×
Ad

ಬದರಿನಾಥ ದೇಣಿಗೆ ವಿವಾದ | ಆಪ್ತ ಸಹಾಯಕನನ್ನು ಅಮಾನತುಗೊಳಿಸಿದ ದೇವಸ್ಥಾನ ಸಮಿತಿ

Update: 2026-07-08 21:10 IST

ಪ್ರಮೋದ್ ನೌಟಿಯಾಲ | Photo Credit : indiatoday.in

ಡೆಹ್ರಾಡೂನ್, ಜು. 8: ಪ್ರಸಿದ್ಧ ಬದರಿನಾಥ ಧಾಮದಲ್ಲಿ ದೇಣಿಗೆ ಮತ್ತು ಕಾಣಿಕೆಗಳ ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿ (ಬಿಕೆಟಿಸಿ) ತನ್ನ ಆಪ್ತ ಸಹಾಯಕ ಪ್ರಮೋದ್ ನೌಟಿಯಾಲ ಅವರನ್ನು ಅಮಾನತುಗೊಳಿಸಿದೆ.

ಅಧಿಕೃತ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಗಂಭೀರ ಲೋಪಗಳು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಮಿತಿಯು ಈ ವಿಷಯದ ಕುರಿತು ತನ್ನ ಇಲಾಖಾ ತನಿಖೆಯನ್ನು ಚುರುಕುಗೊಳಿಸಿದೆ.

ಬಿಕೆಟಿಸಿ ಹೊರಡಿಸಿದ ಆದೇಶದ ಪ್ರಕಾರ, ‘‘ಅಧಿಕೃತ ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರ ಅಕ್ರಮಗಳು ನಡೆದಿವೆ’’ ಎಂಬ ಆರೋಪಗಳು ಕೇಳಿ ಬಂದ ನಂತರ ಜುಲೈ 3ರಂದು ನೌಟಿಯಾಲ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು. ಅನಂತರ ನಿಷ್ಪಕ್ಷಪಾತ ಮತ್ತು ವಿಸ್ತೃತ ತನಿಖೆ ನಡೆಸಲು ನಾಲ್ಕು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಯಿತು.

ನೌಟಿಯಾಲ ಅವರ ಪ್ರತಿಕ್ರಿಯೆ ಮತ್ತು ತನಿಖಾ ಸಮಿತಿ ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಪರಿಶೀಲಿಸಿದ ಬಳಿಕ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿವೆ ಎಂದು ತಿಳಿದು ಬಂತು. ತನಿಖಾ ಸಮಿತಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಶಿಫಾರಸು ಮಾಡಿತ್ತು.

ನೌಟಿಯಾಲ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿದರೆ ಅದು ನಿಷ್ಪಕ್ಷಪಾತ ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಬಿಕೆಟಿಸಿ ಆದೇಶದಲ್ಲಿ ತಿಳಿಸಿದೆ. ತನಿಖೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮೋದ್ ನೌಟಿಯಾಲ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಅಮಾನತು ಅವಧಿಯಲ್ಲಿ, ತನಿಖೆ ಪೂರ್ಣಗೊಳ್ಳುವ ವರೆಗೆ ನೌಟಿಯಾಲ ಅವರನ್ನು ಜ್ಯೋತಿರ್ಮಠದಲ್ಲಿರುವ ಬಿಕೆಟಿಸಿ ಕಚೇರಿಗೆ ನಿಯೋಜಿಸಲಾಗಿದೆ.

ಉತ್ತರಾಖಂಡ ಸರಕಾರದಿಂದ ಉನ್ನತ ಮಟ್ಟದ ಸಮಿತಿ ರಚನೆ

ಈ ಪ್ರಕರಣ ಉತ್ತರಾಖಂಡ ಸರಕಾರದ ಗಮನವನ್ನೂ ಸೆಳೆದಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನಿರ್ದೇಶನದ ಮೇರೆಗೆ ಬದರಿನಾಥ ಧಾಮದಲ್ಲಿ ದೇಣಿಗೆ ಮತ್ತು ಕಾಣಿಕೆಗಳಿಗೆ ಸಂಬಂಧಿಸಿದ ಅಕ್ರಮಗಳ ಆರೋಪಗಳನ್ನು ಪರಿಶೀಲಿಸಲು ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. 15 ದಿನಗಳ ಒಳಗಾಗಿ ಸರಕಾರಕ್ಕೆ ವರದಿ ಮತ್ತು ಶಿಫಾರಸುಗಳನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ಪ್ರವಾಸೋದ್ಯಮ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಭಿಯಾಲ್ ಹೊರಡಿಸಿದ ಆದೇಶದಲ್ಲಿ ದೇವಸ್ಥಾನದಲ್ಲಿ ಸ್ವೀಕರಿಸಿದ ದೇಣಿಗಳು ಮತ್ತು ಅವುಗಳ ನಿರ್ವಹಣೆಯ ವಿವಿಧ ಆಯಾಮಗಳ ಕುರಿತು ಸಮಿತಿ ವಿವರವಾದ ತನಿಖೆ ನಡೆಸಲಿದೆ. ಇತ್ತೀಚೆಗಿನ ದೂರುಗಳು ಮತ್ತು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ನಿಷ್ಪಕ್ಷಪಾತ ಮತ್ತು ಸತ್ಯ ಆಧಾರಿತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸರಕಾರ ಈ ನಿರ್ಧಾರ ತೆಗೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News