×
Ad

'ಇಂದು ರಾತ್ರಿ ಕಠಿಣ ದಾಳಿ ನಡೆಸುತ್ತೇವೆ': ಇರಾನ್‌ ಗೆ ಟ್ರಂಪ್ ಎಚ್ಚರಿಕೆ

ಕದನ ವಿರಾಮ ಮುಗಿದಿದೆ ಎಂದ ಅಮೆರಿಕದ ಅಧ್ಯಕ್ಷ; ಮತ್ತಷ್ಟು ಮಿಲಿಟರಿ ದಾಳಿ ಸುಳಿವು | ಒಪ್ಪಂದ ಉಲ್ಲಂಘಿಸಿದೆ ಎಂದು ಟೆಹ್ರಾನ್ ಆರೋಪ

Update: 2026-07-08 22:54 IST

ಡೊನಾಲ್ಡ್ ಟ್ರಂಪ್ | Photo Credit : PTI

ವಾಷಿಂಗ್ಟನ್: ಅಮೆರಿಕ–ಇರಾನ್ ನಡುವಿನ ಕದನ ವಿರಾಮ ಪರಿಣಾಮಕಾರಿಯಾಗಿ ಅಂತ್ಯಗೊಂಡಿದೆ ಎಂದು ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಬುಧವಾರ ರಾತ್ರಿ ಮತ್ತಷ್ಟು ಸೇನಾ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಟರ್ಕಿಯಲ್ಲಿ ನಡೆದ NATO ಶೃಂಗಸಭೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಒಂದು ಸಣ್ಣ ಎಚ್ಚರಿಕೆ ನೀಡುತ್ತೇನೆ. ನಾವು ಇಂದು ರಾತ್ರಿ ಅವರ ಮೇಲೆ ಕಠಿಣ ದಾಳಿ ನಡೆಸಲಿದ್ದೇವೆ" ಎಂದು ಹೇಳಿದರು.

ಇರಾನ್‌ ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ರಾಡಾರ್ ಕೇಂದ್ರಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಹಾಗೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ಗೆ ಸೇರಿದ ಸುಮಾರು 60 ಹಡಗುಗಳು ಸೇರಿದಂತೆ ದೇಶದಾದ್ಯಂತ 80ಕ್ಕೂ ಹೆಚ್ಚು ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

ಅಮೆರಿಕ–ಇರಾನ್ ಕದನ ವಿರಾಮದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, "ರಾತ್ರಿಯ ಕಾರ್ಯಾಚರಣೆಯಲ್ಲಿ ನಮ್ಮ ಪಡೆಗಳು 28 ದೋಣಿಗಳನ್ನು ಹೊಡೆದುರುಳಿಸಿವೆ. ಅಗತ್ಯವಿದ್ದರೆ ಇನ್ನಷ್ಟು ಇರಾನಿನ ಹಡಗುಗಳನ್ನು ನಾಶಪಡಿಸುತ್ತೇವೆ" ಎಂದು ಹೇಳಿದರು.

ಸೇನಾ ಗುರಿಗಳಷ್ಟೇ ಅಲ್ಲದೆ, ಇರಾನ್‌ನ ವಿದ್ಯುತ್ ಜಾಲ ಮತ್ತು ನೀರು ಸರಬರಾಜು ವ್ಯವಸ್ಥೆಗಳ ಮೇಲೂ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ಆದರೆ ಅಂತಹ ಕ್ರಮದ ಅಗತ್ಯ ಬರದಿರಲಿ ಎಂದು ಆಶಿಸುವುದಾಗಿ ತಿಳಿಸಿದರು.

ಇರಾನ್‌ ನ ಪ್ರಮುಖ ತೈಲ ರಫ್ತು ಕೇಂದ್ರವಾದ ಖಾರ್ಗ್ ದ್ವೀಪವನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಬಹುದು ಎಂದೂ ಟ್ರಂಪ್ ಹೇಳಿದರು. ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕ ದಿಗ್ಬಂಧನವನ್ನು ಮರುಸ್ಥಾಪಿಸುವ ಸಾಧ್ಯತೆ ಇದೆ. ಅಲ್ಲದೆ, ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ ಈ ಜಲಮಾರ್ಗದ ಭದ್ರತೆಗಾಗಿ NATO ಸದಸ್ಯ ರಾಷ್ಟ್ರಗಳು ಮೈನ್‌ಸ್ವೀಪರ್ ಹಡಗುಗಳನ್ನು ನಿಯೋಜಿಸಬಹುದು ಎಂದರು.

►CENTCOM ಹೇಳಿದ್ದೇನು?

ಹಾರ್ಮುಝ್ ಜಲಸಂಧಿಯ ಸಮೀಪ ಕಾರ್ಯನಿರ್ವಹಿಸುತ್ತಿದ್ದ ಇರಾನ್‌ನ ವಾಯು ರಕ್ಷಣಾ ವ್ಯವಸ್ಥೆಗಳು, ಕರಾವಳಿ ರಾಡಾರ್ ಕೇಂದ್ರಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಹಾಗೂ IRGCಗೆ ಸೇರಿದ ಸುಮಾರು 60 ಹಡಗುಗಳ ಮೇಲೆ ಹೊಸ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ.

ಹಾರ್ಮುಝ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಮೂರು ವಾಣಿಜ್ಯ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತೀಕಾರ ಕ್ರಮವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ.

►'ಒಪ್ಪಂದ ಮುಗಿದಿದೆ'

ಕೇವಲ ಮೂರು ವಾರಗಳ ಹಿಂದೆ ಯುದ್ಧವನ್ನು ತಡೆಯುವ ಉದ್ದೇಶದಿಂದ ಮಾಡಿಕೊಂಡಿದ್ದ ತಿಳುವಳಿಕೆ ಒಪ್ಪಂದ (MoU) ಈಗ ಪರಿಣಾಮಕಾರಿಯಾಗಿ ಅಂತ್ಯಗೊಂಡಿದೆ ಎಂದು ಟ್ರಂಪ್ ಘೋಷಿಸಿದರು.

"ನನ್ನ ಮಟ್ಟಿಗೆ ಆ ಒಪ್ಪಂದ ಮುಗಿದಿದೆ. ಅವರೊಂದಿಗೆ ಇನ್ನು ಮುಂದೆ ವ್ಯವಹರಿಸಲು ಬಯಸುವುದಿಲ್ಲ" ಎಂದು ಅವರು ಹೇಳಿದರು. ಆದರೂ ಮಾತುಕತೆಗಳು ಮುಂದುವರಿಯುವ ಸಾಧ್ಯತೆಯನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಲಿಲ್ಲ.

"ನಾನು ನಮ್ಮ ಸಂಧಾನಕಾರರೊಂದಿಗೆ ಮಾತನಾಡುತ್ತೇನೆ. ಆದರೆ ನನ್ನ ಮಟ್ಟಿಗೆ ಅವರೊಂದಿಗೆ ವ್ಯವಹರಿಸುವುದು ಸಮಯ ವ್ಯರ್ಥ. ಅವರು ಸುಳ್ಳುಗಾರರು" ಎಂದು ಹೇಳಿದರು.

►ಇರಾನ್ ವಿರುದ್ಧ ವಾಗ್ದಾಳಿ

ಇರಾನ್ ಆಡಳಿತದ ವಿರುದ್ಧವೂ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದರು.

"ಅವರು ಕೊಳಕರು, ಅನಾರೋಗ್ಯಪೀಡಿತರು. ಅವರು ದುಷ್ಟರು, ಹಿಂಸಾತ್ಮಕ ಜನರು. ಅವರ ಬಳಿ ಪರಮಾಣು ಶಸ್ತ್ರಾಸ್ತ್ರ ಇದ್ದರೆ ಅದನ್ನು ಬಳಸುತ್ತಿದ್ದರು" ಎಂದು ಆರೋಪಿಸಿದರು.

►'ಕದನ ವಿರಾಮ ಉಲ್ಲಂಘಿಸಿದೆ' ಎಂದ ಟೆಹ್ರಾನ್

ಅಮೆರಿಕದ ಕ್ರಮಕ್ಕೆ ಪ್ರತಿಕ್ರಿಯಿಸಿದ ಇರಾನ್, ಮಿಲಿಟರಿ ಹಾಗೂ ಆರ್ಥಿಕ ಕ್ರಮಗಳ ಮೂಲಕ ಕದನ ವಿರಾಮದ ತಿಳುವಳಿಕೆಯನ್ನು ಅಮೆರಿಕ ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ 'ಎಕ್ಸ್‌'ನಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ, ದಕ್ಷಿಣ ಕರಾವಳಿಯ ಮೇಲ್ವಿಚಾರಣೆ ಮತ್ತು ಕಣ್ಗಾವಲು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಗಳು ಮಧ್ಯಂತರ ಒಪ್ಪಂದದಡಿ ನೀಡಿದ್ದ ಭರವಸೆಗಳಿಗೆ ವಿರುದ್ಧವಾಗಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮಾರಾಟಕ್ಕೆ ಇರಾನ್‌ ಗೆ ನೀಡಲಾಗಿದ್ದ 60 ದಿನಗಳ ಪರವಾನಗಿಯನ್ನು ಅಮೆರಿಕ ಖಜಾನೆ ಇಲಾಖೆ ರದ್ದುಗೊಳಿಸಿರುವುದನ್ನೂ ಟೆಹ್ರಾನ್ ಟೀಕಿಸಿದೆ. ಕದನ ವಿರಾಮದಡಿ ತನ್ನ ಬಾಧ್ಯತೆಗಳನ್ನು ಅಮೆರಿಕ ಪಾಲಿಸಿಲ್ಲ ಎಂದು ಅದು ಆರೋಪಿಸಿದೆ.

ಮಿಲಿಟರಿ ಕ್ರಮ ಮತ್ತು ಆರ್ಥಿಕ ಒತ್ತಡದ ಸಂಯೋಜನೆಯು ಹಾರ್ಮುಝ್ ಜಲಸಂಧಿಯ ಸಂಚಾರ ಹಾಗೂ ಭದ್ರತೆ ಕುರಿತ ತಿಳುವಳಿಕೆಯನ್ನು ಉಲ್ಲಂಘಿಸಿದೆ ಎಂದು ಸಚಿವಾಲಯ ಹೇಳಿದೆ.

ಲೆಬನಾನ್‌ ನಲ್ಲಿ ಇಸ್ರೇಲ್ ಮುಂದುವರಿಸುತ್ತಿರುವ ಸೇನಾ ಕಾರ್ಯಾಚರಣೆಗಳು ಕದನ ವಿರಾಮ ಚೌಕಟ್ಟಿನ ಪ್ರಮುಖ ಅಂಶಗಳನ್ನು ದುರ್ಬಲಗೊಳಿಸಿವೆ. ಇತ್ತೀಚಿನ ಉದ್ವಿಗ್ನತೆಗೆ ಅಮೆರಿಕ ಮತ್ತು ಇಸ್ರೇಲ್ ಕಾರಣ ಎಂದು ಕೂಡ ಇರಾನ್ ಆರೋಪಿಸಿದೆ.

►ಅಮೆರಿಕದ ಸಮರ್ಥನೆ

ಹಾರ್ಮುಝ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಮೂರು ವಾಣಿಜ್ಯ ಹಡಗುಗಳನ್ನು ಇರಾನ್ ಗುರಿಯಾಗಿಸಿಕೊಂಡ ಹಿನ್ನೆಲೆಯಲ್ಲಿ ಈ ದಾಳಿಗಳು ಅನಿವಾರ್ಯವಾಗಿದ್ದವು ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸಮರ್ಥಿಸಿಕೊಂಡಿದೆ. ಅಂತಾರಾಷ್ಟ್ರೀಯ ಸಾಗಣೆಗೆ ಇರಾನ್ ಒಡ್ಡುತ್ತಿರುವ ಬೆದರಿಕೆಯನ್ನು ತಡೆಯುವುದೇ ಕಾರ್ಯಾಚರಣೆಯ ಉದ್ದೇಶ ಎಂದು ಅದು ಹೇಳಿದೆ.

"ಒಪ್ಪಂದ ಪಾಲನೆಯಾಗದಿದ್ದರೆ CENTCOM ಪಡೆಗಳು ಸಜ್ಜಾಗಿರುತ್ತವೆ. ಇರಾನ್ ಅನ್ನು ಹೊಣೆಗಾರರನ್ನಾಗಿಸಲು ನಾವು ಸಿದ್ಧರಾಗಿದ್ದೇವೆ" ಎಂದು ತಿಳಿಸಿದೆ.

►ಸ್ಫೋಟಗಳು, ಎಚ್ಚರಿಕೆ

ದಾಳಿಯ ಬಳಿಕ ಬಂದರ್ ಅಬ್ಬಾಸ್, ಸಿರಿಕ್ ಹಾಗೂ ಕೆಶ್ಮ್ ದ್ವೀಪಗಳಲ್ಲಿ ಹಲವು ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಬಳಿಕ ಟ್ರಂಪ್, ಬಂದರ್ ಅಬ್ಬಾಸ್‌ ನಲ್ಲಿ ಸಂಭವಿಸಿದ ಸ್ಫೋಟಗಳೆಂದು ಹೇಳಲಾದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು.

ಇದೇ ವೇಳೆ, ಪರ್ಷಿಯನ್ ಕೊಲ್ಲಿಯ ತೀರದಲ್ಲಿರುವ ನೆರೆಯ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿರುವ ಇರಾನ್, ಅಮೆರಿಕ ಅಥವಾ ಅದರ ಮಿತ್ರ ರಾಷ್ಟ್ರಗಳು ತಮ್ಮ ಪ್ರದೇಶ ಅಥವಾ ಸೇನಾ ತಾಣಗಳನ್ನು ಇರಾನ್ ವಿರುದ್ಧದ ಕಾರ್ಯಾಚರಣೆಗೆ ಬಳಸಲು ಅವಕಾಶ ನೀಡಬಾರದು ಎಂದು ತಿಳಿಸಿದೆ.

ಇರಾನ್ ವಿರುದ್ಧದ ದಾಳಿಗೆ ನೆರವಾಗುವ ಯಾವುದೇ ದೇಶವನ್ನು ಆಕ್ರಮಣದಲ್ಲಿ ಭಾಗಿಯಾಗಿರುವ ರಾಷ್ಟ್ರವೆಂದು ಪರಿಗಣಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ವಿಶ್ವಸಂಸ್ಥೆಯ ಚಾರ್ಟರ್‌ ನ 51ನೇ ವಿಧಿಯಡಿ ತನ್ನ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವ ಹಕ್ಕು ಇರಾನ್‌ ಗೆ ಇದೆ ಎಂದು ಪುನರುಚ್ಚರಿಸಿರುವ ಸಚಿವಾಲಯ, "ಯಾವುದೇ ಆಕ್ರಮಣಕಾರಿ ಕೃತ್ಯದ ಮೂಲ ಹಾಗೂ ಹೊಣೆಗಾರರನ್ನು ಗುರಿಯಾಗಿಸಲು ನಮ್ಮ ಸಶಸ್ತ್ರ ಪಡೆಗಳು ಹಿಂಜರಿಯುವುದಿಲ್ಲ" ಎಂದು ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News