ಸಿಎಂ ಭಜನ್‌ಲಾಲ್‌ ಶರ್ಮಾ | PTI Photo 


ಜೈಪುರ: ಸಿಜೆಪಿಯ ‘ಸ್ಕೂಲ್ ಠೀಕ್ ಕರೋ’ ಅಭಿಯಾನದ ಬೆನ್ನಲ್ಲೆ ರಾಜಸ್ಥಾನದ ಭಜನ್‌ಲಾಲ್‌ ಶರ್ಮಾ ನೇತೃತ್ವದ ಸರಕಾರವು 12,500 ಕೋಟಿ ರೂ. ವೆಚ್ಚದ ಮೂರು ವರ್ಷಗಳ ಶಾಲಾ ಮೂಲಸೌಕರ್ಯ ಬಲವರ್ಧನೆಯ ನೀಲನಕ್ಷೆಯನ್ನು ಪ್ರಕಟಿಸಿದೆ. ಸರಕಾರಿ ಶಾಲೆಗಳ ಪರಿಶೀಲನೆಗೆ ಕಾಂಗ್ರೆಸ್ ಬೆಂಬಲ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ಸರಕಾರಿ ಶಾಲೆಗಳಿಗೆ ಭೇಟಿ ನೀಡುವುದು ಮತ್ತು ವಿಡಿಯೋ ಚಿತ್ರೀಕರಣ ಮಾಡುವುದರ ಮೇಲಿನ ನಿರ್ಬಂಧ, ಸಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆ ಆರೋಪ ಹಾಗೂ ವಿಧಾನಸಭೆಯಲ್ಲಿ ಸರಕಾರದ ವಿರುದ್ಧ ಕಾಂಗ್ರೆಸ್‌ನ ತೀವ್ರ ಆಕ್ರೋಶದ ನಡುವೆಯೇ ಶನಿವಾರ ತಡರಾತ್ರಿ ಈ ಘೋಷಣೆ ಹೊರಬಿದ್ದಿದೆ.

ಈ ಕುರಿತು ಟೈಮ್ಸ್ ಆಫ್ ಇಂಡಿಯಾಗೆ ಪ್ರತಿಕ್ರಿಯಿಸಿರುವ ಬಿಜೆಪಿಯ ಹಿರಿಯ ನಾಯಕರೊಬ್ಬರು, ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಅವುಗಳ ಸ್ಥಿತಿಗತಿಯನ್ನು ದಾಖಲಿಸುವಂತೆ ಸಿಜೆಪಿ ನಾಗರಿಕರಿಗೆ ನೀಡಿದ ಕರೆ ಹಾಗೂ ಕಾಂಗ್ರೆಸ್ ಅದನ್ನು ರಾಜಕೀಯ ವಿಷಯವನ್ನಾಗಿ ಪರಿವರ್ತಿಸಿದ್ದು ಅಭಿಯಾನಕ್ಕೆ ಹೆಚ್ಚಿನ ವೇಗ ನೀಡಿತು ಎಂದು ಹೇಳಿದ್ದಾರೆ. “ಈ ವಿಷಯಕ್ಕೆ ಉತ್ತರಿಸದೇ ಉಳಿದಿದ್ದರೆ, ವಿರೋಧ ಪಕ್ಷಗಳಿಗೆ ಚುನಾವಣಾ ವಿಷಯವನ್ನು ಮುನ್ನಡೆಸಲು ಅವಕಾಶ ನೀಡಿದಂತಾಗುತ್ತಿತ್ತು” ಎಂದು ಅವರು ತಿಳಿಸಿದ್ದಾರೆ.

ಪ್ರಸ್ತಾವಿತ ನೀಲನಕ್ಷೆಯ ಪ್ರಕಾರ, 2,487.7 ಕೋಟಿ ರೂ. ವೆಚ್ಚದಲ್ಲಿ 3,587 ಹೊಸ ಶಾಲಾ ಕಟ್ಟಡಗಳು ಹಾಗೂ 8,378.3 ಕೋಟಿ ರೂ. ವೆಚ್ಚದಲ್ಲಿ 83,783 ತರಗತಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಅಲ್ಲದೆ, 22,589 ಶಾಲೆಗಳಲ್ಲಿ ಪ್ರಮುಖ ದುರಸ್ತಿ ಕಾರ್ಯಗಳಿಗೆ 1,129.5 ಕೋಟಿ ರೂ. ಹಾಗೂ 13,616 ಶೌಚಾಲಯ ಸಂಕೀರ್ಣಗಳ ನಿರ್ಮಾಣಕ್ಕೆ 340.4 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೇ 3,006 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದ್ದು, ಅವು ವಿವಿಧ ಹಂತಗಳಲ್ಲಿ ಪೂರ್ಣಗೊಳ್ಳುತ್ತಿವೆ ಎಂದು ಸರಕಾರ ತಿಳಿಸಿದೆ.

ಸರಕಾರದ ಡಿಜಿಟಲ್ ಶಿಕ್ಷಣ ಯೋಜನೆಯಡಿ 9,000 ಸ್ಮಾರ್ಟ್ ತರಗತಿಗಳು, 7,000 ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಲ್ಯಾಬ್‌ಗಳು ಹಾಗೂ 80,000 ಟ್ಯಾಬ್ಲೆಟ್‌ಗಳನ್ನು ಒದಗಿಸಲಾಗುವುದು. ಡಿಸೆಂಬರ್ 2026ರ ವೇಳೆಗೆ ಡಿಜಿಟಲ್ ಶಿಕ್ಷಣಕ್ಕಾಗಿ 1,087 ಕೋಟಿ ರೂ. ಮೀಸಲಿಡಲಾಗಿದೆ.

2024-25 ಮತ್ತು 2025-26ರಲ್ಲಿ 1,219.9 ಕೋಟಿ ರೂ. ಮೌಲ್ಯದ 3,364 ಶಾಲಾ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 614 ಹೊಸ ಶಾಲಾ ಕಟ್ಟಡಗಳು ಮತ್ತು 2,750 ಶಾಲೆಗಳ ಪ್ರಮುಖ ದುರಸ್ತಿ ಕಾಮಗಾರಿಗಳು ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor