Photo: Scroll

ಗುವಾಹಟಿ: ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರಕಾರದ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ನಾಗಾಂವ್, ಗೋಲಾಘಾಟ್ ಮತ್ತು ಹೋಜೈ ಜಿಲ್ಲೆಗಳಲ್ಲಿ ಎರಡು ದಿನಗಳಲ್ಲಿ 1,100ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿದೆ. ಇವರಲ್ಲಿ ಬಹುಪಾಲು ಬಂಗಾಳಿ ಮುಸ್ಲಿಮರು ಎಂದು ವರದಿಯಾಗಿದೆ.

ಕಾರ್ಯಾಚರಣೆಯ ವೇಳೆ 10ಕ್ಕೂ ಹೆಚ್ಚು ಮಸೀದಿಗಳನ್ನು ಧ್ವಂಸಗೊಳಿಸಲಾಗಿದ್ದು, ಅವುಗಳಲ್ಲಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿದ್ದ ಮಸೀದಿಗಳೂ ಸೇರಿವೆ ಎಂದು scroll.in ವರದಿ ಮಾಡಿದೆ.

600ಕ್ಕೂ ಹೆಚ್ಚು ಮನೆಗಳ ಧ್ವಂಸ

ತೆರವು ಕಾರ್ಯಾಚರಣೆಯ ಎರಡನೇ ದಿನವಾದ ರವಿವಾರ, ನಾಗಾಂವ್ ಜಿಲ್ಲೆಯ ಲುತುಮಾರಿ ಲಾಂಗ್‌ಜಾಪ್ ಮೀಸಲು ಅರಣ್ಯ ಪ್ರದೇಶದಲ್ಲಿ 600ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳ ಮನೆಗಳನ್ನು ಅಧಿಕಾರಿಗಳು ಧ್ವಂಸಗೊಳಿಸಿದರು. ಅರಣ್ಯ ಭೂಮಿಯನ್ನು ಅತಿಕ್ರಮಿಸಿಕೊಂಡಿದ್ದಾರೆ ಎಂಬುದು ಈ ಕ್ರಮಕ್ಕೆ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಇದಕ್ಕೂ ಹಿಂದಿನ ದಿನವಾದ ಶನಿವಾರ, ಬಿಗಿ ಭದ್ರತೆಯ ನಡುವೆ ಮೂರು ಜಿಲ್ಲೆಗಳಲ್ಲಿ ಒಟ್ಟು 547 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ನಾಗಾಂವ್‌ ನಲ್ಲಿ 336, ಹೋಜೈನಲ್ಲಿ 152 ಮತ್ತು ಗೋಲಾಘಾಟ್‌ ನಲ್ಲಿ 59 ಕುಟುಂಬಗಳು ತೆರವು ಕಾರ್ಯಾಚರಣೆಗೆ ಒಳಗಾಗಿದ್ದವು.

ದಶಕಗಳಿಂದ ವಾಸಿಸುತ್ತಿದ್ದ ಕುಟುಂಬಗಳು

ಲುತುಮಾರಿ ಪ್ರದೇಶದಲ್ಲಿ ಒಕ್ಕಲೆಬ್ಬಿಸಲ್ಪಟ್ಟ ಕುಟುಂಬಗಳು ಮೀಸಲು ಅರಣ್ಯದೊಳಗಿನ 300 ಹೆಕ್ಟೇರ್‌ಗಿಂತಲೂ ಹೆಚ್ಚು ಭೂಮಿಯಲ್ಲಿ ದಶಕಗಳಿಂದ ವಾಸಿಸುತ್ತಿದ್ದವು. ತಮ್ಮನ್ನು ಅತಿಕ್ರಮಣದಾರರು ಎಂದು ಪರಿಗಣಿಸಿರುವ ಆಡಳಿತದ ಆರೋಪವನ್ನು ನಿವಾಸಿಗಳು ತಳ್ಳಿಹಾಕಿದ್ದಾರೆ. ತಾವು ಅರಣ್ಯ ಇಲಾಖೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೆವು ಮತ್ತು ಸರಕಾರವೇ ತಮ್ಮನ್ನು ಈ ಪ್ರದೇಶದಲ್ಲಿ ನೆಲೆಗೊಳಿಸಿತ್ತು ಎಂದು ಅವರು ಹೇಳಿರುವುದಾಗಿ 'scroll' ವರದಿ ಮಾಡಿದೆ.

ಜೂನ್‌ನಲ್ಲಿ 'ಆಲ್ ಇಂಡಿಯಾ ಯೂನಿಯನ್ ಆಫ್ ಫಾರೆಸ್ಟ್ ವರ್ಕಿಂಗ್ ಪೀಪಲ್' ಸಂಘಟನೆಯು ಲುತುಮಾರಿ ಲಾಂಗ್‌ಜಾಪ್ ಮೀಸಲು ಅರಣ್ಯದಲ್ಲಿನ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಸರಕಾರದ ಯೋಜನೆಯನ್ನು ನಿಲ್ಲಿಸುವಂತೆ ಒತ್ತಾಯಿಸಿತ್ತು. ಅಲ್ಲಿನ ನಾಲ್ಕು ಗ್ರಾಮಗಳ ನಿವಾಸಿಗಳನ್ನು ವಸಾಹತುಶಾಹಿ ಕಾಲದ 'ಟೌಂಗ್ಯಾ' (Taungya) ಅರಣ್ಯ ನಿರ್ವಹಣಾ ವ್ಯವಸ್ಥೆಯಡಿ ನೆಲೆಗೊಳಿಸಲಾಗಿತ್ತು. ಹೀಗಾಗಿ, ಅವರನ್ನು ಸಾಮಾನ್ಯ ಅತಿಕ್ರಮಣದಾರರಂತೆ ಪರಿಗಣಿಸಬಾರದು ಎಂಬುದು ಸಂಘಟನೆಯ ವಾದವಾಗಿತ್ತು.

'ಸರಕಾರವೇ ನಮಗೆ ಭೂಮಿ ನೀಡಿತ್ತು'

"ಸರಕಾರವು 1974ರಲ್ಲಿ ನಮ್ಮನ್ನು ಇಲ್ಲಿ ನೆಲೆಗೊಳಿಸಿತು. ನಾವು ಮೂಲತಃ ಸಮೀಪದ ಜುರಿಯಾ ಪಟ್ಟಣದವರು. ನಮ್ಮ ಪೂರ್ವಜರಿಗೆ ಭೂಮಿ ಇಲ್ಲದ ಕಾರಣ ಸರಕಾರವೇ ನಮ್ಮನ್ನು ಇಲ್ಲಿ ನೆಲೆಗೊಳಿಸಿತು. ಭೂಮಿ ಇಲ್ಲದ ಒಟ್ಟು 300 ಕುಟುಂಬಗಳಿಗೆ ತಲಾ ನಾಲ್ಕು ಬಿಘಾ ಭೂಮಿಯನ್ನು ನೀಡಲಾಗಿತ್ತು" ಎಂದು ರವಿವಾರ ಮನೆ ಕಳೆದುಕೊಂಡ ಲುತುಮಾರಿಯ 44 ವರ್ಷದ ನಿವಾಸಿ ಅಬ್ದುಲ್ ನೂರ್ ಹೇಳಿದ್ದಾರೆ ಎಂದು ಸುದ್ದಿ ಜಾಲತಾಣವೊಂದು ವರದಿ ಮಾಡಿದೆ.

ಅಸ್ಸಾಂನಲ್ಲಿ ಅಂಚಿನಲ್ಲಿರುವ ಸಮುದಾಯಗಳನ್ನು, ವಿಶೇಷವಾಗಿ ಬಂಗಾಳಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಇಂತಹ ತೆರವು ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂಬ ಆರೋಪಗಳು ಈ ಘಟನೆಯೊಂದಿಗೆ ಮತ್ತೆ ಮುನ್ನೆಲೆಗೆ ಬಂದಿವೆ. ಇತ್ತೀಚಿನ ಕಾರ್ಯಾಚರಣೆಯು ನಿರ್ದಿಷ್ಟ ಸಮುದಾಯವೊಂದರ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಅಭಿಯಾನದ ಭಾಗವಾಗಿದೆ ಎಂದು ಆರೋಪಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor