Tamil Nadu | ಕರೂರು ಕ್ಷೇತ್ರದ AIADMK ಶಾಸಕ ಎಂ.ಆರ್. ವಿಜಯಭಾಸ್ಕರ್ ರಾಜೀನಾಮೆ; TVK ಸೇರ್ಪಡೆ ಸಾಧ್ಯತೆ
Photo | newindianexpress
ಚೆನ್ನೈ: ತಮಿಳುನಾಡಿನ ಕರೂರು ಕ್ಷೇತ್ರದ AIADMK ಶಾಸಕ ಎಂ.ಆರ್. ವಿಜಯಭಾಸ್ಕರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅವರು ಟಿವಿಕೆ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಮಾಜಿ ಸಚಿವರಾಗಿರುವ ಎಂ.ಆರ್.ವಿಜಯಭಾಸ್ಕರ್ ಅವರು ವಿಧಾನಸಭೆಯ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಹಾಗೂ ರಾಜೀನಾಮೆ ಸೂಕ್ತ ಮಾದರಿಯಲ್ಲಿದೆ ಎಂದು ಸ್ಪೀಕರ್ ದೃಢಪಡಿಸಿದ್ದಾರೆ.
ಇದರಿಂದಾಗಿ 17ನೇ ತಮಿಳುನಾಡು ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿದ ಶಾಸಕರ ಸಂಖ್ಯೆ 7ಕ್ಕೆ ಏರಿಕೆಯಾದಂತಾಗಿದೆ. ಈ ಪೈಕಿ ಆರು ಶಾಸಕರು ಎಐಎಡಿಎಂಕೆ ಪಕ್ಷಕ್ಕೆ ಸೇರಿದ್ದು, ಅವರಲ್ಲಿ ನಾಲ್ವರು ಈಗಾಗಲೇ ಟಿವಿಕೆಗೆ ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆಯಿಂದಾಗಿ ವಿಧಾನಸಭೆಯಲ್ಲಿ 47 ಶಾಸಕರ ಬಲ ಹೊಂದಿದ್ದ ಎಐಎಡಿಎಂಕೆಯ ಸಂಖ್ಯಾಬಲ 41ಕ್ಕೆ ಕುಸಿದಿದೆ.
ಮೇ 4ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಎಐಎಡಿಎಂಕೆಯ ನಾಲ್ವರು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಇದು ವಿಪಕ್ಷ ಎಐಎಡಿಎಂಕೆಯಲ್ಲಿ ಉಲ್ಬಣಿಸುತ್ತಿರುವ ಆಂತರಿಕ ಭಿನ್ನಮತಕ್ಕೆ ಸಾಕ್ಷಿಯಾಗಿತ್ತು.