Photo credit : indianexpress

ಸೋನಿಪತ್ : ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ದಾಳಿ ಪ್ರಕರಣದಲ್ಲಿ ಬಂಧಿತನಾಗಿರುವ ಹರಿಯಾಣದ ಯುವಕ ರೆಹಾನ್, 9ನೇ ತರಗತಿಯಲ್ಲೇ ಶಾಲೆ ತೊರೆದಿದ್ದ. ಈ ಹಿಂದೆ ಶಸ್ತ್ರಾಸ್ತ್ರ ಕಾಯಿದೆಯಡಿ ದಾಖಲಾದ ಪ್ರಕರಣವೊಂದರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದು ಆತನ ತಂದೆ ರೈಸುದ್ದೀನ್ ಅನ್ಸಾರಿ ಸೋಮವಾರ ತಿಳಿಸಿದ್ದಾರೆ.

ರಾಜಸ್ಥಾನದ ಕೋಟಾದಲ್ಲಿ ಪುಣೆ–ಜೈಪುರ ಸೂಪರ್‌ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಟೈಗರ್ ಶ್ರಾಫ್ ಅವರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾದ ಮೂವರು ಶಂಕಿತರಲ್ಲಿ ಸೋನಿಪತ್‌ನ ರೆಹಾನ್ ಕೂಡ ಒಬ್ಬ. ದಿನಗೂಲಿ ನೌಕರನಾಗಿರುವ ಅನ್ಸಾರಿ, 18–19 ವರ್ಷದ ರೆಹಾನ್ ಸೋನಿಪತ್ ಸಮೀಪದ ದೇವದು ಗ್ರಾಮದಲ್ಲಿ ತಾಯಿಯೊಂದಿಗೆ ವಾಸಿಸುತ್ತಿದ್ದ. ತನ್ನನ್ನು ಅಪರೂಪಕ್ಕೊಮ್ಮೆ ಮಾತ್ರ ಭೇಟಿಯಾಗುತ್ತಿದ್ದ ಎಂದು ಹೇಳಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆಯೇ ರೆಹಾನ್‌ ನ ತಾಯಿಯಿಂದ ತಾವು ಬೇರ್ಪಟ್ಟಿರುವುದಾಗಿ ತಿಳಿಸಿದ್ದಾರೆ.

ಸೋನಿಪತ್‌ ನಲ್ಲಿರುವ ತಮ್ಮ ಮನೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅನ್ಸಾರಿ, "ನನಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ರೆಹಾನ್ ಕಳೆದ ಹತ್ತು ವರ್ಷಗಳಿಂದ ನನ್ನೊಂದಿಗೆ ವಾಸಿಸುತ್ತಿಲ್ಲ. ನಾಲ್ಕೈದು ತಿಂಗಳ ಹಿಂದೆ ಬಂದೂಕಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಆತನ ವಿರುದ್ಧ ದೂರು ದಾಖಲಾಗಿತ್ತು. ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ಆತನ ತಾಯಿ, ಆತನಿಗೆ ಜಾಮೀನು ಕೊಡಿಸಿದ್ದರು" ಎಂದು ಹೇಳಿದ್ದಾರೆ.

ಹಿಂದಿನ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಮಗ ಭಾಗಿಯಾಗಲು ಆತನ ಸ್ನೇಹಿತರ ಬಳಗವೇ ಕಾರಣ ಎಂದು ಅನ್ಸಾರಿ ಆರೋಪಿಸಿದ್ದಾರೆ. ರೆಹಾನ್‌ ನಿಂದ ಬಂದೂಕೊಂದನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾರೆ. ಮಗನ ಬಂಧನದ ವಿಷಯವನ್ನು ಪತ್ನಿಯ ಮೂಲಕ ತಿಳಿದುಕೊಂಡಿದ್ದಾಗಿ ಹೇಳಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ರೆಹಾನ್ ಕೆಲವು ದಿನ ತಾಯಿಯೊಂದಿಗೆ ಇದ್ದ. ಆದರೆ, ನ್ಯಾಯಾಲಯದ ವಿಚಾರಣೆಯೊಂದಕ್ಕೆ ಮುನ್ನ ಅಲ್ಲಿಂದ ಹೊರಟುಹೋದ ಎಂದು ಅನ್ಸಾರಿ ತಿಳಿಸಿದ್ದಾರೆ.

"ರೆಹಾನ್‌ ನನ್ನು ನನ್ನ ಬಳಿ ಕಳುಹಿಸುವಂತೆ ಪತ್ನಿಗೆ ಹೇಳಿದ್ದೆ. ಆತನಿಗೆ ತಾಂತ್ರಿಕ ಕೆಲಸವೊಂದರಲ್ಲಿ ತರಬೇತಿ ನೀಡುವ ಉದ್ದೇಶವಿತ್ತು. ಆದರೆ, ಭಯದಿಂದಲೋ ಏನೋ, ಆತ ನನ್ನೊಂದಿಗೆ ವಾಸಿಸಲು ಬರಲಿಲ್ಲ" ಎಂದು ಹೇಳಿದ್ದಾರೆ.

ರೆಹಾನ್ ವೆಲ್ಡಿಂಗ್ ಕೆಲಸ ಕಲಿತಿದ್ದ. ಆಗಾಗ್ಗೆ ಗುರ್‌ ಗಾಂವ್‌ ನಲ್ಲಿ ವೆಲ್ಡರ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಡುತ್ತಿದ್ದ ಎಂದು ಅನ್ಸಾರಿ ತಿಳಿಸಿದ್ದಾರೆ.

ವಿದೇಶದಲ್ಲಿ ನೆಲೆಸುವ ಆಮಿಷವೊಡ್ಡಿ ದಾಳಿಗೆ ಪ್ರೇರಣೆ: ಪೊಲೀಸರು 

ಮುಂಬೈನಲ್ಲಿ ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಮೂವರಿಗೆ ಉತ್ತಮ ಹಣ ನೀಡುವುದಾಗಿ ಮತ್ತು ವಿದೇಶದಲ್ಲಿ ನೆಲೆಸಲು ನೆರವಾಗುವುದಾಗಿ ಭರವಸೆ ನೀಡಿ ಪ್ರೇರೇಪಿಸಲಾಗಿತ್ತು ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.

ಬಂಧಿತರಲ್ಲಿ ರೆಹಾನ್ ಅಲ್ಲದೆ, ಬಿಹಾರದ ಹೃತಿಕ್ ಎಂಬಾತನನ್ನೂ ಗುರುತಿಸಲಾಗಿದೆ. ಮೂರನೇ ಆರೋಪಿ ಅಪ್ರಾಪ್ತನಾಗಿರುವುದರಿಂದ ಆತನ ಗುರುತನ್ನು ಬಹಿರಂಗಪಡಿಸಲಾಗಿಲ್ಲ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಗಾಗಿ ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಕಾರ್ಯಾಚರಣೆ ನಡೆಸುತ್ತಿರುವ ಪಾಣಿಪತ್ ಮೂಲದ ಅನಿಲ್ ಪಂಡಿತ್ ಎಂಬಾತನ ಹೆಸರನ್ನೂ ಪೊಲೀಸರು ಉಲ್ಲೇಖಿಸಿದ್ದಾರೆ. ಈತನೇ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor