ಅಲಹಾಬಾದ್ ಹೈಕೋರ್ಟ್ | Photo Credit : PTI

ಪ್ರಯಾಗ್ರಾಜ್: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಹಾಗೂ ಮುಸ್ಲಿಂ ಮಹಿಳೆಯನ್ನು ವಿವಾಹವಾಗುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ತನ್ನ ತಂದೆ ತನ್ನನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿರುವ ಮಗನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಅಲಹಾಬಾದ್ ಹೈಕೋರ್ಟ್ ಸೂಚಿಸಿದೆ.

ಆಯುಷ್ ಮಲಿಕ್ (31) ಅವರು ತಮ್ಮ ಸ್ನೇಹಿತ ಸುಲ್ತಾನ್ ಮೂಲಕ ಸಲ್ಲಿಸಿದ್ದ ‘ಹೇಬಿಯಸ್ ಕಾರ್ಪಸ್’ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂದೀಪ್ ಜೈನ್ ಅವರು ಈ ಆದೇಶ ಹೊರಡಿಸಿದ್ದಾರೆ.

ಯಾವುದೇ ಬಲವಂತ, ಅನಗತ್ಯ ಪ್ರಭಾವ ಅಥವಾ ಆಮಿಷಕ್ಕೆ ಒಳಗಾಗದೆ ಮಲಿಕ್ ಸ್ವಇಚ್ಛೆಯಿಂದ ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಅಲ್ಲದೆ, ತಂದೆ ದೇವ್ರಾಜ್ ಸಿಂಗ್ ಮಲಿಕ್ ಅವರ ಇಚ್ಛೆಗೆ ವಿರುದ್ಧವಾಗಿ ಚಾಂದಿನಿ ಖುರೇಷಿ ಅವರನ್ನು ವಿವಾಹವಾಗಿರುವುದಾಗಿ ಮಲಿಕ್ ತಿಳಿಸಿದ್ದಾರೆ.

ಮಗನ ಈ ನಡೆಗೆ ನೊಂದ ತಂದೆ, ಶಾಮ್ಲಿ ಜಿಲ್ಲೆಯ ಶಾಮ್ಲಿ ಪೊಲೀಸ್ ಠಾಣೆಯಲ್ಲಿ ಮಲಿಕ್ ಅವರ ಪತ್ನಿ ಹಾಗೂ ಆಕೆಯ ಸಂಬಂಧಿಕರ ವಿರುದ್ಧ ‘ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆ, 2021’ ಮತ್ತು BNSನ ಕೆಲವು ನಿಬಂಧನೆಗಳ ಅಡಿಯಲ್ಲಿ FIR ದಾಖಲಿಸಿದ್ದಾರೆ.

ತಂದೆಯೊಂದಿಗೆ ಶಾಮೀಲಾಗಿ ಹಾಗೂ ಅವರ ಕುಮ್ಮಕ್ಕಿನಿಂದ ರಾಜ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಲಿಕ್ ಅವರನ್ನು ಕಾನೂನುಬಾಹಿರವಾಗಿ ಬಂಧನದಲ್ಲಿರಿಸಲು ಸಹಕರಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಆರೋಪಿಸಿದರು.

ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಮಲಿಕ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಿತು.

ಸೆ.9ರಂದು ಹೊರಡಿಸಿದ ಆದೇಶದಲ್ಲಿ, ರಿಟ್ ಅರ್ಜಿಯೊಂದಿಗೆ ಲಗತ್ತಿಸಲಾಗಿದ್ದ ದಾಖಲೆಗಳನ್ನು ಪರಿಶೀಲಿಸಿದಾಗ ಆಯುಷ್ ಮಲಿಕ್ ಅವರು ಸ್ವಯಂಪ್ರೇರಣೆಯಿಂದ ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದು ಮತ್ತು ತಂದೆಯ ಇಚ್ಛೆಗೆ ವಿರುದ್ಧವಾಗಿ ಚಾಂದಿನಿ ಖುರೇಷಿ ಅವರನ್ನು ವಿವಾಹವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ನ್ಯಾಯಾಲಯ ಹೇಳಿತು.

‘ಮಲಿಕ್ ಅವರ ಈ ಕೃತ್ಯಗಳ ಪರಿಣಾಮವಾಗಿಯೇ ಅವರ ತಂದೆ FIR ದಾಖಲಿಸಿರುವುದೂ ಕಂಡುಬರುತ್ತದೆ’ ಎಂದು ನ್ಯಾಯಾಲಯ ತಿಳಿಸಿತು.

ತಮ್ಮ ಕಕ್ಷಿದಾರರನ್ನು ಕಾನೂನುಬಾಹಿರವಾಗಿ ಬಂಧನದಲ್ಲಿರಿಸಲಾಗಿದೆ ಮತ್ತು ಅಂತಹ ಬಂಧನಕ್ಕೆ ರಾಜ್ಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ ಎಂಬ ಅರ್ಜಿದಾರರ ಪರ ವಕೀಲರ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಎಂದು ನ್ಯಾಯಾಲಯ ಹೇಳಿತು.

‘ಆದ್ದರಿಂದ, ಈ ವಿಷಯವನ್ನು ನ್ಯಾಯಾಲಯವು ತಕ್ಷಣವೇ ಪರಿಗಣಿಸಬೇಕಾದ ಅಗತ್ಯವಿದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor