ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ವಿನೇಶ್ ಫೋಗಟ್ ಗೆ ಅವಕಾಶ ನೀಡಿ: WFIಗೆ ದಿಲ್ಲಿ ಹೈಕೋರ್ಟ್ ಸೂಚನೆ
Photo Credit: PTI
ಹೊಸದಿಲ್ಲಿ, ಮೇ 22: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ‘ಅನರ್ಹ’ ಎಂದು ಘೋಷಿಸಿದ ಭಾರತೀಯ ಕುಸ್ತಿ ಒಕ್ಕೂಟದ (WFI) ಕ್ರಮವನ್ನು ದಿಲ್ಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಫೋಗಟ್ ಅವರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಸೂಚಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠವು, ತಾಯಿಯಾದ ಬಳಿಕ ಕ್ರೀಡಾಂಗಣಕ್ಕೆ ಮರಳಲು ಬಯಸುತ್ತಿರುವ ಫೋಗಟ್ ಅವರಿಗೆ ಮುಂಬರುವ ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಹೇಳಿತು.
“ಹಿಂದೆ ಇದ್ದಂತೆ ಈಗ ಡಬ್ಲ್ಯುಎಫ್‌ಐ ನಡೆದುಕೊಳ್ಳುತ್ತಿಲ್ಲ. ವಿನೇಶ್ ಫೋಗಟ್ ವಿಚಾರದಲ್ಲಿ ನಿಯಮಗಳನ್ನು ಬೇರೆ ರೀತಿಯಲ್ಲಿ ಬಳಸಲಾಗುತ್ತಿದೆ. ಇದು ಸರಿಯಲ್ಲ,” ಎಂದು ನ್ಯಾಯಪೀಠ ಹೇಳಿತು.
“ತಜ್ಞರು ಆಕೆಯ ಸಾಮರ್ಥ್ಯ ಮತ್ತು ಅವಕಾಶಗಳನ್ನು ಮೌಲ್ಯಮಾಪನ ಮಾಡಲಿ. ಅವರು ಟ್ರಯಲ್ಸ್‌ನಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿ,” ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿತು. ತಜ್ಞರ ಸಮಿತಿ ರಚನೆ ಕುರಿತು ಹೆಚ್ಚಿನ ವಿವರಗಳನ್ನು ಸಲ್ಲಿಸಲು ಸರಕಾರ ವಕೀಲರಿಗೆ ಅವಕಾಶ ನೀಡುವ ಸಲುವಾಗಿ ವಿಚಾರಣೆಯನ್ನು ಮುಂದೂಡಿತು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೋಗಟ್ ಅವರನ್ನು ಅನರ್ಹಗೊಳಿಸಿದ್ದನ್ನು ‘ರಾಷ್ಟ್ರೀಯ ಅವಮಾನ’ ಎಂದು ಹೇಳಿದ ನ್ಯಾಯಾಲಯ, ಅವರ ವಿರುದ್ಧವೇ ಆಯ್ಕೆ ನಿಯಮಗಳನ್ನು ಬದಲಾಯಿಸಲಾಗಿದೆ ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿತು.
ಈ ವರ್ಷದ ಏಷ್ಯನ್ ಕ್ರೀಡಾಕೂಟದ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕೋರಿ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತು.