ಪ್ರಧಾನಿ ಮೋದಿಯವರ ‘ದಿಮಾಗಿ ನಕ್ಸಲ್’ ಹೇಳಿಕೆ ಬೆನ್ನಲ್ಲೇ ಇನ್ಸ್ಟಾದಲ್ಲಿ ‘ದಿಮಾಗಿ ನಕ್ಸಲ್ ಜನತಾ ಪಕ್ಷ’ ಖಾತೆ ಪ್ರತ್ಯಕ್ಷ; ಒಂದೇ ದಿನಕ್ಕೆ 57k ಫಾಲೋವರ್ಸ್!
Photo Credit : (X (@DNJP_India))
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮಾಡಿದ ‘ದಿಮಾಗಿ ನಕ್ಸಲ್’ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ‘ದಿಮಾಗಿ ನಕ್ಸಲ್ ಜನತಾ ಪಕ್ಷ’ (DNJP) ಹೆಸರಿನ ಹೊಸ ಖಾತೆಯೊಂದು ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿದೆ.
@DNJP_India ಹೆಸರಿನ ಈ ಖಾತೆ ಒಂದೇ ದಿನದಲ್ಲಿ 57 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದೆ. ಯೂಟ್ಯೂಬರ್ ಧ್ರುವ್ ರಾಠಿ ಈ ಖಾತೆಯನ್ನು ಫಾಲೋ ಮಾಡುತ್ತಿದ್ದಾರೆ.
Photo Credit : @DNJP_India
ಈ ಖಾತೆಯು ಕಾಂಗ್ರೆಸ್ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, AAP ನಾಯಕ ಅರವಿಂದ್ ಕೇಜ್ರಿವಾಲ್, ಯೂಟ್ಯೂಬರ್ ಧ್ರುವ್ ರಾಠಿ, ಹಾಸ್ಯನಟ ಕುನಾಲ್ ಕಮ್ರಾ, ನಟ ಪ್ರಕಾಶ್ ರಾಜ್ ಹಾಗೂ ಫ್ಯಾಕ್ಟ್ ಚೆಕರ್ ಮುಹಮ್ಮದ್ ಝುಬೈರ್ ಸೇರಿದಂತೆ 13 ಖಾತೆಗಳನ್ನು ಫಾಲೋ ಮಾಡುತ್ತಿದೆ.
ಇದರೊಂದಿಗೆ ರಾಜಕೀಯ ಕಂಟೆಂಟ್ ಕ್ರಿಯೆಟರ್ ಅರ್ಪಿತ್ ಶರ್ಮಾ, ಯೂಟ್ಯೂಬರ್ ಶ್ಯಾಮ್ ಮೀರಾ ಸಿಂಗ್, ರಾಜಕೀಯ ನಿರೂಪಕ ತರುಣ್ ಗೌತಮ್, ಡಾ. ನಿಮೋ ಯಾದವ್ 2.0, ‘ರೋಫ್ಲ್ ಗಾಂಧಿ 2.0’ ಹಾಗೂ ‘ಕಾಕ್ರೋಚ್ ಜನತಾ ಪಕ್ಷ’ದ ಖಾತೆಯನ್ನೂ DNJP_India ಫಾಲೋ ಮಾಡುತ್ತಿದೆ.
ಪ್ರಕಾಶ್ ರಾಜ್ ಸಂದೇಶ ಮರುಟ್ವೀಟ್
ಹೊಸದಾಗಿ ಕಾಣಿಸಿಕೊಂಡಿರುವ ಖಾತೆಯು ನಟ ಪ್ರಕಾಶ್ ರಾಜ್ ಅವರ ಪೋಸ್ಟ್‌ವೊಂದನ್ನು ಮರುಟ್ವೀಟ್ ಮಾಡಿದೆ. ಜನರು ಹೇಳುವುದನ್ನು ಕುರುಡಾಗಿ ಸ್ವೀಕರಿಸದೆ, ಪ್ರಶ್ನಿಸುವಂತೆ ಪ್ರಕಾಶ್ ರಾಜ್ ತಮ್ಮ ಪೋಸ್ಟ್‌ನಲ್ಲಿ ಕರೆ ನೀಡಿದ್ದರು.
‘ಡಿಮಗಿ ಬಾನೋ.. ಬೇವಕೂಫ್ ನಹಿ. ಸವಾಲ್ ಕರೋ.. ಗುಲಾಮಿ ನಹಿ’ ಎಂದು ಅವರು ಬರೆದಿದ್ದರು.
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ‘ದಿಮಾಗಿ ನಕ್ಸಲ್’ ಮನಸ್ಥಿತಿ ಹೊಂದಿರುವವರನ್ನು ಉಲ್ಲೇಖಿಸಿದ ಕೆಲವೇ ಸಮಯದ ಬಳಿಕ ಈ ಖಾತೆಯ ಚಟುವಟಿಕೆ ಗಮನಕ್ಕೆ ಬಂದಿದೆ. ಮೋದಿ ಅವರ ಹೇಳಿಕೆಗೆ ರಾಜಕೀಯ ವಲಯದಲ್ಲಿ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ‘ದಿಮಾಗಿ ನಕ್ಸಲ್’ ಎಂದು ಕರೆಸಿಕೊಳ್ಳುವುದಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದರು.