×
Ad

Ayodhya ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ : CBI ತನಿಖೆ ಕೋರಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

Update: 2026-06-29 11:26 IST

ಸುಪ್ರೀಂ ಕೋರ್ಟ್ | Photo Credit : PTI 

ಹೊಸದಿಲ್ಲಿ, ಜೂ.29: ಅಯೋಧ್ಯೆಯ ರಾಮಮಂದಿರದ ದೇಣಿಗೆ ನಿಧಿಯ ದುರುಪಯೋಗದ ಆರೋಪಗಳ ಕುರಿತು ಕೇಂದ್ರ ತನಿಖಾ ದಳ (CBI) ನೇತೃತ್ವದ ಬಹು-ಸಂಸ್ಥೆಗಳ ತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಬೇಸಿಗೆ ರಜೆಯ ಬಳಿಕ ನ್ಯಾಯಾಲಯವು ನಿಯಮಿತ ಕಾರ್ಯಚಟುವಟಿಕೆಗಳನ್ನು ಪುನರಾರಂಭಿಸಿದ ನಂತರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ "ಸ್ವರ್ಗವೇನೂ ಕುಸಿಯುವುದಿಲ್ಲ" ಎಂದು ಹೇಳಿದೆ.

ರಾಮಮಂದಿರದಲ್ಲಿ ಸಂಗ್ರಹವಾಗಿರುವ ದೇಣಿಗೆ ನಿಧಿಯ ದುರುಪಯೋಗದ ಆರೋಪಗಳ ಕುರಿತು ಸಿಬಿಐ ಮತ್ತು ಇತರ ತನಿಖಾ ಸಂಸ್ಥೆಗಳು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸುವಂತೆ ಇಬ್ಬರು ವಕೀಲರು ಸಲ್ಲಿಸಿರುವ ಪಿಐಎಲ್‌ನಲ್ಲಿ ಕೋರಲಾಗಿದೆ.

ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ ವೇಳೆ, ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆಯು ವಿಶ್ವಾಸ ಮೂಡಿಸುವಂತಿಲ್ಲ ಎಂದು ಅರ್ಜಿದಾರರು ವಾದಿಸಿದರು. ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಸಾಕ್ಷ್ಯಗಳನ್ನು ಸಮರ್ಪಕವಾಗಿ ಸಂರಕ್ಷಿಸಲಾಗಿಲ್ಲ ಎಂಬ ಆರೋಪವನ್ನೂ ಅವರು ಮುಂದಿಟ್ಟರು.

ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಶೀಲ್ ನಾಗು ಅವರ ಪೀಠವು ತುರ್ತು ಪಟ್ಟಿಗೆ ಸೇರಿಸುವ ಮನವಿಯನ್ನು ತಿರಸ್ಕರಿಸಿತು. ಜುಲೈ 12ರಿಂದ 17ರ ವಾರದಲ್ಲಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ತಿಳಿಸಿತು.

ರಾಮಮಂದಿರಕ್ಕೆ ಸಲ್ಲಿಕೆಯಾಗಿರುವ ದೇಣಿಗೆಗಳ ದುರುಪಯೋಗದ ಆರೋಪಗಳ ಕುರಿತು ಈಗಾಗಲೇ ಪೊಲೀಸ್ ತನಿಖೆ ನಡೆಯುತ್ತಿದೆ. ತನಿಖೆಯ ಭಾಗವಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅಗತ್ಯವಿದ್ದಲ್ಲಿ ಟ್ರಸ್ಟಿ ಅನಿಲ್ ಮಿಶ್ರಾ ಸೇರಿದಂತೆ ಇತರ ಹಿರಿಯ ಟ್ರಸ್ಟ್ ಅಧಿಕಾರಿಗಳ ಹೇಳಿಕೆಗಳನ್ನೂ ದಾಖಲಿಸಬಹುದು ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆರೋಪಗಳಿಂದ ತಾವು 'ಆಘಾತ, ನೋವು ಮತ್ತು ತೀವ್ರ ದುಃಖ' ಅನುಭವಿಸಿದ್ದೇವೆ ಎಂದು ಹೇಳಿತ್ತು. ನ್ಯಾಯಸಮ್ಮತ ತನಿಖೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿರುವ ಟ್ರಸ್ಟ್, ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ಅವರ ರಾಜೀನಾಮೆಗಳನ್ನು ಸ್ವೀಕರಿಸಿರುವುದನ್ನು ದೃಢಪಡಿಸಿತ್ತು. ಈ ವಿಷಯವನ್ನು ಟ್ರಸ್ಟ್‌ನ ಮುಂದಿನ ಸಭೆಯಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿತ್ತು.

ಭಕ್ತರಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸಿರುವ ಟ್ರಸ್ಟ್, ಬೆಳ್ಳಿ ಇಟ್ಟಿಗೆಗಳು ಮತ್ತು ಆಭರಣಗಳು ಸೇರಿದಂತೆ ಭಗವಾನ್ ರಾಮನಿಗೆ ವೈಯಕ್ತಿಕವಾಗಿ ಅರ್ಪಿಸಲಾದ ಎಲ್ಲ ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿದ್ದು, ಅವುಗಳ ಸಂಪೂರ್ಣ ಲೆಕ್ಕಪತ್ರವನ್ನು ನಿರ್ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನೂ ಟ್ರಸ್ಟ್ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News