Maharashtra | 11ರೂ.ಬೆಲೆಯ IV infusion ಸೆಟ್ಗೆ 325 MRP: ಆಸ್ಪತ್ರೆಗಳಲ್ಲಿ ವೈದ್ಯಕೀಯ ಉತ್ಪನ್ನಗಳ ಬೆಲೆಗಳಲ್ಲಿನ ವ್ಯತ್ಯಾಸದ ಬಗ್ಗೆ ತುಕಾರಾಂ ಮುಂಡೆ ಕಳವಳ
ತುಕಾರಾಂ ಮುಂಡೆ | Photo Credit : X \ @Tukaram_IndIAS
ಮುಂಬೈ : ಮಹಾರಾಷ್ಟ್ರ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಮುಖ್ಯಸ್ಥ ತುಕಾರಾಂ ಮುಂಡೆ ಅವರು ಆಸ್ಪತ್ರೆಗಳಲ್ಲಿ ಬಳಸುವ ವೈದ್ಯಕೀಯ ಉತ್ಪನ್ನಗಳ ವ್ಯಾಪಾರ ಬೆಲೆ ಮತ್ತು MRP ನಡುವಿನ ಭಾರೀ ವ್ಯತ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ರೋಗಿಗಳು ಚಿಕಿತ್ಸೆ ವೇಳೆ ಬಳಸುವ ವೈದ್ಯಕೀಯ ಉತ್ಪನ್ನಗಳ ನೈಜ ವೆಚ್ಚ ತಿಳಿಯದೆ, ಅವುಗಳ ಮೂಲ ದರಕ್ಕಿಂತ ನೂರಾರು ಅಥವಾ ಸಾವಿರಾರು ಪಟ್ಟು ಹೆಚ್ಚಿನ ಹಣವನ್ನು ಪಾವತಿಸುತ್ತಿರಬಹುದು ಎಂದು ತುಕಾರಾಂ ಮುಂಡೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ತುಕಾರಾಂ ಮುಂಡೆ, ಆಸ್ಪತ್ರೆಗಳಲ್ಲಿ ಬಳಸುವ ವೈದ್ಯಕೀಯ ಉತ್ಪನ್ನಗಳು ಮತ್ತು ಅವುಗಳ ಲಾಭಾಂಶದ ಬಗ್ಗೆ ಪ್ರಸ್ತಾಪಿಸಿದ್ದಾರೆ.
“ಚಿಕಿತ್ಸೆಗೆ ದಾಖಲಾಗಿರುವ ರೋಗಿಗೆ, ಔಷಧಿಯ ಬೆಲೆಯು ನೈಜವೇ ಅಥವಾ ಹೆಚ್ಚುವರಿ ಲಾಭಾಂಶವನ್ನು ಒಳಗೊಂಡಿದೆಯೇ ಎಂಬುದನ್ನು ತಿಳಿದುಕೊಳ್ಳಲು ಯಾವುದೇ ಅವಕಾಶವಿರುವುದಿಲ್ಲ. ಇದು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆʼ ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಬಳಸುವ ವೈದ್ಯಕೀಯ ಉತ್ಪನ್ನಗಳ ಕುರಿತು ನಡೆಸಿದ ಸಮೀಕ್ಷೆಯ ವರದಿಯನ್ನು ಅವರು ಉಲ್ಲೇಖಿಸಿದ್ದಾರೆ. ಕೆಲವು ಉತ್ಪನ್ನಗಳ ಅಸಲಿ ಬೆಲೆ ಮತ್ತು ಅವುಗಳ ಮೇಲೆ ಮುದ್ರಿಸಲಾದ ಗರಿಷ್ಠ ಚಿಲ್ಲರೆ ಬೆಲೆ (MRP) ನಡುವೆ ಗಮನಾರ್ಹ ವ್ಯತ್ಯಾಸವಿದ್ದು, ಇದರಿಂದ ಭಾರೀ ಪ್ರಮಾಣದ ಹೆಚ್ಚುವರಿ ಲಾಭಾಂಶ ವಿಧಿಸಲಾಗುತ್ತಿದೆ ಎಂಬುದು ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಹೇಳಿದ್ದಾರೆ.
11.05 ವ್ಯಾಪಾರ ಬೆಲೆಯಿದ್ದ IV ಇನ್ಫ್ಯೂಷನ್ ಸೆಟ್ ಗೆ 325 ಎಂಆರ್‌ಪಿ ನಿಗದಿಪಡಿಸಲಾಗಿತ್ತು. ಇದು ಶೇ. 2,841ರಷ್ಟು ಹೆಚ್ಚುವರಿ ಬೆಲೆಯನ್ನು ಸೂಚಿಸುತ್ತದೆ. 6.75 ಬೆಲೆಯ ಸಿರಿಂಜ್ ಗೆ 57.20 ಎಂಆರ್ ಪಿ ಹಾಗೂ 29.41 ಬೆಲೆಯ ಕ್ಯಾಥೆಟರ್ ಗೆ 310 ಎಂಆರ್ ಪಿ ಎಂದು ತೋರಿಸಲಾಗುತ್ತದೆ ಎಂದು ಹೇಳಿದರು.
ಇವು ಐಚ್ಛಿಕವಾಗಿ ಖರೀದಿಸುವ ವಸ್ತುಗಳಲ್ಲ. ರೋಗಿಗಳಿಗೆ ಸಾಮಾನ್ಯವಾಗಿ ಬೆಲೆಗಳನ್ನು ಹೋಲಿಕೆ ಮಾಡಲು, ಪರ್ಯಾಯಗಳನ್ನು ಹುಡುಕಲು ಅಥವಾ ವೈದ್ಯಕೀಯ ಉತ್ಪನ್ನದ ಮೇಲೆ ಮುದ್ರಿಸಿರುವ ಬೆಲೆಯನ್ನು ಪ್ರಶ್ನಿಸಲು ಸಾಧ್ಯವಾಗುವುದಿಲ್ಲ ಎಂದು ತುಕಾರಾಂ ಮುಂಡೆ ಹೇಳಿದ್ದಾರೆ.