×
Ad

NEET ಮರು ಪರೀಕ್ಷೆ | ಅಭ್ಯರ್ಥಿಗಳಿಗೆ ತೊಂದರೆಯಾಗದಂತೆ 45 ನಿಮಿಷ ವಿಮಾನ ನಿಲ್ದಾಣದಲ್ಲೇ ಕಾದು ಕುಳಿತ ಪ್ರಧಾನಿ ಮೋದಿ!

Update: 2026-06-21 16:04 IST

Photo Credit: ANI

ಹೊಸದಿಲ್ಲಿ: NEET–UG 2026 ಮರುಪರೀಕ್ಷೆಗೆ ಹಾಜರಾಗುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂಚಾರ ಅಡಚಣೆ ಉಂಟಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ದಿಲ್ಲಿ ವಿಮಾನ ನಿಲ್ದಾಣದಿಂದ ತಮ್ಮ ನಿವಾಸಕ್ಕೆ ತೆರಳುವುದನ್ನು ಸುಮಾರು 45 ನಿಮಿಷಗಳ ಕಾಲ ಮುಂದೂಡಿದರು.

ಅಧಿಕೃತ ಮೂಲಗಳ ಪ್ರಕಾರ, ಪ್ರಧಾನಿ ಮಧ್ಯಾಹ್ನ 1.15ರ ಸುಮಾರಿಗೆ ದಿಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ NEET–UG ಮರುಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳುತ್ತಿದ್ದ ಸಮಯದಲ್ಲಿ ತಮ್ಮ ಬೆಂಗಾವಲು ಪಡೆಯ ಸಂಚಾರದಿಂದ ಯಾವುದೇ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಅವರು ವಿಮಾನ ನಿಲ್ದಾಣದಲ್ಲೇ ಉಳಿದರು.

ಪ್ರಧಾನಿಯವರ ಬೆಂಗಾವಲು ಪಡೆಯ ಸಂಚಾರದ ವೇಳೆ ಸಾಮಾನ್ಯವಾಗಿ ವಿಶೇಷ ಸಂಚಾರ ನಿರ್ವಹಣಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಕೆಲವು ಮಾರ್ಗಗಳಲ್ಲಿ ತಾತ್ಕಾಲಿಕ ಸಂಚಾರ ನಿರ್ಬಂಧಗಳನ್ನೂ ವಿಧಿಸಲಾಗುತ್ತದೆ. ಸಾವಿರಾರು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳುತ್ತಿದ್ದ ನಿರ್ಣಾಯಕ ಸಮಯದಲ್ಲಿ ಇಂತಹ ನಿರ್ಬಂಧಗಳಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಸಾಧ್ಯತೆಯನ್ನು ತಪ್ಪಿಸಲು ಪ್ರಧಾನಿ ತಮ್ಮ ನಿರ್ಗಮನವನ್ನು ವಿಳಂಬಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

NEET–UG ಮರುಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಬಳಿಕ ಪ್ರಧಾನಿ ಮೋದಿ ವಿಮಾನ ನಿಲ್ದಾಣದಿಂದ ತಮ್ಮ ನಿವಾಸಕ್ಕೆ ತೆರಳಿದರು.

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ವಿವಿಧ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಹಿಂದಿನ ಪರೀಕ್ಷೆಯನ್ನು ರದ್ದುಗೊಳಿಸಿದ ಬಳಿಕ ದೇಶಾದ್ಯಂತ ರವಿವಾರ ಕಠಿಣ ಭದ್ರತಾ ವ್ಯವಸ್ಥೆಗಳ ನಡುವೆ NEET–UG ಮರುಪರೀಕ್ಷೆ ನಡೆಯಿತು.

ದೇಶದ 5,440 ಪರೀಕ್ಷಾ ಕೇಂದ್ರಗಳು ಹಾಗೂ ವಿದೇಶಗಳ 14 ಕೇಂದ್ರಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆಯ ಸುರಕ್ಷಿತ ಮತ್ತು ಪಾರದರ್ಶಕ ನಿರ್ವಹಣೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವ್ಯಾಪಕ ಭದ್ರತಾ ವ್ಯವಸ್ಥೆ ಕಲ್ಪಿಸಿದೆ.

AI ಆಧಾರಿತ ಕಣ್ಗಾವಲು ವ್ಯವಸ್ಥೆಯ ನೆರವಿನಿಂದ 1.38 ಲಕ್ಷ ಸಿಸಿಟಿವಿ ಕ್ಯಾಮೆರಾಗಳ ಮೂಲಕ 95 ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೊಠಡಿಗಳ ಮೇಲೆ ನಿಗಾ ವಹಿಸಲಾಗಿದೆ. ಇಲೆಕ್ಟ್ರಾನಿಕ್ ವಂಚನೆಯನ್ನು ತಡೆಯುವ ಉದ್ದೇಶದಿಂದ 51 ಸಾವಿರಕ್ಕೂ ಹೆಚ್ಚು ಸಿಗ್ನಲ್ ಜಾಮರ್‌ ಗಳನ್ನು ಅಳವಡಿಸಲಾಗಿದೆ.

ಭದ್ರತಾ ವ್ಯವಸ್ಥೆಯ ಭಾಗವಾಗಿ 6,700 ವೀಕ್ಷಕರು, 100ಕ್ಕೂ ಹೆಚ್ಚು ವರ್ಚುವಲ್ ಮಾನಿಟರ್‌ ಗಳು, ಸುಮಾರು 39 ಸಾವಿರ ಶೋಧನಾ ಸಿಬ್ಬಂದಿ, 48 ಸಾವಿರಕ್ಕೂ ಹೆಚ್ಚು ಬಯೋಮೆಟ್ರಿಕ್ ಪರಿಶೀಲನಾ ಸಿಬ್ಬಂದಿ ಹಾಗೂ ಕೇಂದ್ರ ಮಟ್ಟದ ವ್ಯವಸ್ಥಾಪನಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿರುವ NEET–UG, ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಪ್ರಮುಖ ಅರ್ಹತಾ ಪರೀಕ್ಷೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News