ಸುಪ್ರೀಂ ನಿರ್ದೇಶನಗಳ ನಡುವೆಯೂ ಬುಲ್ಡೋಝರ್ ಧ್ವಂಸ ಮುಂದುವರಿಕೆ: ಅಲಹಾಬಾದ್ ಹೈಕೋರ್ಟ್ ನ ನ್ಯಾ. ಅತುಲ್ ಶ್ರೀಧರನ್ ಕಳವಳ

► "ಸಮಾಜದ ರಕ್ತದಾಹ ತಣಿಸಲು ಬುಲ್ಡೋಝರ್ ಧ್ವಂಸ" ► Ayodhya Ram Mandir ದೇಣಿಗೆ ಕಳ್ಳತನ ಪ್ರಕರಣ ಉಲ್ಲೇಖಿಸಿದ ನ್ಯಾಯಾಧೀಶರು

Update: 2026-07-21 23:20 IST

ಅತುಲ್ ಶ್ರೀಧರನ್ | Photo Credit : barandbench.com

ಪ್ರಯಾಗ್‌ರಾಜ್: ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನಗಳಿದ್ದರೂ, ಅಪರಾಧ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ವ್ಯಕ್ತಿಗಳ ಮನೆಗಳನ್ನು ರಾಜ್ಯ ಸರ್ಕಾರಗಳು ಕೆಡವುವುದನ್ನು ಮುಂದುವರಿಸುತ್ತಿವೆ ಎಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಕಳವಳ ವ್ಯಕ್ತಪಡಿಸಿದ್ದಾರೆ.

ಜುಲೈ 20ರಂದು ನೀಡಿದ ತಮ್ಮ ತೀರ್ಪಿನಲ್ಲಿ, 'ಬುಲ್ಡೋಝರ್ ನ್ಯಾಯ'ವನ್ನು ಸಂಭ್ರಮಿಸುವ ಸಮಾಜದ ಪ್ರತೀಕಾರದ ಮನೋಭಾವವನ್ನು ತೃಪ್ತಿಪಡಿಸುವಂತೆಯೇ ಇಂತಹ ಧ್ವಂಸ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

‘ಸುಪ್ರೀಂ ಕೋರ್ಟ್‌ನ ತೀರ್ಪುಗಳು ಅಸ್ತಿತ್ವದಲ್ಲೇ ಇಲ್ಲ ಎಂಬಂತೆಯೂ, ದೇಶದ ಅತ್ಯುನ್ನತ ನ್ಯಾಯಾಲಯ ನಿಗದಿಪಡಿಸಿರುವ ಕಾನೂನನ್ನು ಉಲ್ಲಂಘಿಸಿದರೂ ಯಾವುದೇ ಪ್ರತಿಕೂಲ ಪರಿಣಾಮ ಎದುರಾಗುವುದಿಲ್ಲ ಎಂಬ ವಿಶ್ವಾಸ ರಾಜ್ಯಕ್ಕೆ ಇರುವಂತೆಯೂ ಬುಲ್ಡೋಝರ್ ಧ್ವಂಸಗಳು ನಿರ್ಭಯವಾಗಿ ಮುಂದುವರಿಯುತ್ತಿವೆ’ ಎಂದು ನ್ಯಾಯಮೂರ್ತಿ ಶ್ರೀಧರನ್ ತೀರ್ಪಿನಲ್ಲಿ ಹೇಳಿದ್ದಾರೆ.

ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣವೊಂದರಲ್ಲಿ, ಕುಟುಂಬದ ಒಬ್ಬ ಸಂಬಂಧಿಕನ ವಿರುದ್ಧ ಪ್ರಕರಣ ದಾಖಲಾಗಿದ್ದ ಕಾರಣಕ್ಕೆ ಆ ಕುಟುಂಬದ ಆಸ್ತಿಗಳ ವಿರುದ್ಧ ಶಿಕ್ಷಾತ್ಮಕ ಕ್ರಮ ಕೈಗೊಳ್ಳದಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಸಿದ್ಧಾರ್ಥ ನಂದನ್ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಆದರೆ, ಇಂತಹ ಪ್ರಕರಣಗಳಲ್ಲಿ ರಾಜ್ಯದ ಶಿಕ್ಷಾತ್ಮಕ ಕ್ರಮಗಳನ್ನು ತಡೆಯಲು ನೀಡಬೇಕಾದ ಕೆಲವು ಮಹತ್ವದ ನಿರ್ದೇಶನಗಳ ಕುರಿತು ನ್ಯಾಯಮೂರ್ತಿ ನಂದನ್ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಇಬ್ಬರೂ ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದಾರೆ.

ತಮ್ಮ ತೀರ್ಪಿನ ಆರಂಭದಲ್ಲೇ ನ್ಯಾಯಮೂರ್ತಿ ಶ್ರೀಧರನ್ ಉರ್ದು ಕವಿ ಬಶೀರ್ ಬದರ್ ಅವರ ಪ್ರಸಿದ್ಧ ದ್ವಿಪದಿಯನ್ನು ಉಲ್ಲೇಖಿಸಿದ್ದಾರೆ.

"ಲೋಗ್ ಟೂಟ್ ಜಾತೇ ಹೈ ಏಕ್ ಘರ್ ಬನಾನೇ ಮೇಂ, ತುಮ್ ತರಸ್ ನಹೀಂ ಖಾತೇ ಬಸ್ತಿಯಾಂ ಜಲಾನೇ ಮೇಂ."

ಅದರ ಅರ್ಥವನ್ನು ವಿವರಿಸಿದ ಅವರು, ‘ಒಂದು ಮನೆ ನಿರ್ಮಿಸಲು ಜನರು ಅಪಾರ ಕಷ್ಟಪಡುತ್ತಾರೆ. ಆದರೆ, ಇಡೀ ವಸಾಹತುಗಳನ್ನು ಸುಟ್ಟುಹಾಕುವಾಗ ಕನಿಕರವೂ ತೋರಿಸಲಾಗುವುದಿಲ್ಲ’ ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನ ಬುಲ್ಡೋಝರ್ ಧ್ವಂಸ ಕುರಿತ ತೀರ್ಪು ಮತ್ತು ಜೀವನೋಪಾಯದ ಹಕ್ಕಿನ ಕುರಿತು ವಿವರವಾಗಿ ಪ್ರಸ್ತಾಪಿಸಿರುವ ಅವರು, ಬಡತನ, ನಿರುದ್ಯೋಗ ಹಾಗೂ ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಿಂದ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿರುವುದು ಅನಧಿಕೃತ ವಸಾಹತುಗಳು ಮತ್ತು ಕೊಳಚೆ ಪ್ರದೇಶಗಳ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ದಶಕಗಳ ಕಾಲ ಅಸ್ತಿತ್ವದಲ್ಲಿರುವ ಇಂತಹ ಪ್ರದೇಶಗಳನ್ನು ಒಂದು ದಿನ ಏಕಾಏಕಿ ಧ್ವಂಸಕ್ಕೆ ಗುರುತಿಸಲಾಗುತ್ತದೆ ಎಂದಿದ್ದಾರೆ.

ಶ್ರೀಮಂತರ ಮನೆಗಳು ಹಾಗೂ ಭದ್ರತಾ ಗೋಡೆಯಿಂದ ಸುತ್ತುವರಿದಿರುವ ಸಮುದಾಯಗಳೂ ಸಂಪೂರ್ಣ ಕಾನೂನುಬದ್ಧವಾಗಿರದೇ ಇರಬಹುದು. ಆದರೆ, ಸಂಪತ್ತಿನ ಪ್ರಭಾವ, ಅಧಿಕಾರಶಾಹಿ ಅಥವಾ ರಾಜಕೀಯ ಆಶ್ರಯದಿಂದಾಗಿ ಅವು ಹೆಚ್ಚಿನ ಸಂದರ್ಭಗಳಲ್ಲಿ ಅಸ್ಪೃಶ್ಯವಾಗಿಯೇ ಉಳಿಯುತ್ತವೆ ಎಂದು ಅವರು ಹೇಳಿದ್ದಾರೆ.

‘ಭಾರತದಲ್ಲಿ ಸಾಮಾನ್ಯೀಕರಣಗೊಂಡು ಸಾಂಸ್ಥಿಕ ರೂಪ ಪಡೆದಿರುವ ಭ್ರಷ್ಟಾಚಾರದ ವ್ಯಾಪಕ ಸಂಸ್ಕೃತಿಯೇ ಇದಕ್ಕೆ ಕಾರಣ’ ಎಂದು ಅಭಿಪ್ರಾಯಪಟ್ಟಿರುವ ಅವರು, ಯಾವುದೇ ಕಟ್ಟಡವು ರಾತ್ರೋರಾತ್ರಿ ನಿರ್ಮಾಣವಾಗುವುದಿಲ್ಲ. ರಾಜಕೀಯ ಅಥವಾ ಆಡಳಿತಾತ್ಮಕ ಬೆಂಬಲದಿಂದ ಅಥವಾ ಸಂಬಂಧಪಟ್ಟ ಅಧಿಕಾರಿಗಳ ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದ ಇಂತಹ ಕಟ್ಟಡಗಳು ನಿರ್ಮಾಣವಾಗುತ್ತವೆ ಎಂದು ಹೇಳಿದ್ದಾರೆ.

ದೇಶದ ವಿವಿಧ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಮತ್ತು ಸಮಗ್ರತೆಯ ಕೊರತೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಶ್ರೀಧರನ್, ರಾಮ ಮಂದಿರದಲ್ಲಿ ಇತ್ತೀಚೆಗೆ ನಡೆದ ದೇಣಿಗೆ ಕಳ್ಳತನದ ಪ್ರಕರಣವನ್ನೂ ಪ್ರಸ್ತಾಪಿಸಿದ್ದಾರೆ.

‘ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನದ ಇತ್ತೀಚಿನ ಘಟನೆ ಭಾರತೀಯ ಸಮಾಜದ ಸಮಗ್ರತೆಯ ಅಧಃಪತನವನ್ನು ಪ್ರತಿಬಿಂಬಿಸುತ್ತದೆ. ಇದರಿಂದಲೂ ಜನರು ವಿಚಲಿತರಾಗದಿದ್ದರೆ, ಅವರನ್ನು ಮತ್ತೇನೂ ನಾಚಿಕೆಪಡಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಶ್ರೀಧರನ್ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಸೌಜನ್ಯ: barandbench.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News