ಕರ್ನಾಟಕ S I R | ಮತದಾರರ ಪಟ್ಟಿಯಿಂದ 99.32 ಲಕ್ಷ ಹೆಸರುಗಳು ಡಿಲೀಟ್: ಇದು ದೇಶದಲ್ಲೇ ಅತಿ ಹೆಚ್ಚು!
ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (SIR) ಬಳಿಕ ಕರ್ನಾಟಕದ ಅಂತಿಮ ಮತದಾರರ ಪಟ್ಟಿಯಿಂದ 99.32 ಲಕ್ಷ ಮತದಾರರ ಹೆಸರುಗಳು ಡಿಲೀಟ್ ಆಗಿದ್ದು, ದೇಶದಲ್ಲೇ ಅತಿ ಹೆಚ್ಚು ಪ್ರಮಾಣದ ಇಳಿಕೆ ದಾಖಲಾಗಿದೆ.
ಮಂಗಳವಾರ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 4.55 ಕೋಟಿ ಮತದಾರರು ಸ್ಥಾನ ಪಡೆದಿದ್ದಾರೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅಂತಿಮ ಪಟ್ಟಿಯಲ್ಲಿ 2.25 ಕೋಟಿ ಪುರುಷರು, 2.29 ಕೋಟಿ ಮಹಿಳೆಯರು ಹಾಗೂ 2,841 ಇತರ ವರ್ಗದ ಮತದಾರರಿದ್ದಾರೆ. SIR ಪ್ರಕ್ರಿಯೆ ಆರಂಭಕ್ಕೂ ಮುನ್ನ ಜೂನ್ 16ರಂದು ರಾಜ್ಯದ ಮತದಾರರ ಸಂಖ್ಯೆ 5.54 ಕೋಟಿಯಷ್ಟಿತ್ತು. ಇದೀಗ ಈ ಸಂಖ್ಯೆ ಶೇ.17.91ರಷ್ಟು ಇಳಿಕೆಯಾಗಿದೆ.
1.08 ಕೋಟಿ ಮತದಾರರನ್ನು ಗುರುತಿಸಲಾಗಿತ್ತು
ಜೂನ್ 30ರಂದು ಆರಂಭಗೊಂಡ SIR ಪ್ರಕ್ರಿಯೆ ಅಕ್ಟೋಬರ್ 27ರಂದು ಮುಕ್ತಾಯಗೊಂಡಿದೆ. ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಗೈರುಹಾಜರಿ, ಸ್ಥಳಾಂತರ, ಮರಣ, ಹೆಸರು ಅಳಿಸುವಿಕೆ ಹಾಗೂ ಇತರ ಕಾರಣಗಳ (ASDDO) ಅಡಿಯಲ್ಲಿ 1,07,96,339 ಮತದಾರರನ್ನು ಗುರುತಿಸಲಾಗಿತ್ತು.
ಆಗಸ್ಟ್ 24ರಂದು ಪ್ರಕಟಗೊಂಡ ಕರಡು ಪಟ್ಟಿಯಲ್ಲಿ 4.46 ಕೋಟಿ ಮತದಾರರಿದ್ದರು. ಆದರೆ, ASDDO ಅಡಿಯಲ್ಲಿ ಗುರುತಿಸಲಾದವರ ಸಂಖ್ಯೆಯು ಅಧಿಕವಾಗಿದೆ ಎಂದು ನಾಗರಿಕ ಸಮಾಜದ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಅರ್ಹ ಮತದಾರರೂ ಪಟ್ಟಿಯಿಂದ ಹೊರಗುಳಿದಿರುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
43.81 ಲಕ್ಷ ಮಂದಿಗೆ ನೋಟಿಸ್
ದಾಖಲೆಗಳ ಹೊಂದಾಣಿಕೆಯಾಗದ 23.45 ಲಕ್ಷ ಪ್ರಕರಣಗಳು ಹಾಗೂ ತಾರ್ಕಿಕ ವ್ಯತ್ಯಾಸಗಳಿರುವ 20.35 ಲಕ್ಷ ಪ್ರಕರಣಗಳು ಸೇರಿದಂತೆ ಒಟ್ಟು 43.81 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿತ್ತು.
ಈ ಪೈಕಿ 61,960 ಮತದಾರರ ಹೆಸರುಗಳನ್ನು ಮಾತ್ರ ಅಂತಿಮ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಉಳಿದಂತೆ ಅಂತಿಮ ಪಟ್ಟಿಯಿಂದ ಕೈಬಿಟ್ಟ ಹೆಸರುಗಳು ASDDO ಪಟ್ಟಿಗೆ ಸೇರಿದವು ಎಂದು ಅವರ ವಿವರಣೆಯಿಂದ ತಿಳಿದುಬರುತ್ತದೆ.
ವಿಚಾರಣೆ ಬಳಿಕ ಅನರ್ಹರೆಂದು ನಿರ್ಧರಿಸಲಾದ ಮತದಾರರ ಹೆಸರುಗಳನ್ನು ತೆಗೆದುಹಾಕಲು ಚುನಾವಣಾ ನೋಂದಣಾಧಿಕಾರಿಗಳು (ERO) ಮತ್ತು ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು (AERO) ನಮೂನೆ-7 ಅರ್ಜಿಗಳನ್ನು ಸಿದ್ಧಪಡಿಸಿದ್ದರು ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ 771 ವಿದೇಶಿ ಪ್ರಜೆಗಳ ಪತ್ತೆ
ರಾಜ್ಯದ ಮತದಾರರ ಪಟ್ಟಿಯಲ್ಲಿ 1,000ಕ್ಕಿಂತ ಕಡಿಮೆ ವಿದೇಶಿ ಪ್ರಜೆಗಳಿದ್ದಾರೆ ಎಂದು ಅನ್ಬುಕುಮಾರ್ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ರಾಜ್ಯಾದ್ಯಂತ 771 ವಿದೇಶಿ ಪ್ರಜೆಗಳು ಪತ್ತೆಯಾಗಿದ್ದು, ಅವರಲ್ಲಿ 688 ಮಂದಿ ನೇಪಾಳದವರು. ಒಬ್ಬ ಬಾಂಗ್ಲಾದೇಶಿ ಪ್ರಜೆಯ ಹೆಸರು ಮತದಾರರ ಪಟ್ಟಿಯಲ್ಲಿರುವುದು ಪತ್ತೆಯಾಗಿದೆ.
ಬೆಂಗಳೂರು ಉತ್ತರ ಚುನಾವಣಾ ಜಿಲ್ಲೆಯಲ್ಲಿ 580 ವಿದೇಶಿ ಪ್ರಜೆಗಳು ಪತ್ತೆಯಾಗಿದ್ದು, ಅವರಲ್ಲಿ 542 ಮಂದಿ ನೇಪಾಳದವರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರಡು ಪಟ್ಟಿಯ ಬಳಿಕ 8.19 ಲಕ್ಷ ಮತದಾರರ ಸೇರ್ಪಡೆ
ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ 10.08 ಲಕ್ಷ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದ್ದು, 1.88 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಅಂತಿಮವಾಗಿ 8,19,714 ಮತದಾರರ ಹೆಚ್ಚಳವಾಗಿದೆ.
ಇವರಲ್ಲಿ 18ರಿಂದ 19 ವರ್ಷ ವಯಸ್ಸಿನ 3,13,023 ಯುವ ಮತದಾರರು ಸೇರಿದ್ದಾರೆ. ಯುವ ಮತದಾರರನ್ನು ಹೊರತುಪಡಿಸಿದರೆ, ಉಳಿದ 5,64,081 ಮಂದಿ ಆರಂಭದಲ್ಲಿ ASDDO ಅಡಿಯಲ್ಲಿ ತಪ್ಪಾಗಿ ವರ್ಗೀಕರಿಸಲ್ಪಟ್ಟವರಾಗಿರಬಹುದು ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
361 ಮೇಲ್ಮನವಿ; 352 ಪ್ರಕರಣಗಳು ಬಾಕಿ
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಅಥವಾ ಜಿಲ್ಲಾಧಿಕಾರಿಗಳ ಮುಂದೆ ಒಟ್ಟು 361 ಮೇಲ್ಮನವಿಗಳು ಸಲ್ಲಿಕೆಯಾಗಿವೆ. ಈ ಪೈಕಿ 9 ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, 352 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಜಿಲ್ಲಾ ಮಟ್ಟದ ತೀರ್ಮಾನಗಳಿಂದ ಅಸಮಾಧಾನಗೊಂಡವರು ಮುಖ್ಯ ಚುನಾವಣಾಧಿಕಾರಿಗಳ ಮುಂದೆ ಎರಡನೇ ಮೇಲ್ಮನವಿ ಸಲ್ಲಿಸಬಹುದು.
ಕೆಲವು ಕ್ಷೇತ್ರಗಳಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಸಾಮೂಹಿಕವಾಗಿ ನಮೂನೆ-7 ಅರ್ಜಿಗಳನ್ನು ಸಲ್ಲಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅನ್ಬುಕುಮಾರ್, ಯಾವುದೇ ಮತದಾರರ ಹೆಸರನ್ನು ಕೇವಲ ಸಾಮೂಹಿಕ ಅರ್ಜಿಗಳ ಆಧಾರದಲ್ಲಿ ಅಳಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ನಮೂನೆ-6 ಮೂಲಕ ಅರ್ಜಿ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.
SIR ಅವಧಿಯಲ್ಲಿ 14 ಅಧಿಕಾರಿಗಳು ಮೃತ್ಯು
SIR ಪ್ರಕ್ರಿಯೆ ನಡೆಯುತ್ತಿದ್ದ ಅವಧಿಯಲ್ಲಿ 14 ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಆದರೆ, ಅವರ ಸಾವುಗಳು SIR ಪ್ರಕ್ರಿಯೆಯಿಂದಲೇ ಸಂಭವಿಸಿವೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೃತ ಅಧಿಕಾರಿಗಳ ವಿವರಗಳನ್ನು ಸಂಗ್ರಹಿಸಲಾಗಿದ್ದು, ಅವರ ಕುಟುಂಬಗಳಿಗೆ ಪರಿಹಾರ ಒದಗಿಸುವ ಕುರಿತು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.