ಹೈದರಾಬಾದ್ ನ NALSAR ಬಳಿಕ ಬೆಂಗಳೂರಿನ NLSIUನಲ್ಲೂ CJIಗೆ ಆಹ್ವಾನ ನೀಡುವುದಕ್ಕೆ ವಿರೋಧ!

Update: 2026-08-16 22:50 IST

ಸೂರ್ಯ ಕಾಂತ್  ,  ಮನನ್ ಕುಮಾರ್ ಮಿಶ್ರಾ | Photo Credit : PTI 

ಬೆಂಗಳೂರು: ಮುಂಬರುವ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರನ್ನು ಆಹ್ವಾನಿಸುವ ಪ್ರಸ್ತಾವಕ್ಕೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ಯ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಘಟಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಹೈದರಾಬಾದ್‌ನ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ (NALSAR)ಯ 2026ನೇ ಬ್ಯಾಚ್‌ ನ ವಿದ್ಯಾರ್ಥಿಗಳಿಗೆ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ನೀಡಬಾರದು ಎಂದು BCI ಅಲ್ಪಾವಧಿಗೆ ಆದೇಶಿಸಿತ್ತು. ಈ ಆದೇಶ ಹೊರಬಿದ್ದ ಬೆನ್ನಲ್ಲೇ NLSIU ವಿದ್ಯಾರ್ಥಿಗಳು ಈ ವಿರೋಧ ವ್ಯಕ್ತಪಡಿಸಿದ್ದಾರೆ.

ಬಳಿಕ BCI ತನ್ನ ಆದೇಶವನ್ನು ಹಿಂಪಡೆದಿತ್ತು. BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ವಿದ್ಯಾರ್ಥಿಗಳ ಕ್ಷಮೆಯನ್ನೂ ಕೋರಿದ್ದರು. ‘ಘನತೆ, ಯೋಚನಾ ಸ್ವಾತಂತ್ರ್ಯ ಹಾಗೂ ನ್ಯಾಯಬದ್ಧ ಕಳವಳಗಳನ್ನು ಗೌರವಿಸಬೇಕಿದೆ’ ಎಂದು ಅವರು ಹೇಳಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ ಶನಿವಾರ ಪತ್ರ ಬಿಡುಗಡೆ ಮಾಡಿರುವ NLSIU ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು, NALSAR ವಿದ್ಯಾರ್ಥಿಗಳಿಗೆ ಬೇಷರತ್ ಬೆಂಬಲ ಘೋಷಿಸಿದ್ದಾರೆ. BCI ಅಧ್ಯಕ್ಷರ ವರ್ತನೆ ಹಾಗೂ ತಮ್ಮದೇ ಘಟಿಕೋತ್ಸವ ಕಾರ್ಯಕ್ರಮಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಆಹ್ವಾನಿಸುವ ಪ್ರಸ್ತಾವವನ್ನು ಅವರು ಟೀಕಿಸಿದ್ದಾರೆ.

‘ಇದು ಕೇವಲ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಯಾರು ಭಾಗವಹಿಸುತ್ತಾರೆ ಎಂಬ ಸರಳ ಪ್ರಶ್ನೆಯಲ್ಲ. ಬದಲಿಗೆ, ತಮ್ಮ ವೃತ್ತಿಜೀವನದ ಭವಿಷ್ಯದ ಕುರಿತು ಯಾವುದೇ ಅಂಜಿಕೆಯಿಲ್ಲದೆ ಭಾರತದ ಮುಂಚೂಣಿ ಕಾನೂನು ಶಾಲೆಗಳ ವಿದ್ಯಾರ್ಥಿಗಳು ಪ್ರಬಲ ಸಂಸ್ಥೆಗಳು ಹಾಗೂ ಸಾರ್ವಜನಿಕ ಅಧಿಕಾರಿಗಳೊಂದಿಗೆ ಭಿನ್ನಮತ ಹೊಂದಲು ಸ್ವಾತಂತ್ರ್ಯ ಹೊಂದಿರಬೇಕಿದೆ’ ಎಂದು ವಿದ್ಯಾರ್ಥಿಗಳ ಸಂಘಟನೆ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ಹೇಳಿದೆ.

‘ಪ್ರಭುತ್ವದೊಂದಿಗೆ ಸತ್ಯ ಮಾತನಾಡುವ ಅನುಕರಣೀಯ ಧೈರ್ಯ ಮತ್ತು ನೈತಿಕ ಶಕ್ತಿ ಪ್ರದರ್ಶಿಸಿದ NALSAR ವಿದ್ಯಾರ್ಥಿಗಳೊಂದಿಗೆ ಬೇಷರತ್ತಾಗಿ ನಿಲ್ಲಲಿದ್ದೇವೆ’ ಎಂದೂ ಪ್ರಕಟನೆಯಲ್ಲಿ ತಿಳಿಸಲಾಗಿದೆ.

NALSAR ವಿದ್ಯಾರ್ಥಿಗಳು ಹಾಗೂ ಬೋಧಕ ಸಮುದಾಯದ ಬಳಿ BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಬೇಷರತ್ ಕ್ಷಮೆ ಕೋರಬೇಕು ಎಂದು NLSIU ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News