CJP ಪ್ರತಿಭಟನೆ | ಕಾನೂನು, ವೈದ್ಯಕೀಯ ನೆರವಿಗಾಗಿ ಸಹಾಯವಾಣಿ ಆರಂಭಿಸಿದ AAP‌

Update: 2026-07-21 20:58 IST

 ಅರವಿಂದ್ ಕೇಜ್ರಿವಾಲ್ | Photo Credit : PTI  

ಹೊಸದಿಲ್ಲಿ,ಜು.21: ಆಮ್ ಆದ್ಮಿ ಪಾರ್ಟಿಯ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಪ್ರತಿಭಟನಾಕಾರರಿಗೆ ಕಾನೂನು ಮತ್ತು ವೈದ್ಯಕೀಯ ನೆರವು ನೀಡಲು ಸಹಾಯವಾಣಿಯನ್ನು ಪ್ರಕಟಿಸಿದ್ದಾರೆ. ಇದೇ ವೇಳೆ ದಿಲ್ಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಸಂದರ್ಭ ಕೇಂದ್ರ ಸರಕಾರವು ಅತಿಯಾದ ಬಲಪ್ರಯೋಗ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ನಡೆಸಿದ ದೌರ್ಜನ್ಯವು ಬ್ರಿಟಿಷರ ಆಡಳಿತದ ಅವಧಿಯಲ್ಲಿಯ ಕ್ರೌರ್ಯಕ್ಕಿಂತಲೂ ಕೆಟ್ಟದಾಗಿತ್ತು ಎಂದು ಆರೋಪಿಸಿದರು. ಜೊತೆಗೆ ಗಾಯಗೊಂಡ ಪ್ರತಿಭಟನಾಕಾರರು ಮತ್ತು ವಶಕ್ಕೆ ಪಡೆಯಲಾದವರ ಕುಟುಂಬಗಳಿಗೆ ನೆರವಾಗಲು ವಿಶೇಷ ಸಹಾಯವಾಣಿಯ (8588833548) ಆರಂಭವನ್ನು ಅವರು ಘೋಷಿಸಿದರು.

‘ಯುವ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ನಾವು ನೋಡಿದ್ದೇವೆ. ಮೋದಿ ಸರಕಾರವು ನಮ್ಮದೇ ಮಕ್ಕಳ ಮೇಲೆ ನಡೆಸಿದ ಹಿಂಸಾಚಾರವನ್ನು ಬ್ರಿಟಿಷರು ಕೂಡ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ನಡೆಸಿರಲಿಲ್ಲ. ಪೊಲೀಸರು ಯಾವುದೇ ಪ್ರಚೋದನೆಯಿಲ್ಲದೆ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳನ್ನು ಹೊಡೆಯುತ್ತಿರುವುದು ಮತ್ತು ಲಾಠಿ ಪ್ರಹಾರ ನಡೆಸುತ್ತಿರುವುದನ್ನು ವಿಡಿಯೋಗಳು ತೋರಿಸಿವೆ’ ಎಂದು ಕೇಜ್ರಿವಾಲ್ ಹೇಳಿದರು.

ಸೋಮವಾರದ ಪೋಲಿಸ್ ದೌರ್ಜನ್ಯವನ್ನು 1919ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದೊಂದಿಗೆ ಹೋಲಿಸಿದ ಅವರು, ಈ ದೃಶ್ಯಗಳು ತನಗೆ ಜನರಲ್ ಡೈಯರ್‌ನ ಕೃತ್ಯಗಳನ್ನು ನೆನಪಿಸಿವೆ. ನೀವು ಹೆದರಬೇಕಾದ ಅಗತ್ಯವಿಲ್ಲ, ನಾವು ನಿಮ್ಮೊಂದಿಗಿದ್ದೇವೆ. ಸಹಾಯವಾಣಿ ಸಂಖ್ಯೆಗೆ ಸಂದೇಶ ಕಳುಹಿಸಿ. ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಮತ್ತು ಕಾನೂನು ಹಾಗೂ ವೈದ್ಯಕೀಯ ನೆರವು ನೀಡುತ್ತೇವೆ ಎಂದು ನಾನು ಪ್ರತಿಭಟನಾಕಾರರ ಪೋಷಕರು ಮತ್ತು ಕುಟುಂಬದ ಸದಸ್ಯರಿಗೆ ಹೇಳಲು ಬಯಸುತ್ತೇನೆ’ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತನಗೆ ಸಾಧ್ಯವಾಗಿರಲಿಲ್ಲ, ಆದರೆ ತಮ್ಮ ಇಬ್ಬರೂ ಮಕ್ಕಳು ಸಿಜೆಪಿ ಜಾಥಾದಲ್ಲಿ ಭಾಗವಹಿಸಿದ್ದರು ಎಂದರು.

‘‘ಮೋದಿ ಜೀ,ನೀವು ಈ ದೇಶದ ಅತಿದೊಡ್ಡ ದೇಶದ್ರೋಹಿ. ನೀವು ನಮ್ಮ ವಿದ್ಯಾರ್ಥಿಗಳನ್ನು ‘ದೇಶದ್ರೋಹಿಗಳು’ ಎಂದು ಕರೆಯುತ್ತಿದ್ದೀರಿ,ಆದರೆ ನಿಮಗೆ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಕೇಜ್ರಿವಾಲ್ ಕಿಡಿಕಾರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News