"ಕ್ಷಮೆಯಾಚಿಸಿ ಅಥವಾ ಕ್ರಮ ಎದುರಿಸಿ": ಪ್ರಧಾನಿ ಮೋದಿ ವಿಡಿಯೋ ವಿವಾದದ ಕುರಿತು ಮಾರ್ಕ್ ಝುಕರ್‌ಬರ್ಗ್‌ ಗೆ 3 ದಿನಗಳ ಗಡುವು ನೀಡಿದ ಸಂಸದೀಯ ಸಮಿತಿ

Update: 2026-08-05 13:51 IST

ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್‌ (Photo credit: AP/PTI) 

ಹೊಸದಿಲ್ಲಿ: ಪ್ರಧಾನಿ ಮೋದಿಯವರ ವಿಡಿಯೋವನ್ನು ಫೇಸ್ಬುಕ್ ನಲ್ಲಿ ಅಳಿಸಿಹಾಕಿರುವುದನ್ನು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಕರೆದಿರುವ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿಯು, ಈ ಬಗ್ಗೆ ಪ್ರಧಾನಿಯ ಕ್ಷಮೆಯಾಚಿಸಲು ಮೆಟಾ ಸಿಇಒ ಮಾರ್ಕ್ ಝುಕರ್‌ಬರ್ಗ್‌ ಗೆ ಮೂರು ದಿನಗಳ ಗಡುವು ನೀಡಿದೆ. ಇದನ್ನು ಪಾಲಿಸಲು ವಿಫಲವಾದರೆ ಫೇಸ್ಬುಕ್ ತನ್ನ ʼಸೇಫ್ ಹಾರ್ಬರ್ʼ ರಕ್ಷಣೆಯನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಂಸದೀಯ ಸಮಿತಿಯು, ಜುಲೈ 23 ರಂದು ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋವನ್ನು ಫೇಸ್ಬುಕ್ ನಿಂದ ಅಲ್ಪಾವಧಿಗೆ ತೆಗೆದುಹಾಕಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಝುಕರ್‌ಬರ್ಗ್‌ ಗೆ ಆಗ್ರಹಿಸಿದೆ.

ಮೂಲಗಳ ಪ್ರಕಾರ, ಮೂರು ದಿನಗಳೊಳಗೆ ಸೂಚನೆಗಳನ್ನು ಪಾಲಿಸಲು ವಿಫಲವಾದರೆ ಫೇಸ್ಬುಕ್ ನ ಸೇಫ್ ಹಾರ್ಬರ್ ರಕ್ಷಣೆಯನ್ನು ರದ್ದುಗೊಳಿಸುವ ಬಗ್ಗೆ ಭಾರತ ಸರ್ಕಾರವು ಪರಿಗಣಿಸಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ. ಫೇಸ್ಬುಕ್ ನ 'ಸೇಫ್ ಹಾರ್ಬರ್' ರಕ್ಷಣೆಯನ್ನು ಹಿಂಪಡೆದರೆ, ಅದರ ಅಧಿಕಾರಿಗಳು ನೇರ ಕ್ರಿಮಿನಲ್ ಕಾನೂನು ಕ್ರಮವನ್ನು ಎದುರಿಸಬೇಕಾಗಬಹುದು.

ಸಿಜೆಪಿ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳ ನಡುವೆ, ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದ ಜುಲೈ 23 ರ ಪ್ರಧಾನಿ ವಿಡಿಯೋವನ್ನು ಫೇಸ್ಬುಕ್ ಅಲ್ಪಾವಧಿಗೆ ತೆಗೆದುಹಾಕಿದ್ದರಿಂದ ಈ ವಿವಾದ ಹುಟ್ಟಿಕೊಂಡಿದೆ. ಸೆಲ್ಫಿ ಮಾದರಿಯ ಈ ವೀಡಿಯೋ ವನ್ನು ಮೊದಲು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾಗಿತ್ತು . ಬಳಿಕ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಲಾಗಿತ್ತು.

ಮೆಟಾ ಈ ಪೋಸ್ಟ್ ಅನ್ನು ಫೇಸ್ಬುಕ್ನಲ್ಲಿ ಅಲ್ಪಾವಧಿಗೆ ನಿರ್ಬಂಧಿಸಿತ್ತು ಮತ್ತು ತೀವ್ರ ವಿರೋಧ ವ್ಯಕ್ತವಾದ ನಂತರ ಅದನ್ನು ಮರುಸ್ಥಾಪಿಸಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಸಂಸದೀಯ ಸಮಿತಿಯು ಮೆಟಾ ಅಧಿಕಾರಿಗಳಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು. ಕಂಪನಿಯು ಕ್ಷಮೆಯಾಚಿಸಿ, ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಕಾರಣ ನೀಡಿದೆ. ಆದರೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ವಿವರಣೆಯನ್ನು ಸಮಂಜಸವಲ್ಲ ಎಂದು ತಿರಸ್ಕರಿಸಿದೆ. ಮೆಟಾ ಒಂದು ತಂತ್ರಜ್ಞಾನ ಕಂಪನಿಯಾಗಿ ಇಂತಹ ಲೋಪಗಳನ್ನು ತಡೆಯಲು ತನ್ನ ವ್ಯವಸ್ಥೆಗಳನ್ನು ಬಲಪಡಿಸಿಕೊಳ್ಳಬೇಕು ಎಂದು ಸಚಿವಾಲಯ ಪ್ರತಿಕ್ರಿಯಿಸಿತ್ತು.

ವಿಡಿಯೋ ಅಲ್ಪಾವಧಿಗೆ ಕಣ್ಮರೆಯಾಗಿದ್ದನ್ನು ಗಮನಿಸಿದ ಬಿಜೆಪಿ ನಾಯಕರು ಮತ್ತು ಆನ್ಲೈನ್ ವಿಮರ್ಶಕರು, ತಕ್ಷಣವೇ ಮೆಟಾಗೆ ಈ ಬಗ್ಗೆ ದೂರು ನೀಡಿ ಉತ್ತರಕ್ಕಾಗಿ ಆಗ್ರಹಿಸಿದ್ದರು.

ಮತ್ತೊಂದು ನಿರ್ದೇಶನದಲ್ಲಿ, ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ಸಂಬಂಧಿತ ವಿಷಯಗಳು (CSEAM) ಮತ್ತು ಮಹಿಳೆಯರನ್ನು ಗುರಿಯಾಗಿಸುವ ಆಕ್ಷೇಪಾರ್ಹ ಕಂಟೆಂಟ್ ಗಳನ್ನು ಮೂರು ದಿನಗಳೊಳಗೆ ತೆಗೆದುಹಾಕುವಂತೆ ಗೂಗಲ್, ಯೂಟ್ಯೂಬ್, ಎಕ್ಸ್, ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು Snapchat ಸೇರಿದಂತೆ ಪ್ರಮುಖ ಡಿಜಿಟಲ್ ವೇದಿಕೆಗಳಿಗೆ ಸಂಸದೀಯ ಸಮಿತಿಯು ಸೂಚಿಸಿದೆ. ವೇದಿಕೆಗಳು ನಿಯಮ ಪಾಲಿಸಲು ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.

ಈ ನಡುವೆ , ಪ್ರತ್ಯೇಕ ಆರೋಪಗಳ ಮೇಲೆ ತೆಲಂಗಾಣ ಪೊಲೀಸರು ಗೂಗಲ್ ಮತ್ತು ಮೆಟಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ನಕಲಿ ಹಣಕಾಸು ಅಪ್ಲಿಕೇಶನ್ಗಳನ್ನು ಹೊಂದಿರುವ ಆರೋಪದ ಮೇಲೆ ಗೂಗಲ್ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ವಿಡಿಯೋ ಪ್ರಸಾರ ಮಾಡಿದ ಆರೋಪದ ಮೇಲೆ ಮೆಟಾ ವಿರುದ್ಧ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News