊಸ ವಿವಾದ ಎದ್ದಿದೆ.

ಕುಟುಂಬ ಸದಸ್ಯರ ಪ್ರಕಾರ, ಉತ್ತರ ಪ್ರದೇಶದ ಅಝಂಗಢ ಜಿಲ್ಲೆಯ ಶ್ರೇಯಾ ರಾಯ್ ಅವರೊಂದಿಗೆ ಶುಭಂ ಸಂಬಂಧ ಹೊಂದಿದ್ದರು ಎಂಬುದು ಕುಟುಂಬಕ್ಕೆ ತಿಳಿದಿತ್ತು. ಈ ಸಂಬಂಧಕ್ಕೆ ಕುಟುಂಬದ ವಿರೋಧವಿರಲಿಲ್ಲ. ಇಬ್ಬರ ಮದುವೆಗೆ ಕುಟುಂಬ ಸಮ್ಮತಿಸಿತ್ತು.

ವಿವಾಹದ ಮಾತುಕತೆಗಳು ಮುಂದುವರಿದಿದ್ದವು ಮತ್ತು ಈ ವರ್ಷದ ಅಂತ್ಯಕ್ಕೆ ಮದುವೆ ನಡೆಯಬೇಕಿತ್ತು. ಆದರೆ ಶುಭಂ ಅವರ ಅಜ್ಜಿಯ ನಿಧನದ ಹಿನ್ನೆಲೆಯಲ್ಲಿ ಮದುವೆಯನ್ನು ಮುಂದೂಡಲಾಗಿತ್ತು ಎಂದು ಸಂಬಂಧಿಕರು ತಿಳಿಸಿದ್ದಾರೆ.

ಅಸ್ಸಾಂ ಅಪಘಾತದಲ್ಲಿ ಶುಭಂ ಮೃತಪಟ್ಟ ನಂತರ ಶ್ರೇಯಾ ರಾಯ್ ಮೃತದೇಹದೊಂದಿಗೆ ಗ್ರಾಮಕ್ಕೆ ಆಗಮಿಸಿ ಅಂತಿಮ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆಯ ವೇಳೆ ಕುಟುಂಬ ಸದಸ್ಯರೊಂದಿಗೆ ಇದ್ದು ಕೊನೆಯ ನಮನ ಸಲ್ಲಿಸಿದ್ದರು.

ಆದರೆ ಬಳಿಕ ಅವರಿಗೆ 21 ಲಕ್ಷ ರೂಪಾಯಿ ಮೌಲ್ಯದ ಪರಿಹಾರ ಚೆಕ್‌ ನೀಡಲಾಗಿದೆ ಎಂಬ ಮಾಹಿತಿ ತಿಳಿದ ನಂತರ ಕುಟುಂಬದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಕುಟುಂಬಕ್ಕೆ ಮಾಹಿತಿ ನೀಡಲಿಲ್ಲ: ತಂದೆ

ಪರಿಹಾರ ಧನ ವಿತರಣೆಯ ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಅಮರೇಂದ್ರ ಶರ್ಮಾ, ಚೆಕ್‌ ಹಸ್ತಾಂತರಿಸುವ ವೇಳೆ ಕುಟುಂಬಕ್ಕೆ ಯಾವುದೇ ಮಾಹಿತಿ ನೀಡಲಾಗಿರಲಿಲ್ಲ ಎಂದು ಆರೋಪಿಸಿದ್ದಾರೆ.

‘ಅಂತ್ಯಕ್ರಿಯೆ ಮುಗಿಸಿ ಮನೆಗೆ ಹಿಂದಿರುಗಿದ ಬಳಿಕವೇ ಈ ವಿಚಾರ ತಿಳಿಯಿತು. ಬಳಿಕ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪರಿಹಾರ ಧನವನ್ನು ಶ್ರೇಯಾ ರಾಯ್ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು’ ಎಂದು ಅವರು ಹೇಳಿದ್ದಾರೆ.

ಕಾನೂನುಬದ್ಧವಾಗಿ ಮದುವೆಯಾಗಿದ್ದರೆ ಆಕೆಗೆ ಪ್ರಯೋಜನಗಳನ್ನು ಪಡೆಯುವ ಹಕ್ಕು ಇರುವುದನ್ನು ತಾವು ಪ್ರಶ್ನಿಸುವುದಿಲ್ಲ. ಆದರೆ ಇಬ್ಬರ ನಡುವೆ ನ್ಯಾಯಾಲಯದ ವಿವಾಹ ಅಥವಾ ಕಾನೂನುಬದ್ಧ ಮದುವೆ ನಡೆದಿತ್ತು ಎಂಬ ಮಾಹಿತಿ ಕುಟುಂಬಕ್ಕೆ ಎಂದಿಗೂ ನೀಡಲಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

"ಪರಿಹಾರ ಧನ ನೀಡುವ ವಿಚಾರವನ್ನು ನಮಗೆ ಮೊದಲೇ ತಿಳಿಸಬೇಕಿತ್ತು. ನಮ್ಮೊಂದಿಗೆ ಚರ್ಚಿಸದೆ ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದು ಅವರು ಹೇಳಿದ್ದಾರೆ.

‘ಮಗನ ಮೇಲೆ ಕುಟುಂಬ ಅವಲಂಬಿತವಾಗಿತ್ತು’

ತಮ್ಮ ಮಗನ ಸಾವಿನ ಬಗ್ಗೆ ಮಾತನಾಡಿದ ಅಮರೇಂದ್ರ ಶರ್ಮಾ, ಶುಭಂ ಕುಟುಂಬದ ಪ್ರಮುಖ ಆಧಾರಸ್ತಂಭನಾಗಿದ್ದರು ಎಂದು ಹೇಳಿದ್ದಾರೆ.

‘ನಾವು ಸಾಧಾರಣ ಕುಟುಂಬ. ಶುಭಂ ಅವರ ಆದಾಯವೇ ನಮ್ಮ ಕುಟುಂಬದ ಮುಖ್ಯ ಆಧಾರವಾಗಿತ್ತು. ಅವರ ಸಾವಿನಿಂದ ಕುಟುಂಬಕ್ಕೆ ದೊಡ್ಡ ಹೊಡೆತ ಬಿದ್ದಿದೆ’ ಎಂದು ಅಮರೇಂದ್ರ ಶರ್ಮಾ ಹೇಳಿದ್ದಾರೆ.

ಪರಿಹಾರ ಧನ ಹಾಗೂ ಇತರ ಸೌಲಭ್ಯಗಳ ವಿಷಯದಲ್ಲಿ ಕುಟುಂಬದ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಸಂಬಂಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಂಬಂಧಿತ ಅಧಿಕಾರಿಗಳು ಮಧ್ಯಪ್ರವೇಶಿಸುವಂತೆ ಅವರು ಕೋರಿದ್ದಾರೆ.

ಪರಿಹಾರ ಧನ ವಿತರಣೆಯ ಕುರಿತು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಅವರು ಬೇಸರ ವ್ಯಕ್ತಪಡಿಸಿದ್ದು, ಈ ವಿಷಯವನ್ನು ಕುಟುಂಬದೊಂದಿಗೆ ಮುಕ್ತವಾಗಿ ಚರ್ಚಿಸಬೇಕಿತ್ತು ಎಂದು ಹೇಳಿದ್ದಾರೆ.

ಮಿಲಿಟರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಶುಭಂ ಕುಮಾರ್ ಅವರ ಅಂತ್ಯಕ್ರಿಯೆ ವೇಳೆ ವಾಯುಪಡೆಯ ಸಿಬ್ಬಂದಿ ಮಿಲಿಟರಿ ಗೌರವ ಸಲ್ಲಿಸಿದರು. ರಾಷ್ಟ್ರಧ್ವಜ ಮತ್ತು ಸೇವಾ ಸ್ಮರಣಿಕೆಗಳನ್ನು ಅವರ ತಾಯಿಗೆ ಹಸ್ತಾಂತರಿಸಲಾಯಿತು.

ಅಂತ್ಯಸಂಸ್ಕಾರದಲ್ಲಿ ಗ್ರಾಮಸ್ಥರು, ಸಂಬಂಧಿಕರು ಹಾಗೂ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶುಭಂ ಕುಮಾರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಈ ವಿವಾದದ ಕೇಂದ್ರಬಿಂದುವಾಗಿ ಶುಭಂ ಕುಮಾರ್ ಅವರ ವೈವಾಹಿಕ ಸ್ಥಿತಿ ಹಾಗೂ ಸರ್ಕಾರಿ ಪರಿಹಾರ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಕಾನೂನುಬದ್ಧವಾಗಿ ಯಾರು ಅರ್ಹರು ಎಂಬ ಪ್ರಶ್ನೆಗಳು ಮೂಡಿವೆ.

ಪರಿಹಾರ ಧನ ಬಿಡುಗಡೆ ಮಾಡಲು ಯಾವ ದಾಖಲೆಗಳನ್ನು ಆಧಾರವಾಗಿಸಿಕೊಂಡು ಕ್ರಮ ಕೈಗೊಳ್ಳಲಾಯಿತು ಎಂಬ ಕುರಿತು ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಸ್ಪಷ್ಟೀಕರಣ ನೀಡಿಲ್ಲ. ಕುಟುಂಬದ ಆಕ್ಷೇಪಣೆಯ ಹಿನ್ನೆಲೆ ಹೆಚ್ಚಿನ ಪರಿಶೀಲನೆ ನಡೆಯಲಿದೆಯಾ ಎಂಬುದು ಸ್ಪಷ್ಟವಾಗಿಲ್ಲ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News